ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ‌. ಸಿಇಒ ಕೊಠಡಿಯಲ್ಲಿ ಶಾಸಕಿ, ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ಜಟಾಪಟಿ

Last Updated 3 ಮಾರ್ಚ್ 2023, 9:02 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಮಾಜಾಳಿ ಗ್ರಾಮ ಪಂಚಾಯ್ತಿ ಪಿಡಿಒ ವರ್ಗಾವಣೆ ವಿಚಾರದ ಕುರಿತು ಶುಕ್ರವಾರ ಚರ್ಚೆ ನಡೆಸುವ ವೇಳೆ ಜಿಲ್ಲಾ ಪಂಚಾಯ್ತಿ ಸಿಇಒ ಕೊಠಡಿಯಲ್ಲಿ ಶಾಸಕಿ ರೂಪಾಲಿ ನಾಯ್ಕ, ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ನಡುವೆ ಜಟಾಪಟಿ ನಡೆದಿದೆ.

ಸಿಇಒ ಈಶ್ವರ ಕಾಂದೂ ಎದುರು ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದು ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.

'ಕಳೆದ ಆರೇಳು ತಿಂಗಳಿನಿಂದ ಗ್ರಾಮ ಪಂಚಾಯ್ತಿಗೆ ಮೂವರು ಪಿಡಿಒಗಳು ಬದಲಾದರು. ಇದರಿಂದ ಅಭಿವೃದ್ಧಿ ಚಟುವಟಿಕೆಗೆ ಹಿನ್ನೆಡೆ ಉಂಟಾಗಿತ್ತು. ಹೀಗಾಗಿ ಸಮಸ್ಯೆ ಬಗೆಹರಿಸಲು ಸಿಇಒ ಬಳಿ ಚರ್ಚಿಸಲು ಮಾಜಿ ಶಾಸಕ ಸತೀಶ್ ಸೈಲ್ ಕರೆದುಕೊಂಡು ಹೋಗಿದ್ದಾಗ ಪರಸ್ಪರ ವಾಗ್ವಾದದ ಘಟನೆ ನಡೆದಿದೆ' ಎಂದು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಹೇಳಿದರು.

'ಸದಸ್ಯರ ಕೋರಿಕೆ ಮೇರೆಗೆ ಸತೀಶ್ ಸೈಲ್ ಸಿಇಒ ಭೇಟಿಗೆ ಮುಂದಾಗಿದ್ದರು. ಅವರ ಕಚೇರಿಯಲ್ಲಿ ಮಾತನಾಡುವ ವೇಳೆ ಶಾಸಕಿ ರೂಪಾಲಿ ನಾಯ್ಕ ತಮ್ಮ ಬೆಂಬಲಿಗರೊಂದಿಗೆ ಸಿಇಒ ಕಚೇರಿಗೆ ಬಂದು ಅವರನ್ನು ಬೇರೆ ಚರ್ಚೆಗೆ ಕರೆದೊಯ್ದರು. ಸಿಇಒ ಯಾವುದೇ ಸೂಚನೆ ನೀಡದೆ ಏಕಾಏಕಿ ಎದ್ದು ಹೋದರು' ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ಕೆ.ಶಂಭು ಶೆಟ್ಟಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು‌.

'ಸಿಇಒ ಸಮ್ಮುಖದಲ್ಲಿಯೆ ಶಾಸಕಿ ರೂಪಾಲಿ ನಾಯ್ಕ ಸತೀಶ್ ಸೈಲ ಅವರನ್ನು ಮದ್ಯ ವ್ಯಸನಿ ಎಂದು ಅಪಹಾಸ್ಯ ಮಾಡಿದ್ದಾರೆ. ಇದಕ್ಕೆ ಖಾರವಾಗಿ 'ಕುಡಿಯಲು ನಿಮ್ಮಪ್ಪ ಹಣ ಕೊಡುತ್ತಾರೆಯೆ' ಎಂದು ಸೈಲ್ ಪ್ರತಿಕ್ರಿಯಿಸಿದ್ದು ನಿಜ. ಅಷ್ಟಕ್ಕೆ ಸಿಟ್ಟಾದ ಶಾಸಕಿ ಪೇಪರ್ ವೇಟ್ ಎಸೆಯಲು ಪ್ರಯತ್ನಿಸಿದರು. ಅವರ ಬೆಂಬಲಿಗರು ತಡೆದರು. ಈ ವೇಳೆ ಶಾಸಕರ ಬೆಂಬಲಿಗರು ಕೊಠಡಿಗೆ ಮುನ್ನುಗ್ಗಿ ಬಂದಿದ್ದಾರೆ‌. ಬಳಿಕ ಪೊಲೀಸ್ ಅಧಿಕಾರಿಗಳಿಗೂ ಮಾಜಿ ಶಾಸಕರನ್ನು ಬಂಧಿಸಲು ಸೂಚನೆ ನೀಡಿದರು' ಎಂದು ಆರೋಪಿಸಿದರು.

'ಮಾಜಿ ಶಾಸಕರ ಜತೆಗಿದ್ದವರು ನಾನು ಹಲ್ಲೆ ನಡೆಸಿದ್ದೇನೆ ಎಂದು ವದಂತಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಅವರ ಮಾನಸಿಕ ಸ್ಥಿತಿ ಸರಿ ಇಲ್ಲ. ಸಿಇಒ ಕೊಠಡಿಗೆ ತೆರಳಿದಾಗ ಮಾಜಿ ಶಾಸಕರೇ ದರ್ಪ ಮೆರೆದಿದ್ದಾರೆ. ನನ್ನ ಮೇಲೆ ರೋಷದಿಂದ ಮಾತನಾಡಿದಾಗ ನಾನು ಕಟುವಾಗಿ ಪ್ರತಿಕ್ರಿಯಿಸಿದ್ದೇನೆ' ಎಂದು ಶಾಸಕಿ ರೂಪಾಲಿ ನಾಯ್ಕ ಪ್ರತಿಕ್ರಿಯಿಸಿದರು‌.

'ಚುನಾವಣೆಯಲ್ಲಿ ಸೋತ ನಂತರವೂ ತಾನಿನ್ನೂ ಅಧಿಕಾರದಲ್ಲಿರುವ ಅಮಲಿನಲ್ಲಿದ್ದಾರೆ. ಅವರು ದರ್ಪದಿಂದ ಮಾತನಾಡಿರುವುದು ಕಾಂಗ್ರೆಸ್ ಸಂಸ್ಕೃತಿ ಬಿಂಬಿಸಿದೆ' ಎಂದರು.

'ಘಟನೆ ಸಂಬಂಧ ದೂರು ಸತೀಶ್ ಸೈಲ್ ವಿರುದ್ಧ ದೂರು ನೀಡಲಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT