ಕುಮಟಾ: ಕರಾವಳಿ ಭಾಗದ ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ, ಶಿರಸಿ-ಕುಮಟಾ ನಡುವೆ ಹಾದುಹೋಗಿರುವ 110 ಕೆ.ವಿ. ವಿದ್ಯುತ್ ಲೈನ್ ನಿರ್ವಹಣೆ ಇಲ್ಲದೆ ಮೂರು ತಾಲ್ಲೂಕುಗಳಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.
ಮಂಗಳವಾರ ಸಂಜೆ ಶಿರಸಿ ಮೂಲಕ ಕರಾವಳಿ ಭಾಗದ ಮೂರು ತಾಲ್ಲೂಕುಗಳಿಗೆ ವಿದ್ಯುತ್ ಸರಬರಾಜು ಮಾಡುವ 110 ಕೆ.ವಿ. ವಿದ್ಯುತ್ ಲೈನ್ ನಲ್ಲಿ ತೊಂದರೆ ಉಂಟಾಗಿ ಕೆಲವು ತಾಸುಗಳ ಕಾಲ ವಿದ್ಯುತ್ ಕಡಿತಗೊಂಡಿತ್ತು. ಗ್ರಾಮೀಣ ಭಾಗದ ಜನರು ಕತ್ತಲೆಯಲ್ಲೇ ದಿನ ಕಳೆಯುವ ಸ್ಥಿತಿ ಉಂಟಾಯಿತು.
‘110 ಕೆ.ವಿ. ವಿದ್ಯುತ್ ಲೈನ್ ನಿರ್ವಹಣೆಗೆ ಕುಮಟಾದಲ್ಲಿ ಕೆ.ಪಿ.ಟಿ.ಸಿ.ಎಲ್‍ನ ಪ್ರತ್ಯೇಕ ಸಿಬ್ಬಂದಿ ತಂಡ ಇದೆ. ತಂಡಕ್ಕೆ ಒಂದು ಲಾರಿ ಸಹ ನೀಡಲಾಗಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದರೆ ತಕ್ಷಣವೇ ತಂಡ ಕಾರ್ಯಪ್ರವೃತ್ತಗೊಳ್ಳುತ್ತದೆ. ಆದರೆ, ಮಂಗಳವಾರ 110 ಕೆ.ವಿ. ಯ ಒಂದು ತಂತಿ ಹಾಳಾಗಿ ಇನ್ನೊಂದು ತಂತಿಯ ಮೂಲಕ ವಿದ್ಯುತ್ ಸರಬರಾಜು ಮಾಡಲಾಯಿತು. ತಡ ರಾತ್ರಿ ವಿದ್ಯುತ್ ಬಳಕೆ ಪ್ರಮಾಣ ಕಡಿಮೆಯಾದಂತೆ ಕಡಿತ ಮಾಡಿದ ತಾಲ್ಲೂಕುಗಳಿಗೂ ವಿದ್ಯುತ್ ಸರಬರಾಜು ಮಾಡಲಾಯಿತು’ ಎಂದು ಕೆ.ಪಿ.ಟಿ.ಸಿ.ಎಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ದಾಮೋದರ್ ಭಂಡಾರಿ ತಿಳಿಸಿದರು.
‘ವಿದ್ಯುತ್ ಕೈಕೊಟ್ಟಾಗ ಸಾರ್ವಜನಿಕರು ಹೆಸ್ಕಾಂ ವಲಯದಲ್ಲಿ ತೊಂದರೆ ಉಂಟಾಗಿದೆ ಎಂದು ಸಹಜವಾಗಿ ಭಾವಿಸುತ್ತಾರೆ. ಕೆಲ ಸಲ ಕುಮಟಾಕ್ಕೆ ವಿದ್ಯುತ್ ಸರಬರಾಜು ಮಾಡುವ 110 ಕೆ.ವಿ. ಲೈನ್‌ನಲ್ಲಿ ತೊಂದರೆ ಉಂಟಾಗುವುದು ಸಾರ್ವಜನಿಕರ ಅರಿವಿಗೆ ಬರುವುದಿಲ್ಲ’ ಎಂದು ಕುಮಟಾ ಹೆಸ್ಕಾಂ ಎಇಇ ರಾಜೇಶ ಮಡಿವಾಳ ಅಳಲು ಹೇಳಿಕೊಂಡರು.
‘110 ಕೆ.ವಿ. ಲೈನ್ ಸುಸ್ಥಿತಿಯಲ್ಲಿಡದಿದ್ದರೆ ಬೇಸಿಗೆಯಲ್ಲಿ ಜನರಿಗೆ ಇನ್ನಷ್ಟು ತೊಂದರೆ ಉಂಟಾಗುತ್ತದೆ’ ಎಂದು ಬೊಗ್ರಿಬೈಲ್ ಗ್ರಾಮದ ರೈತ ನಾರಾಯಣ ನಾಯ್ಕ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.