ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಬೆಳೆ ರಕ್ಷಣೆಗೆ ಕೊಳವೆಬಾವಿ ಜೆಟ್‌ ಮೊರೆ

ಕೈಕೊಟ್ಟ ಮುಂಗಾರು: ಮುಂಡಗೋಡದಲ್ಲಿ ಆವರಿಸಿದ ಬರದ ಛಾಯೆ
Published 4 ಸೆಪ್ಟೆಂಬರ್ 2023, 5:26 IST
Last Updated 4 ಸೆಪ್ಟೆಂಬರ್ 2023, 5:26 IST
ಅಕ್ಷರ ಗಾತ್ರ

ಶಾಂತೇಶ ಬೆನಕನಕೊಪ್ಪ

ಮುಂಡಗೋಡ: ಬಿತ್ತಿದ ಬೀಜ ಮೊಳಕೆ ಒಡೆಯುವಾಗಲೂ ನೀರಿನ ಅಭಾವ ಎದುರಿಸಿದ್ದ ರೈತರು, ಕಾಳು ಕಟ್ಟುವ ಹಂತದಲ್ಲಿ ಬೆಳೆ ಇರುವಾಗಲೂ ಮಳೆಯ ಕೊರತೆ ಅನುಭವಿಸುತ್ತಿದ್ದಾರೆ. ಟ್ಯಾಂಕರ್‌ ನೀರಿನ ಮೂಲಕ ಬೆಳೆ ರಕ್ಷಣೆಗೆ ಆಗ ಮುಂದಾಗಿದ್ದ ರೈತರು, ಈಗ ಕೊಳವೆಬಾವಿಯ ಜೆಟ್‌ ಮೂಲಕ ನೀರು ಸಿಂಪಡಿಸುತ್ತ ಬೆಳೆ ರಕ್ಷಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಬಹುತೇಕ ಬರದ ಛಾಯೆ ಮೂಡಿದಂತಾಗಿದೆ. ಜುಲೈ ತಿಂಗಳಲ್ಲಿ ಮಾತ್ರ ವಾಡಿಕೆ ಮಳೆಯ ಆಸುಪಾಸಿನಷ್ಟು ಮಳೆಯಾಗಿದ್ದು ಬಿಟ್ಟರೇ, ಈ ಸಲದ ಮುಂಗಾರು ಅರೆಮಲೆನಾಡಿನ ಭೂಮಿಯನ್ನು ತಂಪಾಗಿಸುವಲ್ಲಿ ಹಿಂದೇಟು ಹಾಕಿದೆ.

ತಾಲ್ಲೂಕಿನಲ್ಲಿ ನಿಗದಿತ ಗುರಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳವನ್ನು ಈ ಸಲ ಬೆಳೆಯಲಾಗಿದೆ. ಜುಲೈ ತಿಂಗಳು ಒಮ್ಮೆಲೆ ಮಳೆ ಸುರಿದಿತ್ತು. ಇದರಿಂದ ಅತಿಯಾದ ತೇವಾಂಶದಿಂದ ಕೆಲವೆಡೆ ಗೋವಿನಜೋಳ ಹಾನಿಯಾಗಿದೆ. ಮತ್ತೊಂದೆಡೆ ತೇವಾಂಶ ಕೊರತೆಯಿಂದ ಕೆಲವೆಡೆ ಭತ್ತದ ಇಳುವರಿ ಕುಂಠಿತಗೊಂಡಿದೆ.

‘ಈ ವರ್ಷದ ಮುಂಗಾರು ರೈತರ ಕೈಹಿಡಿಯಲಿಲ್ಲ. ಒಣ ಬಿತ್ತನೆ ಮಾಡಿದಾಗಲೂ ಮಳೆಯ ಅಭಾವ ಕಾಡಿತು. ಭೂಮಿಯಿಂದ ಸಸಿಗಳು ಮೇಲೆದ್ದಾಗಲೂ ಮಳೆ ಕೈಕೊಟ್ಟಿತು. ಕೆಲವು ದಿನ ಸುರಿದ ದೊಡ್ಡ ಮಳೆಯಿಂದ ಕೆರೆಕಟ್ಟೆಗಳು ತುಂಬಿ, ಬತ್ತಿದ್ದ ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ ಏರಿತ್ತು. ಅದರ ನಂತರ ಮತ್ತೆ ಮಳೆ ಮುನಿಸಿಕೊಂಡಿದೆ. ಬೆಳೆಗಳಿಗೆ ಈಗ ನೀರು ಸಿಗದೆ ಪರದಾಡುತ್ತಿದ್ದೇವೆ’ ಎಂದು ರೈತ ವಿನಾಯಕ ವಾಲ್ಮೀಕಿ ಹೇಳಿದರು.

‘ನಾಟಿ ಮಾಡಿದ ಭತ್ತದ ಗದ್ದೆಗಳಲ್ಲಿಯೂ ನೀರಿಗಾಗಿ ಭೂಮಿ ಬಾಯ್ದೆರೆದಿದೆ. ಕೊಳವೆ ಬಾವಿಯ ಮೂಲಕ ಗದ್ದೆಗಳಿಗೆ ನೀರುಣಿಸುತ್ತ ಬೆಳೆ ರಕ್ಷಣೆ ಮಾಡಲಾಗುತ್ತಿದೆ. ಕೊಳವೆ ಬಾವಿ ಸೌಲಭ್ಯ ಇಲ್ಲದ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಅಕ್ಕಪಕ್ಕದ ರೈತರಿಂದ ನೀರಿನ ಸಂಪರ್ಕ ಪಡೆದು ಬೆಳೆ ರಕ್ಷಿಸಿಕೊಳ್ಳುತ್ತಿದ್ದಾರೆ’ ಎಂದು ಪ್ರಗತಿಪರ ರೈತ ಶಿವಕುಮಾರ ಪಾಟೀಲ ಹೇಳಿದರು.

ತಾಲ್ಲೂಕಿನಲ್ಲಿ ಆಗಸ್ಟ್‌ನಲ್ಲಿ ಶೇ 78 ರಷ್ಟು ಮಳೆ ಕೊರತೆಯಾಗಿದ್ದು ಭತ್ತ ಗೋವಿನಜೋಳ ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳ ಇಳುವರಿಯಲ್ಲಿ ಶೇ 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಂಠಿತವಾಗಿದೆ
ಎಂ.ಎಸ್.ಕುಲಕರ್ಣಿ ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT