ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ವಾಣಿಜ್ಯ ಬಂದರಿಗೆ ದಾಖಲೆಯ ಆದಾಯ

₹21 ಕೋಟಿ ನೇರ ಆದಾಯ:ಒಂದೇ ವರ್ಷದಲ್ಲಿ 148 ಹಡಗುಗಳ ಲಂಗರು
Last Updated 2 ಏಪ್ರಿಲ್ 2023, 0:00 IST
ಅಕ್ಷರ ಗಾತ್ರ

ಕಾರವಾರ: ಮ್ಯಾಂಗನೀಸ್ ಅದಿರು ರಫ್ತಿನ ಕಾಲದಲ್ಲಿ ಆದಾಯದ ಉತ್ತುಂಗದಲ್ಲಿದ್ದ ಇಲ್ಲಿನ ವಾಣಿಜ್ಯ ಬಂದರು ಅದಿರು ವ್ಯವಹಾರ ಸ್ಥಗಿತದ ಬಳಿಕ ಕಳೆಗುಂದಿತ್ತು. ಆದರೆ ದಶಕಗಳ ಬಳಿಕ ಮತ್ತೆ ದಾಖಲೆಯ ಆದಾಯ ಸಂಗ್ರಹಿಸಲು ಆರಂಭಿಸಿದೆ. 2022–23ನೇ ಸಾಲಿನಲ್ಲಿ ₹21 ಕೋಟಿ ನೇರ ಆದಾಯ ಸಂಗ್ರಹಿಸಿದೆ.

ವಾಣಿಜ್ಯ ಬಂದರಿನಲ್ಲಿ ದಶಕಗಳ ಹಿಂದೆ ಡೀಸೆಲ್, ತಾಳೆ ಎಣ್ಣೆ, ಗ್ರ್ಯಾನೈಟ್ ಸೇರಿ ಹತ್ತಕ್ಕೂ ಹೆಚ್ಚು ಉತ್ಪನ್ನಗಳ ಆಮದು ಮತ್ತು ರಫ್ತು ವ್ಯವಹಾರ ನಡೆಯುತ್ತಿತ್ತು. ಅದಿರಿನ ಭರಾಟೆಯ ಬಳಿಕ ಕೆಲವೇ ಉತ್ಪನ್ನಗಳ ವಹಿವಾಟು ನಡೆಯುತ್ತಿದೆ. ಆದರೆ ಈ ಹಿಂದೆ ಹತ್ತಾರು ಉತ್ಪನ್ನಗಳ ವಹಿವಾಟು ನಡೆಯುತ್ತಿದ್ದ ಕಾಲದಲ್ಲಿ ಸರಾಸರಿ ₹5 ರಿಂದ 10 ಕೋಟಿ ನೇರ ಆದಾಯ ಗಳಿಕೆ ಮಾತ್ರ ಇತ್ತು.

2022–23ನೇ ಸಾಲಿನಲ್ಲಿ ಡೀಸೆಲ್, ತಾಳೆ ಎಣ್ಣೆ, ರಾಕ್ ಫಾಸ್ಫೇಟ್, ಇಂಡಸ್ಟ್ರಿಯಲ್ ಸಾಲ್ಟ್, ಬಿಟುಮಿನ್‍ಗಳ ಆಮದು ಮತ್ತು ಮೊಲಾಸಿಸ್, ಕಾಸ್ಟಿಕ್ ಸೋಡಾ ಉತ್ಪನ್ನಗಳ ರಫ್ತಿನ ಮೂಲಕ ₹21 ಕೋಟಿ ಆದಾಯ ಗಳಿಕೆ ಮಾಡಿದೆ. ಒಟ್ಟೂ 4,47,026 ಮೆಟ್ರಿಕ್ ಟನ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿರುವ ಬಂದರು, 4,66,293 ಮೆಟ್ರಿಕ್ ಟನ್ ಸಾಮಗ್ರಿ ರಫ್ತು ಮಾಡಿದೆ.

‘ವಾಣಿಜ್ಯ ಬಂದರು ಕಳೆದ ಬಾರಿಗಿಂತ ಶೇ.24 ರಷ್ಟು ಹೆಚ್ಚು ಆದಾಯ ಸಂಗ್ರಹಿಸಿದೆ. ಬಿಟುಮಿನ್ (ಡಾಂಬರು) ಮತ್ತು ಕೈಗಾರಿಕಾ ಉಪ್ಪು ಆಮದು ಪ್ರಮಾಣದಲ್ಲಿ ಭಾರಿ ಹೆಚ್ಚಳ ಆಗಿತ್ತು. ಮೊಲಾಸಿಸ್ ರಫ್ತಿನ ಪ್ರಮಾಣ ಕಳೆದ ಬಾರಿಗಿಂತ 1 ಲಕ್ಷ ಟನ್ ಹೆಚ್ಚಳವಾಗಿದೆ. ಅಲ್ಲದೆ ಹಡಗುಗಳ ನಿರಂತರ ಆಗಮನದಿಂದ ವರ್ಷದ ಬಹುತೇಕ ಎಲ್ಲ ತಿಂಗಳಿನಲ್ಲಿೂ ವಾಣಿಜ್ಯ ಚಟುವಟಿಕೆ ನಡೆದಿತ್ತು’ ಎನ್ನುತ್ತಾರೆ ಬಂದರು ಅಧೀಕ್ಷಕ ಸುರೇಶ್ ಶೆಟ್ಟಿ.

‘ನೈಸರ್ಗಿಕವಾಗಿರುವ ದೇಶದ ಅಪರೂಪದ ವಾಣಿಜ್ಯ ಬಂದರುಗಳಲ್ಲಿ ಕಾರವಾರದ ಬಂದರು ಕೂಡ ಒಂದು. ಆದರೆ ಇಲ್ಲಿ ಬೃಹತ್ ಪ್ರಮಾಣದ ಹಡಗು ಲಂಗರು ಹಾಕಲು ಸೂಕ್ತ ಆಳವಿಲ್ಲ. ಹೂಳು ತುಂಬಿಕೊಂಡಿರುವ ಪರಿಣಾಮ 5 ನಾಟಿಕಲ್ ಮೈಲಿಯ ದೇವಗಡ ಲೈಟ್‍ಹೌಸ್ ಬಳಿಯೇ ಹಡಗುಗಳನ್ನು ನಿಲುಗಡೆ ಮಾಡಿ ಅಲ್ಲಿಂದ ಅರ್ಧದಷ್ಟು ಸಾಮಗ್ರಿಗಳನ್ನು ಟಗ್ ಬೋಟ್ ಮೂಲಕ ಬಂದರಿಗೆ ತಲುಪಿಸುವ ಸ್ಥಿತಿ ಇದೆ. ಹೂಳೆತ್ತಿದರೆ ದೊಡ್ಡ ಗಾತ್ರದ ಹಡಗುಗಳು ನೇರವಾಗಿ ಬಂದರು ತಲುಪಲು ಅವಕಾಶವಾಗಲಿದೆ’ ಎಂದು ಆಮದು, ರಫ್ತು ಕಂಪನಿಯ ಅಧಿಕಾರಿಯೊಬ್ಬರು ಹೇಳಿದರು.

₹324 ಕೋಟಿ ಆದಾಯ:

ಬಂದರಿನ ಆಮದು, ರಫ್ತು ಚಟುವಟಿಕೆಯ ಕಾರನದಿಂದ ರಾಜ್ಯ ಸರ್ಕಾರಕ್ಕೆ ಬಂದರು ಜಲಸಾರಿಗೆ ಮಂಡಳಿ (ಮರಿಟೈಮ್ ಬೋರ್ಡ್) ಮೂಲಕ ₹21 ಕೋಟಿ ನೇರ ಆದಾಯ ಸಂಗ್ರಹವಾಗಿದ್ದರೆ, ಕೇಂದ್ರೀಯ ಸುಂಕ (ಕಸ್ಟಮ್ಸ್) ಇಲಾಖೆಗೆ ಸುಮಾರು ₹300 ಕೋಟಿ, ಸರಕು ಸೇವಾ ತೆರಿಗೆ (ಜಿ.ಎಸ್.ಟಿ.) ಮೂಲಕ ₹3.6 ಕೋಟಿ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ₹16.96 ಕೋಟಿ ನೇರ ಆದಾಯ, ₹179.33 ಕೋಟಿ ಕಸ್ಟಮ್ಸ್ ಇಲಾಖೆಗೆ ₹2.98 ಕೋಟಿ ಜಿ.ಎಸ್.ಟಿ.ಗೆ ಸಂದಾಯವಾಗಿತ್ತು.

–––––––––––––

ವಾಣಿಜ್ಯ ಬಂದರಿನ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಹೂಳೆತ್ತಲು ನಿರ್ಧರಿಸಲಾಗಿದ್ದು ಈಗಾಗಲೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

ಕ್ಯಾಪ್ಟನ್ ಸಿ.ಸ್ವಾಮಿ

ಬಂದರು ಜಲಸಾರಿಗೆ ಮಂಡಳಿ ನಿರ್ದೇಶಕ

-----------------

ಬಂದರಿನ ವಹಿವಾಟು ಪ್ರಮಾಣ

ಆರ್ಥಿಕ ವರ್ಷ;ವಹಿವಾಟು ಪ್ರಮಾಣ (ಟನ್‍ಗಳಲ್ಲಿ);ಆದಾಯ (₹ ಕೋಟಿಗಳಲ್ಲಿ);ಲಂಗರು ಹಾಕಿದ್ದ ಹಡಗಗುಗಳು

2012–13;4,41,190;5.43;74

2013–14;3,83,750;4.74;65

2014–15;5,25,070;6.96;95

2015–16;7,14,357;10.98;119

2016–17;5,82,806;9.5;113

2017–18;5,99,127;11.59;136

2018–19;9,48,513;16.70;133

2019–20;8,60,626;16.72;145

2020–21;7,49,487;15.22;124

2021–22;7,31,407;16.96;120

2022–23;9,13,319;21;148

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT