ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆ ಕೇವಲ ದಾಳಿಗೆ ಇರುವುದಲ್ಲ: ಸಚಿವ ಕೋಟ

ಸಾರ್ವಜನಿಕರಿಗೆ ಮರಳು ದೊರಕಿಸುಲು ತಾಕೀತು
Last Updated 23 ನವೆಂಬರ್ 2022, 16:12 IST
ಅಕ್ಷರ ಗಾತ್ರ

ಕಾರವಾರ: ‘ಇಲಾಖೆ ಇರುವುದು ಕೇವಲ ದಾಳಿ ಮಾಡುವುದಕ್ಕಲ್ಲ. ಜನರಿಗೆ ಮರಳು ದೊರಕಿಸಿಕೊಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದಾರೆ.

ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಬುಧವಾರ ಹಮ್ಮಿಕೊಳ್ಳಲಾದ ವಿಡಿಯೊ ಸಂವಾದ ಸಭೆಯಲ್ಲಿ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

‘ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಹೇರಲಾಗಿರುವ ನಿರ್ಬಂಧವನ್ನು ತೆರವು ಮಾಡಲು ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿಗಳು, ‘ಮರಳು ದಿಬ್ಬಗಳ ತೆರವಿಗೆ ಪರವಾನಗಿ ಹೊಂದಿರುವವರ ಅವಧಿಯು ಇನ್ನೊಂದು ತಿಂಗಳಲ್ಲಿ ಮುಕ್ತಾಯವಾಗುತ್ತದೆ. ಮರಳು ದಿಬ್ಬಗಳನ್ನು ಹೊಸದಾಗಿ ಗುರುತಿಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದೆ’ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ‘ಅವಧಿ ಮುಗಿಯುವ ತನಕ ಯಾಕೆ ಕಾಯಬೇಕು? ಮರಳು ದಿಬ್ಬಗಳನ್ನು ಗುರುತಿಸಲು ಯಾಕೆ ಕಾಯಬೇಕು? ಈ ಪ್ರಕ್ರಿಯೆಗಳು ತಡವಾದಷ್ಟೂ ಜನ ನಮ್ಮ ಜೊತೆ ವಾದ ಶುರು ಮಾಡುತ್ತಾರೆ. ಸಿ.ಆರ್.ಝೆಡ್ ವಲಯದಲ್ಲಿ ಮರಳು ಗಣಿಗಾರಿಕೆಯ ವಿರುದ್ಧ ಮಂಗಳೂರಿನವರು ಎನ್.ಜಿ.ಟಿ.ಗೆ ಅರ್ಜಿ ಸಲ್ಲಿಸಿದ್ದೇ ಹೊರತು ಉತ್ತರ ಕನ್ನಡದವರಲ್ಲ. ತಕ್ಷಣ ಸಮೀಕ್ಷೆ ಕೈಗೊಂಡು ಮರಳು ತೆಗೆಯಲು ಕ್ರಮ ಕೈಗೊಳ್ಳಿ’ ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರತಿಕ್ರಿಯಿಸಿ, ‘ಡಿ.25ರಂದು ಮರಳು ಕಾರ್ಯಪಡೆಯ ಸಭೆ ಕರೆಯಲಾಗಿದೆ. ಅಂದು ನಿರ್ಧರಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ‘15ನೇ ಹಣಕಾಸು ಯೋಜನೆಯಡಿ ₹ 15 ಕೋಟಿಗೆ ಬಿಲ್ ಮಾಡಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಒಂದು ಮತ್ತು ಎರಡನೇ ಕಂತು ಬಂದಿವೆ’ ಎಂದರು.

ಪಂಚತಂತ್ರ 2.0 ತಂತ್ರಾಂಶದಲ್ಲಿ ತಮ್ಮ ಮಾಹಿತಿಯನ್ನು ಅಳವಡಿಸಿ ವೇತನ ಪಾವತಿಸುವಂತೆ ನೀರುಗಂಟಿಗಳು ಕೆಲವು ದಿನಗಳ ಹಿಂದೆ ಧರಣಿ ಹಮ್ಮಿಕೊಂಡಿದ್ದರು. ಈ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ ಪ್ರಿಯಾಂಗಾ, ‘ಇಲಾಖೆಯ ಸುತ್ತೋಲೆ ಪ್ರಕಾರ ತಂತ್ರಾಂಶದಲ್ಲಿ ಅಳವಡಿಸಲು ಅವಕಾಶವಿಲ್ಲ. ಹಾಗಾಗಿ ಸದ್ಯಕ್ಕೆ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿಲ್ಲ’ ಎಂದು ತಿಳಿಸಿದರು. ಈ ಬಗ್ಗೆ ಚರ್ಚಿಸಿ ತಿಳಿಸುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಹೂಳೆತ್ತಲು ಅನುಮೋದನೆ:

ಉತ್ತರ ಕನ್ನಡದ ಐದು ಸೇರಿದಂತೆ ರಾಜ್ಯದ ಎಂಟು ಬಂದರುಗಳಲ್ಲಿ ಹೂಳು ತೆಗೆಯುವ ಕಾಮಗಾರಿಗೆ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ತದಡಿ, ಭಟ್ಕಳ, ಹೊನ್ನಾವರ, ಕಾರವಾರ ಮತ್ತು ಅಮದಳ್ಳಿ ಬಂದರುಗಳಲ್ಲಿ ಡ್ರೆಜಿಂಗ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT