ಕಾರವಾರ: ಒಂದೆಡೆ ನಿರಂತರ ಮಳೆಯಿಂದ ಗಂಗಾವಳಿ ನದಿ ನೀರಿನ ರಭಸ, ಇನ್ನೊಂದೆಡೆ ಕೇರಳ ಸರ್ಕಾರದ ಒತ್ತಡ. ಇವೆರಡರ ನಡುವೆ ಸಿಲುಕಿ ಶಿರೂರು ದುರಂತದಲ್ಲಿ ಕಣ್ಮರೆಯಾಗಿದ್ದ ಕೇರಳದ ಲಾರಿ ಹುಡುಕುವ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದ ಜಿಲ್ಲಾಡಳಿತವು ಬುಧವಾರ ತುಸು ನಿರಾಳವಾಯಿತು.
ಗುಡ್ಡ ಕುಸಿತದ ದುರ್ಘಟನೆ ನಡೆದ 71 ದಿನಗಳ ಬಳಿಕ ನದಿಯ ಆಳದಲ್ಲಿ ಮಣ್ಣು, ಕಲ್ಲಿನ ರಾಶಿಯಡಿ ಸಿಲುಕಿ ನಜ್ಜುಗುಜ್ಜಾಗಿದ್ದ ಕೇರಳದ ಭಾರತ್ ಬೆಂಜ್ ಕಂಪನಿಯ ಲಾರಿಯ ಕ್ಯಾಬಿನ್ ಪತ್ತೆಯಾಯಿತು. ಹೂಳೆತ್ತುವ ಬಾರ್ಜ್‍ನ ಕ್ರೇನ್ ಸಹಾಯದೊಂದಿಗೆ ಅದನ್ನು ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ದಡಕ್ಕೆ ತರಲಾಯಿತು.
ಕ್ಯಾಬಿನ್‍ನ ಒಳಗೆ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ. ತುಂಡು ತುಂಡಾಗಿದ್ದ ಶವವನ್ನು ರಾಜ್ಯ ವಿಪತ್ತು ನಿರ್ವಹಣಾ ದಳದ (ಎಸ್.ಡಿ.ಆರ್.ಎಫ್) ಸಿಬ್ಬಂದಿ ಲಾರಿಯ ಕ್ಯಾಬಿನ್‍ನಿಂದ ಹೊರ ತೆಗೆದರು. ಅವುಗಳನ್ನು ಡಿಎನ್ಎ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಯಿತು.
‘ಲಾರಿಯ ಕ್ಯಾಬಿನ್‍ನಲ್ಲಿ ಸಿಕ್ಕ ಮೃತದೇಹವು ಲಾರಿ ಚಾಲಕನಾಗಿದ್ದ ಅರ್ಜುನ್ ಅವರದ್ದೇ ಎಂಬುದು ಬಹತೇಕ ಖಚಿತವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಜು.16ರಂದು ಗುಡ್ಡ ಕುಸಿತದ ದುರ್ಘಟನೆ ನಡೆದ ವೇಳೆ ಜೊಯಿಡಾ ತಾಲ್ಲೂಕಿನ ರಾಮನಗರದಿಂದ ಕೇರಳಕ್ಕೆ ಮರದ ದಿಮ್ಮಿ ಸಾಗಿಸುತ್ತಿದ್ದ, ಸಾಗರದ ಮುನಾಫ್ ಕೋಯಾ ಒಡೆತನದ ಲಾರಿಯು, ಚಾಲಕ ಅರ್ಜುನ್ ಸಮೇತ ಕಣ್ಮರೆಯಾಗಿತ್ತು. ಅಲ್ಲದೆ, ಸ್ಥಳೀಯ 6 ಮಂದಿ ಸಹಿತ 11 ಮಂದಿ ಕಣ್ಮರೆಯಾಗಿದ್ದರು. ಈವರೆಗೆ 9 ಮಂದಿಯ ಮೃತದೇಹ ಪತ್ತೆಯಾಗಿದ್ದು, ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ನಾಯ್ಕ ಅವರನ್ನು ಪತ್ತೆ ಹಚ್ಚಬೇಕಾಗಿದೆ.
‘ಚಾಲಕನ್ನು ಹುಡುಕಿಕೊಡುವಂತೆ ಕೇರಳ ಸರ್ಕಾರದ ಒತ್ತಡ ಹೆಚ್ಚಿತ್ತು. ಹೈಕೋರ್ಟ್‍ನಲ್ಲಿಯೂ ದಾವೆ ಹೂಡಿದ್ದರು. ಆದರೆ, ಮಳೆ ನಿರಂತರವಾಗಿದ್ದರಿಂದ ನದಿಯ ರಭಸ ಹೆಚ್ಚಿದ್ದ ಕಾರಣಕ್ಕೆ ಪತ್ತೆ ಕಾರ್ಯ ಸುಲಭವಾಗಿರಲಿಲ್ಲ. ಆದರೂ, ಸಾಕಷ್ಟು ಪ್ರಯತ್ನ ನಡೆಸಿ ಲಾರಿ ಪತ್ತೆ ಹಚ್ಚಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಶಾಸಕ ಸತೀಶ ಸೈಲ್ ಕೂಡ ಕಾರ್ಯಾಚರಣೆ ಸ್ಥಳದಲ್ಲಿ ನಿರಂತರವಾಗಿ ಇದ್ದರು. ‘ಇನ್ನೂ ಐದು ದಿನಗಳ ಕಾಲ ಕಾರ್ಯಾಚರಣೆ ಮುಂದುವರೆಯಲಿದೆ. ಕಣ್ಮರೆಯಾಗಿರುವ ಇಬ್ಬರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತೇವೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
‘ತಂದೆಯನ್ನು ಹುಡುಕಿಕೊಡಿ’
ಅಂಕೋಲಾ: ‘ಕೇರಳದ ಲಾರಿ ಚಾಲಕನ ಪತ್ತೆಗೆ ಒತ್ತಡ ಬಂದಿದ್ದರಿಂದ ಅವರನ್ನು ಹುಡುಕಲು ಶತಪ್ರಯತ್ನ ನಡೆದಿದೆ. ದುರ್ಘಟನೆಯಲ್ಲಿ ಕಣ್ಮರೆಯಾಗಿರುವ ನಮ್ಮ ತಂದೆಯನ್ನೂ ಹುಡುಕಿಕೊಡಿ’ ಎಂದು ಶಿರೂರಿನ ಜಗನ್ನಾಥ ನಾಯ್ಕ ಅವರ ಮಕ್ಕಳು ಶಾಸಕ ಸತೀಶ ಸೈಲ್ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಎದುರು ಭಾವುಕರಾಗಿ ಮನವಿ ಮಾಡಿದರು. ‘ದುರಂತದಲ್ಲಿ ಕಣ್ಮರೆಯಾಗಿರುವ ಜಗನ್ನಾಥ ಲೋಕೇಶ ಪತ್ತೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾವುದೇ ಊಹಾಪೋಹಗಳಿಗೆ ಗಮನ ನೀಡಬೇಡಿ’ ಎಂದು ಶಾಸಕ ಸತೀಶ ಸೈಲ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.