ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಚುನಾವಣೆ ಹೊಸ್ತಿಲಲ್ಲಿ ಮತ ಬಹಿಷ್ಕಾರದ ಕೂಗು

ಬಂದರು ಯೋಜನೆಗೆ ವಿರೋಧ:ರಸ್ತೆ, ತೂಗುಸೇತುವೆಗೆ ಬೇಡಿಕೆ
Published 22 ಏಪ್ರಿಲ್ 2024, 7:54 IST
Last Updated 22 ಏಪ್ರಿಲ್ 2024, 7:54 IST
ಅಕ್ಷರ ಗಾತ್ರ

ಕಾರವಾರ: ರಸ್ತೆ, ನೀರು, ಭೂಮಿ ಹಕ್ಕು...ಹೀಗೆ ಹತ್ತಾರು ಮೂಲಸೌಕರ್ಯಗಳ ಕುರಿತು ಆಡಳಿತ ವ್ಯವಸ್ಥೆಯ ಮುಂದೆ ಬೇಡಿಕೆ ಇಡುವ ಜನರು ತಮ್ಮ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಗೆ ಇಳಿಯುವುದು ಸಹಜ. ಅದರಲ್ಲೂ ಚುನಾವಣೆ ಹೊಸ್ತಲಿನಲ್ಲಿ ಜನರ ಬೇಡಿಕೆಯ ಪಟ್ಟಿ ಬೆಳೆಯುತ್ತ ಸಾಗುತ್ತದೆ. ಜತೆಗೆ ಪ್ರತಿಭಟನೆಯೂ ಹೆಚ್ಚುತ್ತದೆ.

ಹೀಗೆ ಪ್ರತಿಭಟಿಸುವ ಜನರು ಆಡಳಿತ ವ್ಯವಸ್ಥೆಯನ್ನು ತನ್ನತ್ತ ಸೆಳೆಯಲು ಚುನಾವಣೆಯ ವೇಳೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡುವುದು ಸಹಜ. ಲೋಕಸಭೆ ಚುನಾವಣೆ ಸಮೀಪಿಸಿರುವ ಹೊತ್ತಲ್ಲಿ ಜಿಲ್ಲೆಯಲ್ಲಿಯೂ ಹಲವೆಡೆ ಮತದಾನ ಬಹಿಷ್ಕಾರದ ಕೂಗು ಬಲವಾಗಿದೆ. ಈ ಪೈಕಿ ಹೊನ್ನಾವರ ತಾಲ್ಲೂಕು ಟೊಂಕದಲ್ಲಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಮೀನುಗಾರರು ನಡೆಸುತ್ತಿರುವ ಪ್ರತಿಭಟನೆ ಬಲಗೊಂಡಿದ್ದು, ಜಿಲ್ಲೆಯ ಕರಾವಳಿ ಭಾಗದ ಮೀನುಗಾರರು ಮತದಾನ ಬಹಿಷ್ಕರಿಸುವ ಚರ್ಚೆ ಆರಂಭಿಸಿದ್ದಾರೆ.

ಇದೇ ಹೊನ್ನಾವರದ ಕರ್ಕಿ, ಪಾವಿನಕುರ್ವಾ ಗ್ರಾಮದಲ್ಲಿರುವ ಶಿಥಿಲಗೊಂಡ ತೂಗುಸೇತುವೆಯನ್ನು ಮರು ನಿರ್ಮಿಸುವ ಬೇಡಿಕೆ ಇಟ್ಟು ಸ್ಥಳೀಯರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. 25 ವರ್ಷಗಳಷ್ಟು ಹಳೆಯದಾಗಿರುವ ತೂಗುಸೇತುವೆಯು ನೂರಾರು ಜನರಿಗೆ ಸಂಪರ್ಕಕ್ಕೆ ಆಧಾರವಾಗಿದೆ. ಹತ್ತಾರು ವಿದ್ಯಾರ್ಥಿಗಳು ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆಯ ಮೇಲೆ ನಿತ್ಯ ಸಂಚರಿಸುತ್ತ ಶಾಲೆ ಕಾಲೇಜಿಗೆ ತೆರಳುತ್ತಿದ್ದಾರೆ.

‘ತೂಗುಸೇತುವೆಗೆ ಅಳವಡಿಸಿದ ಕಬ್ಬಿಣದ ಸರಳುಗಳು, ತಂತಿ ತುಕ್ಕು ಹಿಡಿದು ಹಾಳಾಗಿದೆ. ಸೇತುವೆ ಈಗಲೋ ಆಗಲೋ ಮುರಿದು ಬೀಳುವ ಸ್ಥಿತಿಯಲ್ಲಿದೆ. ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಸಿಗದ ಕಾರಣ ಈಗ ಲೋಕಸಭೆ ಚುನಾವಣೆಯ ವೇಳೆ ಕರ್ಕಿ, ಪಾವಿನಕುರ್ವಾ ಭಾಗ ನೂರಾರು ಕುಟುಂಬಗಳು ಮತದಾನದಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ’ ಎಂದು ಕರ್ಕಿಯ ಗ್ರಾಮ ಪಂಚಾಯಿತಿ ಸದಸ್ಯ ಹರೀಶ ನಾಯ್ಕ ಎಚ್ಚರಿಸುತ್ತಾರೆ.

ಹೊನ್ನಾವರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಹಲವು ವರ್ಷಗಳಿಂದ ಪರಿಹಾರ ಕಾಣದ ಸಮಸ್ಯೆಗಳಿವೆ. ಆದರೂ ಕಾಸರಕೋಡ ಟೊಂಕ ಹಾಗೂ ಮಂಕಿ ಅನಂತವಾಡಿ ಈ ಎರಡು ಊರುಗಳಲ್ಲಿ ಮಾತ್ರ ಸಮಸ್ಯೆ ಪರಿಹಾರಕ್ಕೆ ಚುನಾವಣಾ ಬಹಿಷ್ಕಾರದ ಕೂಗು ಕೇಳಿಬಂದಿದೆ. ಟೊಂಕದಲ್ಲಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಜನರು ಬೀದಿಗಿಳಿದಿದ್ದರೆ, ಅನಂತವಾಡಿಯಲ್ಲಿ ರೇಲ್ವೆ ಮೇಲ್ಸೆತುವೆಗಾಗಿ ಸಾರ್ವಜನಿಕರಿಂದ ಹೋರಾಟ ನಡೆದಿದೆ.

‘ಚುನಾವಣೆ ಬಹಿಷ್ಕರಿಸುವ ಜನರ ಎಚ್ಚರಿಕೆಯ ಕುರಿತ ಜನರ ಮನವಿಗಳನ್ನು ಸಂಬಂಧಪಟ್ಟವರಿಗೆ ರವಾನಿಸಲಾಗಿದ್ದು, ಸಮಸ್ಯೆ ಬಗೆಹರಿಸಲು ಸ್ವತಃ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಜನರೊಂದಿಗೆ ಚರ್ಚಿಸಿದ್ದಾರೆ’ ಎಂದು ಚುನಾವಣಾ ದೂರುಗಳಿಗೆ ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದರು.

ಅಧಿಕಾರಿಗಳ ಮನವೊಲಿಕೆಯ ಬಳಿಕವೂ ಬಂದರು ಯೋಜನೆ ವಿರೋಧಿಸಿ ಮೀನುಗಾರರು ಬಹಿರಂಗ ಸಭೆಯನ್ನೂ ನಡೆಸಿದರು. ಯೋಜನೆ ಕೈಬಿಡುವಂತೆ ಪ್ರಬಲ ಒತ್ತಾಯ ಮಾಡಿರುವ ಮೀನುಗಾರರು ಸರ್ಕಾರ ತನ್ನ ನಿಲುವು ಬದಲಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿತು. ಆದರೆ, ಬಹಿಷ್ಕಾರ ಸಂಬಂಧ ಒಮ್ಮತದ ನಿರ್ಣಯ ಕೈಗೊಂಡಿಲ್ಲ. ಮೇ 3ರಂದು ಪುನಃ ಸಭೆ ನಡೆಸಲಿರುವ ಮೀನುಗಾರರು ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ಯಲ್ಲಾಪುರ ಪಟ್ಟಣದ ಕಾಳಮ್ಮ ನಗರ ಸಮೀಪದ ಗಂಗಾಧರ ಕಾಲೋನಿ ನಿವಾಸಿಗಳು ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡಬೇಕು ಮತ್ತು ಮೂಲಸೌಲಭ್ಯ ಒದಗಿಸಬೇಕು ಎಂದು ಹಲವು ವರ್ಷದಿಂದ ಒತ್ತಾಯಿಸುತ್ತ ಬಂದಿದ್ದರು. ಈವರೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮತದಾನದಿಂದ ದೂರ ಉಳಿಯುವುದಾಗಿಯೂ ಘೋಷಿಸಿದ್ದಾರೆ.

‘ನಮ್ಮ ಬೇಡಿಕೆಗೆ ಸೂಕ್ತ ಪರಿಹರ ಒದಗಿಸುವ ಖಚಿತ ಭರವಸೆ ಸಿಕ್ಕಿಲ್ಲ. ಸುಮಾರು 70 ಕುಟುಂಬಗಳು ಇಲ್ಲಿ ಕಳೆದ ಮೂರೂವರೆ ದಶಕಗಳಿಂದ ವಾಸಿಸುತ್ತಿದೆ. ಆದರೂ, ಇದುವರೆಗೂ ಜಮೀನನ್ನು ಖಾತೆ ಮಾಡಿಕೊಟ್ಟಿಲ್ಲ. ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಅಗತ್ಯ ಮೂಲಸೌಲಭ್ಯ ಒದಗಿಸಲಾಗಿಲ್ಲ. ಇದೇ ಕಾರಣಕ್ಕೆ ಸರ್ಕಾರದ ಗಮನ ಸೆಳೆಯಲು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದು ಗಂಗಾಧರ ಕಾಲೋನಿಯ ಮಹಿಳಾ ಸಂಘದ ಅಧ್ಯಕ್ಷೆ ಸರೋಜಾ ರಂಗು ರಾಠೋಡ ಎಚ್ಚರಿಸಿದ್ದಾರೆ.

ಸಿದ್ದಾಪುರ ತಾಲ್ಲೂಕಿನ ಹೆಗ್ಗರಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡನಮನೆ ಗ್ರಾಮದ ರೈತರ ಮೂಲಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಮನವಿ ನೀಡಿದರೂ ಗ್ರಾಮ ಪಂಚಾಯಿತಿಯಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಊರಿನ 75 ರೈತರು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

‘ರಸ್ತೆ ನಿರ್ಮಿಸಿಕೊಡಲು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಹತ್ತಾರು ರೈತರಿಗೆ ಉಪಯುಕ್ತವಾಗುವ ಬೇಡಿಕೆ ಇಡಲಾಗಿತ್ತು. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದನೆ ನೀಡಿಲ್ಲ’ ಎಂದು ಕೋಡನಮನೆ ಗ್ರಾಮದ ರೈತ ಶ್ರೀಪತಿ ಈಶ್ವರ ಹೆಗಡೆ ಹೇಳುತ್ತಾರೆ.

ಪೂರಕ ಮಾಹಿತಿ: ಎಂ.ಜಿ.ಹೆಗಡೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ

ಸಿದ್ದಾಪುರ ತಾಲ್ಲೂಕಿನ ಕೋಡನಮನೆ ಗ್ರಾಮದಲ್ಲಿ ರೈತ ಕುಟುಂಬಗಳಿಗೆ ಅನುಕೂಲವಾಗಬೇಕಿದ್ದ ಮಾರ್ಗವು ಗಿಡಗಂಟಿ ಬೆಳೆದು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ 
ಸಿದ್ದಾಪುರ ತಾಲ್ಲೂಕಿನ ಕೋಡನಮನೆ ಗ್ರಾಮದಲ್ಲಿ ರೈತ ಕುಟುಂಬಗಳಿಗೆ ಅನುಕೂಲವಾಗಬೇಕಿದ್ದ ಮಾರ್ಗವು ಗಿಡಗಂಟಿ ಬೆಳೆದು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ 
ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕದಲ್ಲಿ ವಾಣಿಜ್ಯ ಬಂದರು ಯೋಜನೆ ಸಲುವಾಗಿ ಕಡಲಾಮೆ ಮೊಟ್ಟೆ ಇಡುತ್ತಿದ್ದ ಜಾಗದಲ್ಲಿ ರಸ್ತೆ ನಿರ್ಮಿಸಲು ಜಲ್ಲಿಕಲ್ಲುಗಳನ್ನು ರಾಶಿ ಹಾಕಲಾಗಿದೆ 
ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕದಲ್ಲಿ ವಾಣಿಜ್ಯ ಬಂದರು ಯೋಜನೆ ಸಲುವಾಗಿ ಕಡಲಾಮೆ ಮೊಟ್ಟೆ ಇಡುತ್ತಿದ್ದ ಜಾಗದಲ್ಲಿ ರಸ್ತೆ ನಿರ್ಮಿಸಲು ಜಲ್ಲಿಕಲ್ಲುಗಳನ್ನು ರಾಶಿ ಹಾಕಲಾಗಿದೆ 
ಜಿಲ್ಲೆಯ ಯಾವುದೇ ಭಾಗದಲ್ಲಿ ಮೂಲಸೌಕರ್ಯಗಳ ಕೊರತೆ ಸೇರಿದಂತೆ ಏನೇ ಸಮಸ್ಯೆ ಇದ್ದರೂ ಜನರು ಗಮನಕ್ಕೆ ತರಬೇಕು. ಅವುಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಲಾಗುವುದು. ಚುನಾವಣೆ ಬಹಿಷ್ಕರಿಸುವ ಕೆಲಸ ಮಾಡದಂತೆ ವಿನಂತಿಸುತ್ತೇನೆ.
ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ
ವಾಣಿಜ್ಯ ಬಂದರು ನಿರ್ಮಾಣ ವಿರೋಧಿ ಹೋರಾಟಕ್ಕೆ ಆಡಳಿತ ವರ್ಗದಿಂದ ಸರಿಯಾದ ಸ್ಪಂದನೆ ಸಿಗದಿರುವುದರಿಂದ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡುವುದು ಅನಿವಾರ್ಯವಾಯಿತು.
ರಾಜೇಶ ತಾಂಡೇಲ ಟೊಂಕ ವಾಣಿಜ್ಯ ಬಂದರು ವಿರೋಧಿ ಜಂಟಿ ಹೋರಾಟ ಸಮಿತಿ ಅಧ್ಯಕ್ಷ
ರಸ್ತೆ ನಿರ್ಮಾಣದ ಬೇಡಿಕೆ ಈಡೇರುವವರೆಗೂ ಅರ್ಜಿ ಚಳವಳಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಕೇವಲ ಈ ಬಾರಿಯ ಚುನಾವಣೆಯಷ್ಟೇ ಅಲ್ಲದೆ ನಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಚುನಾವಣೆಯಲ್ಲೂ ಮತದಾನ ಮಾಡದಿರಲು ಸ್ವಇಚ್ಛೆಯಿಂದ ನಿರ್ಣಯಿಸಲಾಗಿದೆ.
ಶ್ರೀಪತಿ ಹೆಗಡೆ ಕೋಡನಮನೆ ರೈತ
ಮೀನುಗಾರರ ಒಗ್ಗಟ್ಟು ಪ್ರದರ್ಶನ
ಹೊನ್ನಾವರ ಟೊಂಕದಲ್ಲಿ ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಬಂದರು ಯೋಜನೆ ಕೈಬಿಡುವಂತೆ ಒತ್ತಾಯಿಸಿ ಮೀನುಗಾರರು ದಶಕದಿಂದ ಪ್ರತಿಭಟಿಸುತ್ತಿದ್ದಾರೆ. ಈಚೆಗಷ್ಟೆ ನಿಷೇಧಾಜ್ಞೆ ಜಾರಿಗೊಳಿಸಿ ಬಂದರಿಗೆ ರಸ್ತೆ ನಿರ್ಮಿಸುವ ಕೆಲಸವನ್ನು ಖಾಸಗಿ ಕಂಪನಿ ಆರಂಭಿಸಿತ್ತು. ಆಗ ಪ್ರತಿಭಟನೆಯನ್ನು ತೀವ್ರಗೊಳಿಸಿದ ಮೀನುಗಾರರು ಸಾಮೂಹಿಕವಾಗಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಈಚೆಗಷ್ಟೆ ಹೊನ್ನಾವರದಲ್ಲಿ ಸಭೆ ನಡೆಸಿದ್ದ ಜಿಲ್ಲೆಯ ಕರಾವಳಿ ಭಾಗದ ಮೀನುಗಾರರು ಒಟ್ಟಾಗಿ ಯೋಜನೆ ವಿರೋಧಿಸಿದ್ದರು. ಮತದಾನ ಬಹಿಷ್ಕರಿಸುವ ಬಗ್ಗೆ ಪರ ವಿರೋಧ ಅಭಿಪ್ರಾಯವೂ ವ್ಯಕ್ತವಾದವು. ಆದಾಗ್ಯೂ ಚುನಾವಣೆಗೆ ಕೆಲ ದಿನ ಮುಂಚಿತವಾಗಿ ಇನ್ನೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿರುವ ಮೀನುಗಾರ ಮುಖಂಡರು ಮತದಾನ ಬಹಿಷ್ಕರಿಸಬೇಕೋ? ಅಥವಾ ಮತದಾನ ಮಾಡಬೇಕೋ? ಎಂಬ ನಿರ್ಣಯ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಮತದಾನದಿಂದ ದೂರ ಉಳಿಯಲು ನಿರ್ಣಯಿಸಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಮತದಾನ ಮಾಡದೆ ದೂರ ಉಳಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT