ಕಾರವಾರ: ಅರಬ್ಬಿ ಸಮುದ್ರ, ಸಹ್ಯಾದ್ರಿಯ ಸಾಲುಗಳಿದ್ದರೂ ಕಾರವಾರವನ್ನು ಚಿತ್ರಗಳಲ್ಲಿ ಪ್ರತಿನಿಧಿಸುತ್ತಿದ್ದ 41 ವರ್ಷ ವಯಸ್ಸಿನ ‘ಕಾಳಿ ಸೇತುವೆ’ ಮಂಗಳವಾರ ತಡರಾತ್ರಿ ಸಾವು, ನೋವು ತರದೆ ನೆಲಕ್ಕೆ ಉರುಳಿತು. ಈ ಮೂಲಕ ಕಾರವಾರಿಗರ ಭಾವನಾತ್ಮಕ ನಂಟಿನ ಕೊಂಡಿಯೊಂದು ಕಳಚಿ ಬಿದ್ದಂತಾಯಿತು.
‘ಕಾಳಿ ನದಿಗೆ ಅಡ್ಡಲಾಗಿ ಎಂಟು ವರ್ಷಗಳ ಹಿಂದೆ ಹೊಸ ಸೇತುವೆ ನಿರ್ಮಾಣಗೊಂಡಿದ್ದರೂ ಹಳೆಯ ಸೇತುವೆ ಇಲ್ಲಿನ ಜನರ ಸಂಪರ್ಕ ಸೌಕರ್ಯ ಮಾತ್ರ ಆಗಿರಲಿಲ್ಲ. ಅಲ್ಲಿನ ಪ್ರಾಕೃತಿಕ ಸೌಂದರ್ಯ, ಸೊಬಗು ಹೊರ ಊರಿನ ಜನರನ್ನು ಸೆಳೆದಿತ್ತು. ಕಾರವಾರಕ್ಕೆ ಯಾರೇ ಬಂದರೂ ಇಲ್ಲಿನ ಸೇತುವೆಯ ಸೌಂದರ್ಯಕ್ಕೆ ಮಾರುಹೋಗುತ್ತಿದ್ದರು’ ಎಂದು ಕೋಡಿಬಾಗದ ಸದಾನಂದ ಮಾಂಜ್ರೇಕರ ಕುಸಿದು ಬಿದ್ದ ಸೇತುವೆಯನ್ನು ನೋಡುತ್ತಲೇ ಹೇಳುವಾಗ ಅವರ ಕಣ್ಣಿನ ಅಂಚಿನಲ್ಲಿ ನೀರಿನ ಹನಿಯೊಂದು ಜಿನುಗಿತು.
‘ಕಾಳಿ ಸೇತುವೆ ಮೇಲೆ ನಿಂತು ಗಾಳ ಹಾಕಿ ಹಿಡಿದ ಮೀನುಗಳಿಗೆ ಲೆಕ್ಕವಿಲ್ಲ. ನದಿಯಲ್ಲಿ ಮೀನುಗಾರಿಕೆ ನಡೆಸಿದ್ದರೂ ಸೇತುವೆ ಮೇಲಿಂದ ಗಾಳ ಹಾಕಿ ಹಿಡಿಯುತ್ತಿದ್ದ ಮೀನುಗಳು ಜೀವನಕ್ಕೆ ದಾರಿಮಾಡಿಕೊಡುತ್ತಿದ್ದವು’ ಎನ್ನುತ್ತಲೇ ಅಳ್ವೆವಾಡಾದ ಸುದೇಶ ಸಾರಂಗ ಭಾವುಕರಾದರು.
‘ಅರಬ್ಬಿ ಸಮುದ್ರಕ್ಕೆ ಕಾಳಿ ನದಿಯು ಸೇರುವ ಜಾಗದ ಸಮೀಪ ಸೇತುವೆ ಕಟ್ಟುವುದು ಸಾಹಸದ ಮಾತಾಗಿತ್ತು. ಕಾಳಿ ನದಿಗೆ 665 ಮೀ. ಉದ್ದದ ಮೊದಲ ಸೇತುವೆ ಕಟ್ಟಲು ಬರೋಬ್ಬರಿ 19 ವರ್ಷಗಳೇ ಬೇಕಾದವು. ಬಾರ್ಜ್ ಮೂಲಕ ನದಿ ದಾಟುತ್ತಿದ್ದ ನಾವೆಲ್ಲ ಸೇತುವೆ ನಿರ್ಮಾಣಗೊಂಡಾಗ ಸಂಭ್ರಮಿಸಿದ್ದಕ್ಕೆ ಪಾರವೇ ಇರಲಿಲ್ಲ’ ಎಂದು ತಾಮ್ಸೆವಾಡಾದ ನಾಗರಾಜ ತಾಮ್ಸೆ ಪ್ರತಿಕ್ರಿಯಿಸಿದರು.
ಸೇತುವೆ ಕಟ್ಟಲು ಬಂದವರು ದಿವಾಳಿಯಾಗಿದ್ದರು!: 1965 ರಲ್ಲಿ ಕಾಳಿನದಿಗೆ ಸೇತುವೆ ಕಟ್ಟುವ ಕೆಲಸ ಆರಂಭಗೊಂಡಿತ್ತು. ಗ್ಯಾನನ್ ಡಂಕರ್ಲಿ ಆ್ಯಂಡ್ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿತ್ತು. ಅಡಿಪಾಯದ ಕೆಲಸವನ್ನು ಪ್ರಾರಂಭಿಸಿದಾಗ ಅದು ದಿವಾಳಿಯಾಯಿತು.
ನಾಲ್ಕು ವರ್ಷದ ಬಳಿಕ ಉಡನಿ ಎಂಜಿನಿಯರಿಂಗ್ ಕಂಪನಿ ಟೆಂಡರ್ ಪಡೆದು ಕೆಲಸ ಆರಂಭಿಸುವ ವೇಳೆಗೆ ಅದರ ಪಾಲುದಾರ ಮಾಲೀಕರು ನಿಧನರಾದ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಂಡಿತ್ತು. 1975ರ ವೇಳೆಗೆ ಗ್ಯಾಮನ್ ಇಂಡಿಯಾ ಲಿಮಿಟೆಡ್ ಸೇತುವೆ ಕಾಮಗಾರಿ ಆರಂಭಿಸಿತ್ತು. ಸುಮಾರು ₹2.65 ಕೋಟಿ ವೆಚ್ಚದಲ್ಲಿ ಕಂಪನಿಯು ಏಳು ವರ್ಷಗಳಲ್ಲಿ ಸೇತುವೆ ನಿರ್ಮಿಸಿತ್ತು.
‘ಕಾಳಿನದಿಯ ಸೇತುವೆ ಕುಸಿತಕ್ಕೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಾಕಷ್ಟು ಅದ್ವಾನ ನಡೆದರೂ ಅವರು (ಕೇಂದ್ರ ಸರ್ಕಾರ) ಮೌನವಾಗಿರುವುದು ಅಚ್ಚರಿ ಮೂಡಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆರೋಪಿಸಿದರು.
ಸೇತುವೆ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದವರ ಜತೆ ಮಾತನಾಡಿದ ಅವರು ‘ರಾಷ್ಟ್ರೀಯ ಹೆದ್ದಾರಿ ಯೋಜನೆ ಕೇಂದ್ರ ಸರ್ಕಾರಕ್ಕೆ ಸೇರಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಐ.ಆರ್.ಬಿ ಕಂಪನಿ ಮೇಲೆ ಕೇಂದ್ರದ ಹಿಡಿತವಿದೆ. ಕಂಪನಿ ಈವರೆಗೆ ಹಲವು ಅವೈಜ್ಞಾನಿಕ ಕೆಲಸ ಮಾಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎಂದರು. ‘ಕಾಳಿ ನದಿಗೆ ಹೊಸ ಸೇತುವೆ ನಿರ್ಮಿಸುವ ವೇಳೆ ಹಳೆಯ ಸೇತುವೆ ಮೇಲೆ ಭಾರದ ಯಂತ್ರೋಪಕರಣ ಇಟ್ಟು ಕೆಲಸ ಮಾಡಿದ್ದರು.
ಅಂಕೋಲಾದ ಹಟ್ಟಿಕೇರಿಯಲ್ಲೂ ಅಂತಹ ಕೆಲಸ ನಡೆದಿತ್ತು. ಅದರಿಂದ ಕಳೆದ ವರ್ಷ ಅಲ್ಲಿನ ಸೇತುವೆ ಕುಸಿದಿತ್ತು. ಹಳೆಯ ಸೇತುವೆಯ ಸಾಮರ್ಥ್ಯ ಪರೀಕ್ಷಿಸದೆ ವಾಹನಗಳ ಓಡಾಟಕ್ಕೆ ಅನುಮತಿಸಲಾಗಿತ್ತು. ಎಲ್ಲದರ ಹಿಂದೆ ಐ.ಆರ್.ಬಿ ಕಂಪನಿ ನಿರ್ಲಕ್ಷತನವಿದೆ’ ಎಂದರು. ಕ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾರಿ ಚಾಲಕ ಬಾಲಮುರುಗನ್ ಅವರ ಆರೋಗ್ಯ ವಿಚಾರಿಸಿದ ಸಚಿವರು ವೈಯಕ್ತಿಕವಾಗಿ ಆತನಿಗೆ ಧನಸಹಾಯ ಮಾಡಿದರು.
ಹೊಸ ಕಾಳಿ ಸೇತುವೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ನಿರ್ಬಂಧಿಸಿದ್ದರು. ಸೇತುವೆಯ ಸುರಕ್ಷತೆಯ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಿ ವರದಿ ಸಲ್ಲಿಕೆಗೆ ಎನ್.ಎಚ್.ಎ.ಐಗೆ ಸೂಚಿಸಿದ್ದರು. ಕೆಲವೇ ತಾಸಿನಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದ ಎನ್.ಎಚ್.ಎ.ಐ ಯೋಜನಾ ನಿರ್ದೇಶಕ ಹರಿಕೃಷ್ಣ ‘ಸೇತುವೆಯ ಮೇಲೆ ಲಘು ವಾಹನಗಳ ಸಂಚಾರಕ್ಕೆ ಅನುಮತಿಸಬಹುದು. ಪೊಲೀಸ್ ಭದ್ರತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬಹುದು’ ಎಂದು ತಿಳಿಸಿದ್ದರು. ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡಿ ಜನರಿಂದ ವ್ಯಾಪಕ ಟೀಕೆಗೆ ಒಳಗಾಯಿತು.
‘ನಾನು ಚಲಾಯಿಸುತ್ತಿದ್ದ ಲಾರಿ ಸೇರಿದಂತೆ ನಿರ್ದಿಷ್ಟ ಅಂತರದಲ್ಲಿ ಗೋವಾ ಗಡಿಯಿಂದಲೂ ಮೂರು ಲಾರಿಗಳು ಸಾಗುತ್ತಿದ್ದವು. ಕಾರವಾರ ಸಮೀಪಿಸಿದಂತೆ ಬಾಲಮುರುಗನ್ ವೇಗದೊಂದಿಗೆ ನಮ್ಮನ್ನು ಹಿಂದಿಕ್ಕಿ ಮುಂದೆ ಸಾಗಿದರು. ಸೇತುವೆ ಬಳಿ ಇದ್ದಕ್ಕಿಂದ್ದಂತೆ ಅವರ ಲಾರಿ ಕುಸಿದು ಬಿತ್ತು. ದೊಡ್ಡ ಸಪ್ಪಳ ಕೇಳಿ ಭಯಗೊಂಡೆ. ನೋಡಿದರೆ ನಾನು ಲಾರಿ ನಿಲ್ಲಿಸಿದ್ದ ಸೇತುವೆಯ ಮುಂಭಾಗ ಮುರಿದಿತ್ತು. ಕೂಡಲೆ ವೇಗವಾಗಿ ಲಾರಿ ಹಿಂದಕ್ಕೆ ಚಲಾಯಿಸಿದೆ’ ಎಂದು ಪ್ರತ್ಯಕ್ಷದರ್ಶಿ ಲಾರಿ ಚಾಲಕ ದಲ್ವಿಂದರ್ ಸಿಂಗ್ ಹೇಳಿದರು.
ಸೇತುವೆ ಕುಸಿದ ಘಟನೆ ವಿಷಯ ಕಾಳ್ಗಿಚ್ಚಿನಂತೆ ನಗರದಾದ್ಯಂತ ಹರಡಿತ್ತು. ನದಿಗೆ ಉರುಳಿ ಬಿದ್ದ ಲಾರಿಯ ಚಾಲಕ ಬಾಲಮುರುಗನ್ ಸಹಾಯಕ್ಕೆ ಕೂಗುತ್ತಿದ್ದರು. ಕರಾವಳಿ ಕಾವಲು ಪಡೆಯ ತಾಂತ್ರಿಕ ಸಿಬ್ಬಂದಿ ಸುದರ್ಶನ ತಾಂಡೇಲ ಅಶೋಕ ದುರ್ಗೇಕರ ಅವರು ಸ್ಥಳಿಯ ಮೀನುಗಾರರಾದ ಸೂರಜ ಸಾರಂಗ ಕರಣ ನಾವಗೆ ಸುದೇಶ ಸಾರಂಗ ಲಕ್ಷ್ಮೀಕಾಂತ ಮೆಹತಾ ದಿಲೀಪ ಮೆಹತಾ ನೆರವಿನೊಂದಿಗೆ ದೋಣಿ ಮೂಲಕ ತೆರಳಿ ಚಾಲಕನನ್ನು ಸುರಕ್ಷಿತವಾಗಿ ಕರೆತಂದಿದ್ದರು.
ಸೇತುವೆ ಬಿದ್ದ ತಕ್ಷಣವೇ ಚಿತ್ತಾಕುಲ ಠಾಣೆಯ ಕಾನ್‍ಸ್ಟೆಬಲ್ ವಿನಯ ಕಾಣಕೋಣಕರ ಸೇತುವೆ ಬಳಿ ವಾಹನ ಸಂಚಾರ ತಡೆದಿದ್ದರಿಂದ ಹಲವರು ಅಪಾಯಕ್ಕೆ ಈಡಾಗುವುದು ತಪ್ಪಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.