ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಸೆಗಣಿ ಗೊಬ್ಬರ ಬಳಸಿ ಬಂಪರ್ ಈರುಳ್ಳಿ ಬೆಳೆ ಬೆಳೆದ ರೈತ

Published 6 ಮೇ 2024, 14:30 IST
Last Updated 6 ಮೇ 2024, 14:30 IST
ಅಕ್ಷರ ಗಾತ್ರ

ಕುಮಟಾ: ಕೆಲ ವರ್ಷಗಳಿಂದ ರೋಗ ಬಾಧೆಯಿಂದ ತತ್ತರಿಸುತ್ತಿರುವ ಸಮೀಪದ ವನ್ನಳ್ಳಿ ಸಿಹಿ ಈರುಳ್ಳಿ ಬೆಳೆ ಈ ಸಲ ಸಂಪೂರ್ಣ ನೆಲ ಕಚ್ಚಿದೆ. ಸಾವಯವ ಗೊಬ್ಬರ ಬಳಕೆ ಮಾಡಿರುವ ಒಬ್ಬ ರೈತ ಮಾತ್ರ ಉತ್ತಮ ಇಳುವರಿ ಪಡೆದು ಹೆಚ್ಚು ಲಾಭ ಗಳಿಸಿದ್ದಾರೆ.

ತಾಲ್ಲೂಕಿನ ಅಳ್ವೆಕೋಡಿ, ವನ್ನಳ್ಳಿ ಹಾಗೂ ಗೋಕರ್ಣದಲ್ಲಿ ಮಾತ್ರ ಹೇರಳ ಪ್ರಮಾಣದಲ್ಲಿ ಸಾವಿರಾರು ಕ್ವಿಂಟಾಲ್ ಸಿಹಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಅಳ್ವೆಕೋಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗದ್ದೆಗಳಲ್ಲಿ ಸಿಹಿ ಈರುಳ್ಳಿ ಬೆಳೆಯುತ್ತಿದ್ದ ರೈತರು ಹೆದ್ದಾರಿ ಪಕ್ಕದಲ್ಲಿಯೇ ಈರುಳ್ಳಿಯನ್ನು ಆಕರ್ಷಕ ಗುಚ್ಚ ಕಟ್ಟಿ ರಾಶಿಗಳನ್ನಿಟ್ಟು ಮಾರಾಟ ಮಾಡುತ್ತಿದ್ದರು.

ಹೆಚ್ಚಾಗಿ ಹೊಟೆಲ್ ಗಳಲ್ಲಿ ಸಲಾಡ್ ಗಾಗಿ ಬಳಕೆಯಾಗುವ ಈ ಸಿಹಿ ಈರುಳ್ಳಿಯನ್ನು ಕೇರಳ, ಗೋವಾ, ಮಹಾರಾಷ್ಟ್ರಗಳಿಗೆ ಸಗಟಾಗಿ ಮಾರಾಟ ಮಾಡಲಾಗುತ್ತಿತ್ತು. ಐದಾರು ವರ್ಷಗಳ ಹಿಂದೆ ಅಂಟಿದ ಹಾವು ಸುಳಿ ರೋಗ ಈರುಳ್ಳಿ ಬೆಳೆ ನಾಶಕ್ಕೆ ಕಾರಣವಾಗಿದೆ. ವಿಜ್ಞಾನಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಂಶೋಧನೆ ನಡೆಸಿ ಉಪಚಾರ ಮಾಡಿದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ. ರೋಗದ ಕಾರಣದಿಂದಾಗಿ ಒಂದು ಎಕರೆಗೆ 40 ಕ್ವಿಂಟಾಲ್ ಇಳುವರಿ ಪಡೆಯುವ ರೈತರು ಈಗ ಎರಡು, ಮೂರು ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ.

ಬೆಳೆಗಾರ ಬಾಬು ನಾಯ್ಕ, ‘ವನ್ನಳ್ಳಿ ಗ್ರಾಮದಲ್ಲಿ ಸುಮಾರು ನೂರು ಎಕರೆ ಪ್ರದೇಶದಲ್ಲಿ ಸಿಹಿ ಇರುಳ್ಳಿ ಬೆಳೆಯಲಾಗುತ್ತಿತ್ತು. ರೋಗ ಬಾಧೆ ಹಾನಿಯಿಂದ ಈರುಳ್ಳಿ ಬದಲು ಈಗ ರೈತರು ಬೆಂಡೆ, ಹರಿವೆ ಸೊಪ್ಪು, ಕಲ್ಲಂಗಡಿ ಬೆಳೆಯುತ್ತಿದ್ದಾರೆ’ ಎಂದರು.

ರಾಸಾಯನಿಕ ಗೊಬ್ಬರ ಬಳಕೆ ಇಲ್ಲ:

ಪ್ರಗತಿಪರ ರೈತ ಹೊನ್ನಪ್ಪ ನಾಯ್ಕ,‘ಈ ಸಲ ಒಂದು ಎಕರೆಗೆ ನಲವತ್ತು ಕ್ವಿಂಟಾಲ್ ಸಿಹಿ ಈರುಳ್ಳಿ ಬೆಳೆ ಬೆಳೆದಿದ್ದೇನೆ. ಯೂರಿಯಾ ಗೊಬ್ಬರ ಅಧಿಕ ಪ್ರಮಾಣದಲ್ಲಿ ಬಳಕೆ ಮಾಡಿದ್ದರಿಂದ ಹಾವು ಸುಳಿ ರೋಗ ಬರುತ್ತದೆ ಎನ್ನುವ ನಂಬಿಕೆ ಎಲ್ಲರಲ್ಲಿ ಇದೆ. ಆದ್ದರಿಂದ ನಾನು ಈ ಸಲ ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಕೇವಲ ಸೆಗಣಿ ಗೊಬ್ಬರ ಬಳಸಿದೆ’ ಎಂದರು.

‘ನನ್ನ ನಂಬಿಕೆಯಂತೆ ಸೆಗಣಿ ಗೊಬ್ಬರ ಬಳಕೆ ಫಲ ಕೊಟ್ಟಿದೆ. ನನ್ನ ಅಕ್ಕಪಕ್ಕದ ರೈತರ ಬೆಳೆಗಳಿಗೆ ರೋಗ ತಗುಲಿದರೂ ನಮ್ಮ ಬೆಳೆಗೆ ಅಷ್ಟಾಗಿ ಸಮಸ್ಯೆ ಉಂಟಾಗಲಿಲ್ಲ. ಕೆ.ಜಿ. ಗೆ ನೂರರಂತೆ ಮಾರಾಟ ಮಾಡಿ ಉತ್ತಮ ಆದಾಯ ಕೂಡ ಗಳಿಸಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT