ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ | ಹೆದ್ದಾರಿ ವಿಸ್ತರಣೆಗೆ ಗುಡ್ಡ ಅಗೆತ: ಆತಂಕ

ಪೌರಕಾರ್ಮಿಕರ ವಸತಿ ಸಮುಚ್ಛಯ, ಶಾಲೆ ಕಟ್ಟಡಕ್ಕೆ ಧಕ್ಕೆಯಾಗುವ ಸಾಧ್ಯತೆ
Published 14 ಏಪ್ರಿಲ್ 2024, 5:43 IST
Last Updated 14 ಏಪ್ರಿಲ್ 2024, 5:43 IST
ಅಕ್ಷರ ಗಾತ್ರ

ಭಟ್ಕಳ: ಪಟ್ಟಣದ ಕೊಟೇಶ್ವರ ಕಾಲೊನಿಯ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಗುಡ್ಡವನ್ನು ಐ.ಆರ್.ಬಿ ಕಂಪನಿಯು ಅರೆಬರೆ ತೆರವು ಮಾಡಿ ಹಾಗೆಯೇ ಬಿಟ್ಟಿದ್ದು, ಮಳೆ ಬಂದರೆ ಗುಡ್ಡ ಕುಸಿಯುವ ಅಪಾಯದ ಸ್ಥಿತಿಯಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಐ.ಆರ್.ಬಿ ಕಂಪನಿಯು ಕೈಗೊಂಡಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಅರೆಬರೆಯಾಗಿದೆ. ಇದರಿಂದ ಸಂಚಾರಕ್ಕೆ ಅನುಕೂಲವಾಗಿದ್ದಕ್ಕಿಂತ ಅಪಘಾತ, ಭೂಕುಸಿತದಂತಹ ಅನಾನುಕೂಲತೆಯೇ ಹೆಚ್ಚಿದೆ ಎಂಬುದು ಜನರ ಆರೋಪ. ಇದಕ್ಕೆ ಗುಡ್ಡವನ್ನು ತೆರವು ಮಾಡದೆ ಹಾಗೆಯೇ ಬಿಟ್ಟಿರುವುದು ಒಂದು ನಿದರ್ಶನ ಎಂಬುದಾಗಿ ಜನರು ದೂರುತ್ತಿದ್ದಾರೆ.

ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ದಿನನಿತ್ಯ ಅಪಘಾತದ ಭಯ ಒಂದೆಡೆಯಾದರೇ, ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕಾಗಿ ಪರದಾಡುವ ಸ್ಥಿತಿ ಇನ್ನೊಂದೆಡೆ ಇದೆ. ರಸ್ತೆಯ ವಿಸ್ತರಣೆಗಾಗಿ ಕೊಟೇಶ್ವರ ಕಾಲೊನಿಯ ಬಳಿ ಗುಡ್ಡವನ್ನು ಅಗೆದು ಮಣ್ಣನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ.

‘ಬೃಹದಾಕಾರದ ಗುಡ್ಡ ಅಗೆಯಲಾಗುತ್ತಿದ್ದರೂ ಕುಸಿಯದಂತೆ ಯಾವುದೇ ಸುರಕ್ಷಿತ ಕ್ರಮಕೈಗೊಳ್ಳದೇ ಕೆಲಸ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮಳೆಯಿಂದ ಗುಡ್ಡದ ಮೇಲಿಂದ ಹರಿದು ಬರುವ ನೀರಿನ ರಭಸಕ್ಕೆ ಗುಡ್ಡ ಕುಸಿಯುವ ಸ್ಥಿತಿ ಇದೆ’ ಎಂಬುದಾಗಿ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಕೋಟೇಶ್ವರ ಕಾಲೊನಿಯಲ್ಲಿ ಹೆದ್ದಾರಿ ವಿಸ್ತರಣೆಗಾಗಿ ತೆರವು ಮಾಡಲಾಗುತ್ತಿರುವ ಗುಡ್ಡದ ಮೇಲ್ಭಾಗದಲ್ಲಿ ಪೌರಕಾರ್ಮಿಕರಿಗೆ ಲಕ್ಷಾಂತರ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿರುವ ವಸತಿ ಸಮ್ಮುಚ್ಛಯಗಳಿವೆ. ರೋಟರಿ ಕ್ಲಬ್ ಭಟ್ಕಳ ಘಟಕದ ರೋಟರಿ ಸಭಾಭವನವೂ ಇದೆ. ಅದೂ ಅಲ್ಲದೇ ಸರ್ಕಾರಿ ಪ್ರಾಥಮಿಕ ಶಾಲೆ ಕೂಡ ಇದೇ ಪ್ರದೇಶದಲ್ಲಿದ್ದೂ ಒಂದೊಮ್ಮೆ ಗುಡ್ಡ ಕುಸಿದು ಬಿದ್ದರೆ ಮೇಲೆ ಇರುವ ಎಲ್ಲಾ ಕಟ್ಟಡಗಳಿಗೂ ಹಾನಿಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಸ್ಥಳೀಯರಾದ ಹನುಮ ಕೋರಾರ.

‘ಐ.ಆರ್.ಬಿ ಕಂಪನಿಯವರು ರಸ್ತೆ ಕಾಮಗಾರಿ ಮಾಡುವಾಗ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಸುರಕ್ಷಿತ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಗುಡ್ಡ ಅಗೆದು ಮಣ್ಣು ತೆಗೆದು ಸಾಗಾಟ ಮಾಡುತ್ತಿದ್ದು, ನಿತ್ಯ ಟಿಪ್ಪರ್ ಸಂಚರಿಸುವಾಗ ಜನರು ದೂಳು ತಿನ್ನುವ ಸ್ಥಿತಿ ಉಂಟಾಗಿದೆ. ಶೇಡಿಮಣ್ಣಿನ ಗುಡ್ಡ ಇದಾಗಿದ್ದು, ಮಳೆ ಬಂದರೆ ಕುಸಿಯುವ ಸ್ಥಿತಿಯಲ್ಲಿದೆ. ಮಳೆಗಾಲಕ್ಕೂ ಮುನ್ನ ಐ.ಆರ್.ಬಿಯವರು ಅಪಾಯದ ಗುಡ್ಡವನ್ನು ತೆರವು ಮಾಡಿ ಮುಂದೆ ಆಗಬಹುದಾದ ಅನಾಹುತವನ್ನು ತಡೆಯಬೇಕು’ ಎನ್ನುತ್ತಾರೆ ಭಟ್ಕಳ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ.

ಗುಡ್ಡದ ಅಂಚಿನ ಕಟ್ಟಡಗಳಿಗೆ ತೆರವು ಮಾಡುವಂತೆ ಪರಿಹಾರ ವಿತರಣೆ ಮಾಡಲಾಗಿದೆ. ಪೌರಕಾರ್ಮಿಕರ ಸಮುಚ್ಛಯ ಕಟ್ಟಡ ಹಾಗೂ ಸರ್ಕಾರಿ ಶಾಲೆ ದೂರದಲ್ಲಿದ್ದು ಅಪಾಯದ ಸಾಧ್ಯತೆ ಕಡಿಮೆ ಇದೆ
ಸುದೇಶ ಶೆಟ್ಟಿ ಐ.ಆರ್.ಬಿ ಕಂಪನಿಯ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT