ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ನಗರಸಭೆ ಸಿಬ್ಬಂದಿ

Published : 3 ಆಗಸ್ಟ್ 2024, 5:49 IST
Last Updated : 3 ಆಗಸ್ಟ್ 2024, 5:49 IST
ಫಾಲೋ ಮಾಡಿ
Comments

ಶಿರಸಿ: ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ನಗರಸಭೆ ಸಿಬ್ಬಂದಿ ನಿಯೋಜನೆಯಿಂದ ನಗರಾಡಳಿತದ ಕಾರ್ಯಚಟುವಟಿಕೆಗೆ ಗ್ರಹಣ ಹಿಡಿದಂತಾಗಿದೆ. ಶಾಲೆ ಬಿಟ್ಟವರನ್ನು ಹುಡುಕಲು ಸಿಬ್ಬಂದಿ ನಗರಸಭೆಯನ್ನೇ ಬಿಟ್ಟ ಕಾರಣಕ್ಕೆ ಅಲ್ಲಿನ ಕೆಲಸ ಕಾರ್ಯಗಳು ನಿಂತ ನೀರಾಗಿದ್ದು, ಜನರು ಹಿಡಿಶಾಪ ಹಾಕುವಂತಾಗಿದೆ. 

ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ 18 ಸಾವಿರಕ್ಕೂ ಹೆಚ್ಚು ಮನೆಗಳಿದ್ದು, ಅಂದಾಜು 80 ಸಾವಿರ ಜನಸಂಖ್ಯೆಯಿದೆ. ಪ್ರಸ್ತುತ ಸರ್ಕಾರಿ ಆದೇಶದಂತೆ ನಗರ ಪ್ರದೇಶದಲ್ಲಿ ಶಾಲೆಬಿಟ್ಟ ಮಕ್ಕಳ ಸಮೀಕ್ಷೆಗೆ ಪೌರಾಯುಕ್ತ ಕಾಂತರಾಜ್ ನಗರಸಭೆ ಸಿಬ್ಬಂದಿ ಹಲವು ತಂಡ ರಚಿಸಿ ಸಮೀಕ್ಷೆ ಕಾರ್ಯ ಸೂಚಿಸಿದ್ದಾರೆ.

ಈಗಾಗಲೇ ನಗರಸಭೆ ಕಂದಾಯ ವಿಭಾಗದ ಸಿಬ್ಬಂದಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿ ವಾರ ಕಳೆದಿದ್ದು, ಮೊದಲ ಹಂತದಲ್ಲಿ ಶೇ 25ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ನಗರಸಭೆ ಸಿಬ್ಬಂದಿಯ ಕೆಲಸದ ಒತ್ತಡ ಹಾಗೂ ಅನುಭವದ ಕೊರತೆಯಿಂದಾಗಿ ಶೇ 75ರಷ್ಟು ಸಮೀಕ್ಷೆ ಕಾರ್ಯ ಬಾಕಿಯಿದೆ. ಸರ್ವೆ ಕಾರ್ಯ ಪೂರ್ಣಗೊಳ್ಳಲು ಇನ್ನೂ ತಿಂಗಳ ಕಾಲ ಹಿಡಿಯುವ ಸಾಧ್ಯತೆಯಿದ್ದು, ಈ ನಡುವೆ ನಗರಸಭೆಗೆ ಬರುವ ಸಾರ್ವಜನಿಕರ ಕಾರ್ಯ ನನೆಗುದಿಗೆ ಬೀಳುವಂತಾಗಿದೆ. ಇದೇ ಕಾರಣಕ್ಕೆ ಜನರು ನಗರಸಭೆ ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಸರ್ವೆ ಆ್ಯಪ್ ಬಳಸಿಕೊಂಡು ಸರ್ವೆ ಕಾರ್ಯ ನಡೆಸಲಾಗುತ್ತಿದ್ದು, ವಿವಿಧ ಕಾರಣಗಳಿಂದ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿರುವ ಮಕ್ಕಳನ್ನು ಪತ್ತೆಹಚ್ಚುವ ಸಲುವಾಗಿ ಬೀದಿ ಬದಿ ವ್ಯಾಪಾರಸ್ಥರು, ಕಾರ್ಮಿಕರು, ಮನೆಗೆಲಸಕ್ಕೆ ಹೋಗುವವರು, ಸರ್ಕಾರಿ ಶಾಲೆಯಿಂದ ಹೊರಗುಳಿದ ಮಕ್ಕಳು, ಖಾಸಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೆ ನಡೆಸಲಾಗುತ್ತಿದೆ.

ಸಮೀಕ್ಷೆ ಸಂದರ್ಭದಲ್ಲಿ ಬೀದಿಬದಿ ಮಕ್ಕಳು, ಅನಾಥ, ಭಿಕ್ಷೆ ಬೇಡುವ ಮಕ್ಕಳು, ಬಾಲಾಪರಾಧಿಗಳು ಕಂಡು ಬಂದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಬೇಕು. ಪೋಷಕರು ಶಾಲೆಗೆ ಕಳುಹಿಸಲು ಒಪ್ಪದಿದ್ದರೆ ಅವರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬೇಕು. ಕಾರ್ಮಿಕ ಶಿಬಿರಗಳ ನಕ್ಷೆ ತಯಾರಿಸಿ ಅದನ್ನು ಅಧಿಕಾರಿಗಳಿಗೆ, ಕಂದಾಯ ನಿರೀಕ್ಷಕರಿಗೆ, ಶಿಕ್ಷಣ ಇಲಾಖೆಯ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಬೇಕು.

‘ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಪೋಷಕರನ್ನು ಮನವೊಲಿಸುವ ಕೆಲಸ ಮಾಡಬೇಕು. ನಿತ್ಯ ಇವೆಲ್ಲ ಕೆಲಸ ಮಾಡುವುದರಿಂದ ನಗರಸಭೆ ಕೆಲಸಕ್ಕೆ ಹಿನ್ನಡೆ ಆಗುತ್ತಿರುವುದು ನಿಜ’ ಎಂಬುದು ಸಮೀಕ್ಷೆಯಲ್ಲಿ ತೊಡಗಿಕೊಂಡ ನಗರಸಭೆ ಸಿಬ್ಬಂದಿ ಮಾತಾಗಿದೆ. 

‘ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಫಾರ್ಮ್ ನಂಬರ್ 3ರ ವಿತರಣೆ ಗೊಂದಲದ ಗೂಡಾಗಿದೆ. ಅಂಗಡಿಕಾರರಿಗೆ ಲೈಸೆನ್ಸ್ ವಿತರಣೆಗೆ ವಿಳಂಬ ಆಗುತ್ತಿದೆ. ಕರ ವಸೂಲಿಯಂತೂ ಸಾಕಷ್ಟು ಬಾಕಿಯಿದೆ. ಸದ್ಯ ಮಳೆಯಿಂದ ಎಲ್ಲ ವಾರ್ಡ್ ವ್ಯಾಪ್ತಿಯಲ್ಲಿಯೂ ಸಮಸ್ಯೆಗಳಿವೆ. ಇಂಥ ಗುರುತರ ಕಾರಣಗಳಿರುವಾಗ ಶಿಕ್ಷಣ ಇಲಾಖೆಯ ಜವಾಬ್ದಾರಿ ನಗರಾಡಳಿತದ ಸಿಬ್ಬಂದಿ ಮೇಲೆ ಹೇರುವುದರಿಂದ ಇನ್ನಷ್ಟು ತೊಂದರೆ ಆಗುವಂತಾಗಿದೆ’ ಎಂಬುದು ನಗರಸಭೆ ಸದಸ್ಯರ ಅಭಿಪ್ರಾಯ.

ಸಮೀಕ್ಷೆಗೆ ನಗರಸಭೆ 21 ಸಿಬ್ಬಂದಿ ನೇಮಕದಿಂದ ನಗರಸಭೆ ಕರ ವಸೂಲಿಗೆ ಹಿನ್ನಡೆಯಾಗಿದೆ. ಅಭಿವೃದ್ದಿ ಹಾಗೂ ಸಾರ್ವಜನಿಕ ಕೆಲಸಕ್ಕೆ ತೊಂದರೆ ಆಗುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು
ಕುಮಾರ್ ಬೋರ್ಕರ್ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ
ಸರ್ಕಾರದ ಆದೇಶದಂತೆ ಶಾಲೆಬಿಟ್ಟ ಮಕ್ಕಳ ಸಮೀಕ್ಷೆಯನ್ನು ಆರಂಭಿಸಲಾಗಿದೆ. ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಜನರ ಕೆಲಸ ಮಾಡಿಕೊಡಲು ಶ್ರಮಿಸಲಾಗುತ್ತಿದೆ
ಕಾಂತರಾಜ್ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT