ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ವೆಚ್ಚ ತಗ್ಗಿಸಲಿದೆ ಎಲ್.ಇ.ಡಿ ದೀಪ

ಭಟ್ಕಳ ಪುರಸಭೆ, ಜಾಲಿ ಪ.ಪಂ. ವ್ಯಾಪ್ತಿಯಲ್ಲಿ ಅಳವಡಿಕೆ ಕಾರ್ಯ
Published 16 ಸೆಪ್ಟೆಂಬರ್ 2023, 6:46 IST
Last Updated 16 ಸೆಪ್ಟೆಂಬರ್ 2023, 6:46 IST
ಅಕ್ಷರ ಗಾತ್ರ

ಭಟ್ಕಳ: ಕಡಿಮೆ ವಿದ್ಯುತ್ ಬಳಸಿ ಎಲ್.ಇ.ಡಿ ಬಲ್ಬ್ ಉರಿಸುವ ಹೊಸ ಯೋಜನೆಯನ್ನು ಪುರಸಭೆ ಹಾಗೂ ಜಾಲಿ ಪಟ್ಟಣದಲ್ಲಿ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಪಟ್ಟಣದಲ್ಲಿ ಹಾಲಿ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಟ್ಯೂಬ್‍ಲೈಟ್ ಹಾಗೂ ಹೈಮಾಸ್ಟ್ ದೀಪಗಳನ್ನು ಬದಲಾಯಿಸಿ ಕಡಿಮೆ ವಿದ್ಯುತ್ ಬಳಸುವ ಎಲ್.ಇ.ಡಿ ಬಲ್ಬ್ ಅಳವಡಿಸುವ ಕೆಲಸ ನಡೆಯುತ್ತಿದೆ. ನಾಸಿಕ್ ಮೂಲದ ಸಮೃದ್ಧಿ ಟೆಕ್ ಸೊಲ್ಯೂಷನ್ ಎಂಬ ಸಂಸ್ಥೆ ಈ ಕೆಲಸದ ಗುತ್ತಿಗೆ ಪಡೆದಿದೆ.

ಪಟ್ಟಣದಲ್ಲಿ ಈಗಾಗಲೇ ಅಳವಡಿಸಿರುವ ವಿದ್ಯುತ್ ದೀಪಗಳಿಗೆ ಮಾಸಿಕ ಲಕ್ಷಕ್ಕೂ ಅಧಿಕ ಬಿಲ್‍ನ್ನು ಭಟ್ಕಳ ಪುರಸಭೆಯಿಂದ ಹೆಸ್ಕಾಂಗೆ ಭರಣ ಮಾಡಲಾಗುತ್ತಿದೆ. ಜತೆಗೆ ಮಾಸಿಕ ₹1 ಲಕ್ಷಕ್ಕೂ ಅಧಿಕ ಮೊತ್ತವನ್ನು ನಿರ್ವಹಣೆಗೆ ಭರಿಸಲಾಗುತ್ತದೆ. ಈ ಹೊರೆ ತಗ್ಗಿಸುವ ಸಲುವಾಗಿ ಹೊಸ ಮಾದರಿಯ ಎಲ್.ಇ.ಡಿ ಬಲ್ಬ್ ಅಳವಡಿಸಲು ಮುಂದಾಗಲಾಗಿದೆ.

‘ಹೊಸದಾಗಿ ಅಳವಡಿಕೆಯಾಗಲಿರುವ ಬಲ್ಬ್ ಗಳಿಂದ ಈಗ ಬರುವ ವಿದ್ಯುತ್ ಶುಲ್ಕದ ಶೇ58ರಷ್ಟು ಕಡಿಮೆ ಮೊತ್ತ ವೆಚ್ಚವಾಗಲಿದೆ. ಏಳು ವರ್ಷದ ಅವಧಿಗೆ ನಿರ್ವಹಣೆ ಟೆಂಡರ್ ಪಡೆದಿರುವ ಕಂಪೆನಿಯು ತನ್ನ ಸ್ವಂತ ವೆಚ್ಚದಲ್ಲಿ ವಿದ್ಯುತ್ ದೀಪ ಅಳವಡಿಸಲಿದೆ. ಅದರಿಂದ ವಿದ್ಯುತ್ ಉಳಿತಾಯ ಮಾಡಿ ಉಳಿತಾಯದ ಮೊತ್ತದಿಂದ ಎಲ್.ಇ.ಡಿ ಅಳವಡಿಕೆ ಮತ್ತು ನಿರ್ವಹಣೆ ಕಾರ್ಯ ಮಾಡಲಿದೆ’ ಎಂದು ಪುರಸಭೆಯ ಅಧಿಕಾರಿಗಳು ಹೇಳುತ್ತಾರೆ.

‘ಬೀದಿ ದೀಪ ನಿರ್ವಹಣೆ ಹೊಣೆ ಖಾಸಗಿ ಕಂಪನಿಗೆ ನೀಡಿರುವುದು ಪುರಸಭೆಗೆ ಹೆಚ್ಚಿನ ಅನುಕೂಲವಾಗಲಿದೆ. ವಿದ್ಯುತ್ ಉಳಿತಾಯದ, ಸ್ವಯಂ ನಿರ್ವಹಣೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆದರೆ 18-20 ವ್ಯಾಟ್ ವಿದ್ಯುತ್ ದೀಪಗಳಿರುವ ಕಡೆ 12 ವ್ಯಾಟ್ ದೀಪ ಅಳವಡಿಸುತ್ತಾರೆ ಎಂಬ ದೂರುಗಳಿವೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚು ಪ್ರಖರವಾದ ಬಲ್ಬ್ ಅಳವಡಿಸಬೇಕು’ ಎನ್ನುತ್ತಾರೆ ಪುರಸಭೆ ಸದಸ್ಯ ಫಾಸ್ಕಲ್ ಗೋಮ್ಸ್.

ಸ್ವಯಂ ದೂರು ದುರಸ್ತಿಯೂ ವೇಗ
‘ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಸಮೀಕ್ಷೆ ಮಾಡಿ ನೀಡಿರುವ ಕಂಬಗಳಿಗೆ ಎಲ್.ಇ.ಡಿ ದೀಪ ಅಳವಡಿಸಲಾಗುತ್ತದೆ. ಒಂದೊಮ್ಮೆ ಎಲ್.ಇ.ಡಿ ದೀಪ ಕೆಟ್ಟು ಹೋದಲ್ಲಿ ಸಾರ್ವಜನಿಕರು ದೂರು ನೀಡಬೇಕಾದ ಅಗತ್ಯ ಇಲ್ಲ. ಜಿ.ಪಿ.ಎಸ್ ಅಳವಡಿಸಿದ ಸಿ.ಸಿ.ಎಂ.ಎಸ್ ಕಂಟ್ರೋಲ್ ರೂಂನಲ್ಲಿ ಸ್ವಯಂ ದೂರು ದಾಖಲಾಗುತ್ತದೆ. ಮೇಲ್ವಿಚಾರಕರು ಅದನ್ನು ಗಮನಿಸಿ ನಿರ್ದಿಷ್ಟ ಪ್ರದೇಶಕ್ಕೆ ವಾಹನವನ್ನು ಕಳುಹಿಸಿ ದುರಸ್ತಿ ಮಾಡುತ್ತಾರೆ. ವಿದ್ಯುತ್ ಉಳಿತಾಯ ಹಾಗೂ ನಿರ್ವಹಣೆಯಲ್ಲಿ ಲೋಪ ಉಂಟಾದಲ್ಲಿ ಕಂಪನಿಗೆ ಪುರಸಭೆಯಿಂದ ಬಿಲ್ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಸಮೃದ್ದಿ ಟೆಕ್ ಸೊಲ್ಯೂಷನ್ ಕಂಪೆನಿಯ ಎಂಜಿನಿಯರ್ ರಮೇಶ ಸಾಂಬಾಜೀ ‘ಪ್ರಜಾವಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT