ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೈಗಂಬರರ ಬದುಕು ಎಲ್ಲರಿಗೂ ಪ್ರೇರಕವಾಗಲಿ: ವಿರೇಂದ್ರ ಶಾನಭಾಗ

Published : 25 ಸೆಪ್ಟೆಂಬರ್ 2024, 14:37 IST
Last Updated : 25 ಸೆಪ್ಟೆಂಬರ್ 2024, 14:37 IST
ಫಾಲೋ ಮಾಡಿ
Comments

ಭಟ್ಕಳ: ತನ್ನವರನ್ನುಪ್ರೀತಿಸಿ ಪರಧರ್ಮವನ್ನು ಗೌರವಿಸಿ ಮಾದರಿ ಬದುಕು ಬದುಕಿದ ಪ್ರವಾದಿ ಮುಹಮ್ಮದ್ ಪೈಗಂಬರರ ಬದುಕು ಎಲ್ಲರಿಗೂ ಪ್ರೇರಕವಾಗಲಿ ಎಂದು ನ್ಯೂ ಇಂಗ್ಲಿಷ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿರೇಂದ್ರ ಶಾನಭಾಗ ಹೇಳಿದರು.

ಪಟ್ಟಣದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ ಮಹಾನ್ ಚಾರಿತ್ರ್ಯವಂತ’ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸುಳ್ಳನ್ನು ಸತ್ಯವೆಂದು ಬಿಂಬಿಸುತ್ತಿರುವ ಇಂದಿನ ಸಾಮಾಜಿ ಮಾಧ್ಯಮಗಳ ಯುಗದಲ್ಲಿ ನಾವೆಲ್ಲರೂ ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತ ಇನ್ನೊಬ್ಬರ ಧರ್ಮ ಮತ್ತು ನಂಬಿಕೆಗಳ ಕುರಿತು ಒಳ್ಳೆಯ ಭಾವನೆ ಮೂಡಿಸಿಕೊಂಡು ಬದುಕಲು ಕಲಿಯಬೇಕಾಗಿದೆ. ನಾವೆಲ್ಲರೂ ಪ್ರವಾದಿಗಳ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕರಿಕಲ್ ಚರ್ಚ್‌ನ ಧರ್ಮಗುರು ಫಾ.ಲೋರೆನ್ಸ್ ಫರ್ನಾಂಡೀಸ್ ಮಾತನಾಡಿ, ಸ್ನೇಹ ಮತ್ತು ಸದ್ಗುಣಗಳಿಂದ ಮನುಷ್ಯನನ್ನು ಗೆಲ್ಲಬಹುದೇ ವಿನಾಃ ಬಲ ಮತ್ತು ಶಕ್ತಿಯಿಂದ ಅಲ್ಲ ಎನ್ನುವುದು ಪ್ರವಾದಿ ಮುಹಮ್ಮದ್ ಅವರ ಸಂದೇಶವಾಗಿತ್ತು. ನಮ್ಮಲ್ಲಿ ಒಳ್ಳೆಯ ಹೃದಯ ಮತ್ತು ಉತ್ತಮ ಯೋಚನೆಗಳಿದ್ದಾಗ ಮಾತ್ರ ನಮ್ಮ ಸಮಾಜ ಉತ್ತಮವಾಗಿರಲು ಸಾಧ್ಯ ಎಂದರು.

ಮುರಡೇಶ್ವರದ ಆರ್.ಎನ್.ಎಸ್ ಪೊಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಕೆ. ಮರಿಸ್ವಾಮಿ, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಯಿಲ್ ಮಾತನಾಡಿದರು.

ಮಜ್ಲಿಸೆ ಇಸ್ಲಾಹ್ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಸದ್ಭಾವನ ಮಂಚ್ ಗೌರವ ಅಧ್ಯಕ್ಷ ಮೌಲಾನ ಮುನವ್ವರ್ ಪೇಶಮಾಮ್, ಜಮಾಅತೆ ಇಸ್ಲಾಮಿ ಹಿಂದ್ ಉ.ಕ ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ಸಿರಶಿ ಇದ್ದರು. ಸೀರತ್ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ನಿರೂಪಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಧನ್ಯವಾದ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT