ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ಪುನಶ್ಚೇತನದ ನಿರೀಕ್ಷೆಯಲ್ಲಿ ಜಂಬರಮಠ ಕೆರೆ

ನಿರ್ವಹಣೆಗೆ ಪುರಸಭೆಯ ನಿರ್ಲಕ್ಷ್ಯ: ತುಂಬಿಕೊಂಡಿರುವ ಹೂಳು
Published 14 ಮಾರ್ಚ್ 2024, 4:40 IST
Last Updated 14 ಮಾರ್ಚ್ 2024, 4:40 IST
ಅಕ್ಷರ ಗಾತ್ರ

ಭಟ್ಕಳ: ಪಟ್ಟಣದ ಸೋನಾರಕೇರಿ, ಆಸರಕೇರಿ, ಬಂದರ ರಸ್ತೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜಲವೃದ್ದಿಗೆ ಕಾರಣವಾಗಿರುವ ಜಂಬರಮಠದಲ್ಲಿರುವ ಜಂಬರಮಠ ಕೆರೆ ಹೂಳು ತುಂಬಿಕೊಂಡಿದ್ದು ಪುನಶ್ಚೇತನಕ್ಕಾಗಿ ಕಾಯುತ್ತಿದೆ.

ಜಂಬರಮಠದಲ್ಲಿರುವ ಕೆರೆಗೆ ಶತಮಾನಗಳ ಇತಿಹಾಸವಿದೆ. ಜೈನರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾಗಿರುವ ಕೆರೆ ಇದಾಗಿದೆ. ಕೋಕ್ತಿ ಕೆರೆ ಬಿಟ್ಟರೆ  ಪಟ್ಟಣದಲ್ಲಿರುವ ಎರಡನೇ ಅತಿದೊಡ್ಡ ಕೆರೆ ಇದಾಗಿದೆ. ಸದಾ ನೀರಿನಿಂದ ಕೂಡಿರುವ ಈ ಕೆರೆಯಲ್ಲಿ ಮೇ ತಿಂಗಳಿನ ಕೊನೆಯಲ್ಲಿಯೂ ಆರರಿಂದ ಏಳು ಅಡಿ ನೀರು ಸಂಗ್ರಹಣೆಯಾಗಿರುತ್ತದೆ ಎನ್ನುತ್ತಾರೆ ಸ್ಥಳೀಯರು.

‘ಜಂಬರಮಠ ಕೆರೆಯ ನೀರು ಬೆಳೆಸಿ ಹತ್ತಾರು ಎಕರೆ ಭೂಮಿಯಲ್ಲಿ ಬೇಸಾಯ ಮಾಡಲಾಗುತ್ತದೆ. ಆದರೆ, ಈಚಿನ ವರ್ಷದಲ್ಲಿ ಕೆರೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಹೂಳು ತೆರವುಗೊಳಿಸಿ ಕೆರೆ ಪುನಶ್ಚೇತನಗೊಳಿಸಿದರೆ ಸುತ್ತಮುತ್ತಲಿನ ಪ್ರದೇಶಕ್ಕೆ ನೀರು ಸಿಗುವ ಜತೆಗೆ ಅಂತರ್ಜಲ ಪ್ರಮಾಣವೂ ವೃದ್ಧಿಯಾಗುತ್ತದೆ’ ಎಂದೂ ಇಲ್ಲಿನ ಜನರು ಹೇಳುತ್ತಾರೆ.

‘ಪಟ್ಟಣದ ಹೃದಯಭಾಗದಲ್ಲಿರುವ ಕೆರೆಯ ಅಭಿವೃದ್ದಿಗೆ ಪುರಸಭೆ ಆಸಕ್ತಿ ತೋರುತ್ತಿಲ್ಲ. ಕೆರೆಯ ಬಗ್ಗೆ ಒಮ್ಮೆಯೂ ಪುರಸಭೆಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ಮಾಡಿಲ್ಲ. ಕೆರೆಯ ತುಂಬ ಹೂಳು ತುಂಬಿಕೊಂಡಿದ್ದು, ಪಾಚಿ ಬೆಳೆದುಕೊಂಡಿದೆ. ಸುತ್ತಮುತ್ತಲಿನ ಗ್ರಾಮದ ಜೀವಜಲವಾದ ಈ ಕೆರೆಯನ್ನು ಪಾಳು ಬಿಟ್ಟರೆ ಬರದ ಸ್ಥಿತಿ ತಲೆದೋರಬಹುದು’ ಎನ್ನುತ್ತಾರೆ ಸ್ಥಳೀಯ ನಿವಾಸಿ ವೆಂಕಟೇಶ ಮೊಗೇರ.

‘ಉತ್ತಮ ಅಂತರ್ಜಲ ಮಟ್ಟ ಇರುವ ಕಾರಣ ಬಿರುಬೇಸಿಗೆಯಲ್ಲಿಯೂ ಈ ಕೆರೆಯಲ್ಲಿ ನೀರಿನ ಕೊರತೆ ಕಾಣುವುದಿಲ್ಲ. ಹೂಳು ತೆಗೆಸಿ ಕೆರೆಯ ಸುತ್ತ ಕಟ್ಟೆ ಕಟ್ಟಿ ಅಭಿವೃದ್ದಿಪಡಿಸಿದರೆ ಸುತ್ತಮುತ್ತಲಿನ ಗ್ರಾಮದವರಿಗೆ ನಲ್ಲಿ ಸಂಪರ್ಕದ ಮೂಲಕ ಶುದ್ದ ನೀರು ನೀಡಬಹುದಾಗಿದೆ. ಪಟ್ಟಣದ ವಾಸಿಗಳಿಗೆ ಪುರಸಭೆಯಿಂದ ಕಡವಿನಕಟ್ಟಾ ನದಿಯ ನೀರನ್ನು ಶುದ್ದಿಕರಿಸಿ ಪೂರೈಸಲಾಗುತ್ತದೆ. ಒಮ್ಮೊಮ್ಮೆ ನದಿಯ ನೀರು ಕಡಿಮೆಯಾದಾಗ ಜನರು ನೀರಿಗಾಗಿ ಪರಿತಪಿಸುವುದು ಸಾಮಾನ್ಯವಾಗಿದ್ದು, ಇಂತಹ ಕೆರೆಯನ್ನು ಅಭಿವೃದ್ಧಿಪಡಿಸಿದರೆ ನೀರಿನ ಸಮಸ್ಯೆ ನೀಗಿಸಬಹುದು’ ಎಂಬುದು ಪುರಸಭೆ ಮಾಜಿ ಸದಸ್ಯ ವೆಂಕಟೇಶ ನಾಯ್ಕ ಅಭಿಪ್ರಾಯ.

ಹೂಳು ಪಾಚಿ ತುಂಬಿಕೊಂಡಿರುವ ಜಂಬರಮಠ ಕೆರೆ
ಹೂಳು ಪಾಚಿ ತುಂಬಿಕೊಂಡಿರುವ ಜಂಬರಮಠ ಕೆರೆ

ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಲ ನಗರ 2.0 ಯೋಜನೆಯಡಿ ಕೆರೆ ಅಭಿವೃದ್ದಿ ಮಾಡಲು ಅವಕಾಶ ಇದೆ. ಈ ಬಗ್ಗೆ ನೀಲ ನಕ್ಷೆ ರೂಪಿಸಲು ಸಂಬಂಧಪಟ್ಟ ಎಂಜಿನಿಯರ್ ಗೆ ಸೂಚಿಸಲಾಗುವುದು

-ಎನ್.ಎಂ.ಮೇಸ್ತ ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT