ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರಂಟಿ’ ಯೋಜನೆ ಅಡ್ಡ ಪರಿಣಾಮ ಮುಚ್ಚಲು ಕಾಂಗ್ರೆಸ್ ತಂತ್ರ: ದತ್ತಾತ್ರಿ

Published 1 ಏಪ್ರಿಲ್ 2024, 13:28 IST
Last Updated 1 ಏಪ್ರಿಲ್ 2024, 13:28 IST
ಅಕ್ಷರ ಗಾತ್ರ

ಶಿರಸಿ: ‘ಗ್ಯಾರಂಟಿ ಯೋಜನೆಗಳ ಅಡ್ಡ ಪರಿಣಾಮ ಮತದಾರರಿಗೆ ತಿಳಿಯದಂತೆ ಮಾಡಲು ಕಾಂಗ್ರೆಸ್, ಬಿಜೆಪಿಯ ಮೇಲೆ ಅನಗತ್ಯ ಅಪಪ್ರಚಾರದಲ್ಲಿ ತೊಡಗಿದೆ’ ಎಂದು ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ ಎಸ್. ಹೇಳಿದರು.

ನಗರದ ಪಂಡಿತ ದೀನ್ ದಯಾಳ್ ಸಭಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಕೇಂದ್ರ ಸರ್ಕಾರವು ರೈತರು, ಯುವಕರು, ಮಹಿಳೆಯರು ಮತ್ತು ಬಡವರಿಗೆ ಹಲವು ಯೋಜನೆಯನ್ನು ನೀಡಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ 10 ತಿಂಗಳಿನಲ್ಲಿಯೇ ಜನವಿರೋಧಿ ಸರ್ಕಾರ ಎಂದು ಮನೆಮಾತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ನೀಡಿದ ಆಶ್ವಾಸನೆಯನ್ನು ಶೇ 99ರಷ್ಟು ಪೂರ್ಣಗೊಳಿಸಿದ್ದಾರೆ. ಮೂರನೇ ಬಾರಿಗೆ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ನಾವೆಲ್ಲರೂ ಪಣ ತೋಡಬೇಕು’ ಎಂದು ತಿಳಿಸಿದರು.

ದಲಿತ ಸಮುದಾಯಕ್ಕೆ ಮೀಸಲಿಟ್ಟ ₹12 ಸಾವಿರ ಕೋಟಿ ಕಳೆದ ವರ್ಷದ ಅನುದಾನ ಮತ್ತು ಈ ವರ್ಷದ ₹24 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗೆ ಬಳಸಿ, ದಲಿತರ ವಿರೋಧಿ ನಡೆ ಪ್ರದರ್ಶಿಸಿದೆ. ರಸ್ತೆ ಅಭಿವೃದ್ಧಿ ಕಾರ್ಯಗಳೆಲ್ಲವೂ ನನೆಗುದಿಗೆ ಬಿದ್ದಿವೆ. ಶಾಸಕರಿಗೆ ಅನುದಾನ ನೀಡಿಲ್ಲ. ತನ್ನ ಸಮಸ್ಯೆಯನ್ನು ಮುಚ್ಚಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಮಾತನಾಡಿ, ‘ಸಂಸದ ಅನಂತಕುಮಾರ ಹೆಗಡೆ ಕಳೆದ 25 ವರ್ಷಗಳಿಂದ ಸಂಘಟನೆಯ ಜತೆಯಿದ್ದವರು. ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆ ಪ್ರಚಾರಕ್ಕೆ ತೆರಳಲಿದ್ದಾರೆ. ಅಲ್ಲದೆ, ಅವರ ಗೆಲುವಿಗೆ ಹೆಗಡೆ ಅವರು ಮುಖ್ಯ ಪಾತ್ರನಿರ್ವಹಿಸಲಿದ್ದಾರೆ. ಶಿವರಾಮ ಹೆಬ್ಬಾರ ಅವರಿಗೆ ಪ್ರತಿ ಕಾರ್ಯಕ್ರಮಕ್ಕೂ ಖುದ್ದಾಗಿ ನಾನೇ ಆಹ್ವಾನ ನೀಡಿದ್ದೇನೆ. ಆಹ್ವಾನ ನೀಡಿಲ್ಲ ಎಂಬ ಅವರ ಹೇಳಿಕೆಯನ್ನು ನಾನು ಒಪ್ಪಲು ಸಾಧ್ಯವಿಲ್ಲ. ಅವರ ಮುಂದಿನ ನಡೆಯ ಕುರಿತು ರಾಜ್ಯದ ಹಿರಿಯರು ನೋಡಿಕೊಳ್ಳುತ್ತಾರೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ವಿನೋದ ನಾಯ್ಕ ರಾಯಲಕೇರಿ, ಸಹ ಸಂಯೋಜಕ ರಾಘವ ಭಟ್ಟ ಸುಂಕಸಾಳ, ಜಿಲ್ಲಾ ಘಟಕದ ವಕ್ತಾರ ಸದಾನಂದ ಭಟ್ಟ, ಮಾಧ್ಯಮ ಸಂಯೋಜಕ ಡಾನಿ ಡಿಸೋಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT