ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ | ನೆರೆ, ಉಪ್ಪು ನೀರಿನಿಂದ ‘ಕಗ್ಗ‘ ಭತ್ತಕ್ಕೆ ಹಾನಿ

Published 2 ಸೆಪ್ಟೆಂಬರ್ 2023, 4:50 IST
Last Updated 2 ಸೆಪ್ಟೆಂಬರ್ 2023, 4:50 IST
ಅಕ್ಷರ ಗಾತ್ರ

ಎಂ.ಜಿ.ನಾಯ್ಕ

ಕುಮಟಾ: ತಾಲ್ಲೂಕಿನ ಮಾಣಿಕಟ್ಟಾ ಅಘನಾಶಿನಿ ಹಿನ್ನೀರು ಕಗ್ಗ ಭತ್ತ ಗಜನಿ ಆರಂಭದಲ್ಲಿ ನೆರೆಯಿಂದ ಹಾಗೂ ಈಗ ಉಪ್ಪು ನೀರಿನಿಂದ ಹಾನಿಗೊಳಗಾಗಿ ಬೀಜ ಸಂಗ್ರಹಣೆಯೂ ಸಾಧ್ಯವಿಲ್ಲದಂಥ ಸ್ಥಿತಿ ಉಂಟಾಗಿದೆ.

ನಶಿಸುತ್ತಿರುವ ಕಗ್ಗ ಭತ್ತ ತಳಿ ಉಳಿಸುವ ಉದ್ದೇಶದಿಂದ ಕಳೆದ ಹತ್ತಾರು ವರ್ಷಗಳಿಂದ ಮಾಣಿಕಟ್ಟಾ ಕಗ್ಗ ಬೆಳೆಗಾರರ ಸಂಘದವರು ಸಾಮೂಹಿಕ ಹಾಗೂ ಕಡ್ಡಾಯವಾಗಿ ಕಗ್ಗ ಭತ್ತ ಕೃಷಿ ನಡೆಸುತ್ತಿದ್ದಾರೆ. ಕಗ್ಗ ಕೃಷಿ ಕೈಕೊಳ್ಳಲು ಮುಂದೆ ಬಾರದವರಿಗೆ ಸಂಘದಿಂದ ₹1 ಸಾವಿರ ದಂಡ ವಿಧಿಸುವ ಪದ್ಧತಿ ಕೂಡ ಇದೆ.

ಪ್ರಸಕ್ತ ವರ್ಷ ಸುಮಾರು 25 ಎಕರೆ ಗಜನಿ ಭೂಮಿಯಲ್ಲಿ 10 ಕ್ವಿಂಟಾಲ್ ಕಗ್ಗ ಭತ್ತ ಬಿತ್ತನೆ ಮಾಡಲಾಗಿತ್ತು. ಆದರೆ ಜುಲೈ ತಿಂಗಳಿನಲ್ಲಿ ಭಾರಿ ಪ್ರಮಾಣದಲ್ಲಿ ಸುರಿದ ಮಳೆಗೆ ಗದ್ದೆ ಹಲವು ದಿನಗಳವರೆಗೆ ಜಲಾವೃತಗೊಂಡಿತ್ತು. ಬಳಿಕ ಮಳೆ ಇಳಿಕೆಯಾಗಿದ್ದರಿಂದ ಉಪ್ಪುನೀರು ನುಗ್ಗುವ ಪ್ರಮಾಣವೂ ಅಧಿಕವಾಗಿದೆ. ಹೀಗಾಗಿ ಭತ್ತ ಬೆಳವಣಿಗೆಗೆ ಪೂರಕ ವಾತಾವರಣವೇ ಇಲ್ಲದಂತಾಗಿದೆ.

ಪ್ರತಿ ಬಾರಿ ಕಗ್ಗ ಭತ್ತ ಉಳಿಸಿಕೊಳ್ಳಲು ಸಾಕಷ್ಟು ಶ್ರಮಪಡುತ್ತೇವೆ. ಪ್ರಾಕೃತಿಕ ವಿಕೋಪದ ಕಾರಣಕ್ಕೆ ಈ ಬಾರಿ ಕಗ್ಗ ಭತ್ತದ ಬೀಜ ಸಂಗ್ರಹಕ್ಕೂ ಕಷ್ಟವಿದೆ.
ಶ್ರೀಧರ ಪೈ, ಕಗ್ಗ ಬತ್ತ ಬೆಳೆಗಾರರ ಸಂಘದ ಕಾರ್ಯದರ್ಶಿ

‘ಕಳೆದ ವರ್ಷ ಗಜನಿಯ ನೆರೆಯ ಗದ್ದೆಯಲ್ಲಿ ಬೆಳೆದ ಕಗ್ಗ ಭತ್ತ ಬೀಜವನ್ನು ಕಿಲೋಗೆ ₹26 ರಂತೆ ಖರೀದಿಸಿ ಬಿತ್ತನೆ ಮಾಡಿದ್ದೇವು. ಕಳೆದ ವರ್ಷ ಭತ್ತದ ಕಾಳುಗಳು ಗಟ್ಟಿಯಾಗುವಾಗ ನೀರು ಕಾಗೆಗಳು ತಿಂದು ಹಾಕಿ ಬೆಳೆ ಹಾನಿಯಾಗಿತ್ತು. ಈ ಬಾರಿ ಬಿತ್ತನೆ ಮಾಡಿದ ಕೆಲ ದಿನದಲ್ಲಿಯೇ ನೆರೆಗೆ ತುತ್ತಾಗಿತ್ತು. ಈಗ ಉಪ್ಪು ನೀರು ನುಗ್ಗುತ್ತಿದೆ’ ಎಂದು ಮಾಣಿಕಟ್ಟಾ ಕಗ್ಗ ಬತ್ತ ಬೆಳೆಗಾರರ ಸಂಘದ ಕಾರ್ಯದರ್ಶಿ ಶ್ರೀಧರ ಪೈ ಸಮಸ್ಯೆ ಹೇಳಿಕೊಂಡರು.

‘ಬಿತ್ತನೆ ಮಾಡಿದ ಮೊಳಕೆ ಬೀಜ ಕಾಲೂರುವ ಮುನ್ನವೇ ನೆರೆ ಬಂದು ಕೊಳೆತು ಹೋಗಿತ್ತು. ಅಳಿದುಳಿದ ಸಸಿಗಳು ಚೇತರಿಸಿಕೊಂಡು ಮೇಲೇಳುವ ಮುನ್ನವೇ ಮಳೆ ನಿಂತು ಉಪ್ಪು ನೀರು ನುಗ್ಗಿ ಹಾನಿಯುಂಟಾಗಿದೆ. ಭತ್ತ ತೆನೆ ಕಟಾವು ಕೂಡ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಗ್ಗ ಭತ್ತ ಸಸಿಗಳು ಮೇಲೆದ್ದ ಮೇಲೆ ಗಜನಿಗೆ ಉಪ್ಪು ನೀರು ನುಗ್ಗಿದ್ದರೂ ಅದನ್ನು ತಡೆದುಕೊಂಡು ಬೆಳೆಯುವ ಶಕ್ತಿ ಅವುಗಳಿಗೆ ಇರುತ್ತಿತ್ತು’ ಎಂದು ಸಂಘದ ಸದಸ್ಯ ಮಂಜು ಪಟಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT