ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮದು ಒಂಬತ್ತು ವರ್ಷಗಳ ಸರ್ಕಾರ: ಡಿ.ಕೆ. ಶಿವಕುಮಾರ್‌

Published 27 ಮಾರ್ಚ್ 2024, 15:24 IST
Last Updated 27 ಮಾರ್ಚ್ 2024, 15:24 IST
ಅಕ್ಷರ ಗಾತ್ರ

ಕುಮಟಾ: ‘ಕಳೆದ ಸಂಸತ್ ಚುನಾವಣೆಯಲ್ಲಿ 3–4 ಲಕ್ಷ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಯನ್ನು ಬಿಜೆಪಿ ಈ ಸಲ ಏಕೆ ಬದಲಿಸಿತು? ಬಿಜೆಪಿಗೆ ಭಯವಿರುವುದರಿಂದಲೇ ಅದು ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಂದ ನಾಯಕರನ್ನು ಸೆಳೆದುಕೊಳ್ಳುತ್ತಿದೆ. ಅವರ ಮೇಲೆ ದಾಳಿ ನಡೆಸಿ ಜೈಲಿಗೆ ಅಟ್ಟುವ ಭಯ ಹುಟ್ಟಿಸುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕೆನರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಒಟ್ಟೂ ಐದು ವಿಧಾನ ಸಭಾ ಕ್ಷೇತ್ರಗಳನ್ನು ಗೆದ್ದಿದೆ. ಇನ್ನೊಂದು ಕ್ಷೇತ್ರ ಆ ಕಡೆ ಈ ಕಡೆ ವಾಲುತ್ತಿದೆ. ಅದರ ಬಗ್ಗೆ ಹೆಚ್ಚಿಗೆ ಹೇಳಲಾರೆ. ಕಮಲ ಕೆರೆಯಲ್ಲಿ, ತೆನೆ ಹೊಲದಲ್ಲಿ, ಕೈ ಆಡಳಿತದಲ್ಲಿದ್ದರೇ ಚೆಂದ’ ಎಂದರು.

‘ಕಾಂಗ್ರೆಸ್ ಗ್ಯಾರಂಟಿಗಳನ್ನು ಪ್ರಧಾನಿ ಮೋದಿ ನಕಲು ಮಾಡುತ್ತಿದ್ದಾರೆ. ನಮ್ಮದು ಕೇವಲ ನಾಲ್ಕು ವರ್ಷಗಳ ಸರ್ಕಾರವಲ್ಲ. ಬದಲಾಗಿ ಒಂಬತ್ತು ವರ್ಷಗಳ ಸರ್ಕಾರ. ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತು. ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ ಪರ ಪ್ರಚಾರ ಕೈಗೊಳ್ಳಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ‘ಈ ಹಿಂದೆ 30 ವರ್ಷಗಳ ಕಾಲ ಕೆನರಾ ಸಂಸದರಾಗಿ ಆಯ್ಕೆಯಾದವರು ಸಂಸತ್ತಿನಲ್ಲಿ ಜಿಲ್ಲೆಯ ಬಗ್ಗೆ ಒಮ್ಮೆಯೂ ದನಿ ಎತ್ತಿಲ್ಲ. ನಮಗೆ ಅತಿಕ್ರಮಣದಾರರ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, ಕೈಗಾ, ಸೀ ಬರ್ಡ್ ನಿರಾಶ್ರಿತರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸುವವರು ಬೇಕು. ಅಂಜಲಿ ನಿಂಬಾಳ್ಕರ್ ಜಿಲ್ಲೆಯ ಹೊರಗಿನವರು ಎಂದು ಮಾತನಾಡಿಕೊಂಡರೂ ಕಿತ್ತೂರು, ಖಾನಾಪುರ ಸಹ ಕೆನರಾ ಕ್ಷೇತ್ರಕ್ಕೆ ಸೇರುವುದರಿಂದ ಅವರನ್ನು ಅಭ್ಯರ್ಥಿ ಮಾಡಲಾಗಿದೆ’ ಎಂದರು.

ಕೆಪಿಸಿಸಿ ವಕ್ತಾರ ಸುಧೀರ ಮೊರಳ್ಳಿ, ‘ಜಿಲ್ಲೆಯಲ್ಲಿ ಬಿಜೆಪಿ ಈಗ ಮೊದಲಿಗಿಂತ ಕೊಂಚ ಸೌಮ್ಯವಾಗಿದೆ. ಬಿಜೆಪಿಯ ಹಿಂದಿನ ಅಭ್ಯರ್ಥಿ ಸಂವಿಧಾನ ಬದಲಿಸುವ ಮಾತಾಡಿದ್ದರು. ಈಗಿನ ಅಭ್ಯರ್ಥಿ ಸಂವಿಧಾನ ಬದಲಿಸುವ ಬಗ್ಗೆ ಹೈದಯದಲ್ಲಿ ಸಂಕಲ್ಪ ಮಾಡಿದ್ದಾರೆ. ದೇಶದ ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರನ್ನು ಚುನಾಯಿಸಬೇಕಿದೆ’ ಎಂದು ಹೇಳಿದರು.

ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ‘ಈ ಚುನಾವಣೆ ಕೇವಲ ಮೋದಿ ವಿರುದ್ಧ ರಾಹುಲ್ ಗಾಂಧಿ ಹೋರಾಟವಲ್ಲ. ಬದಲಾಗಿ ಅದಾನಿ, ಅಂಬಾನಿ ವಿರುದ್ಧ ಬಡವರ ಹೋರಾಟದ ಕಣವಾಗಿದೆ. ಕಾಂಗ್ರೆಸ್ ಗ್ಯಾರಂಟಿ ರಾಜ್ಯದ ಮಹಿಳೆಯರಿಗೆ ಮರ್ಯಾದೆ ನೀಡಿದೆ ಎಂದು ಎಲ್ಲ ಮಹಿಳೆಯರು ತಮ್ಮ ಮನೆಯ ಗಂಡಸರಿಗೆ ಮನದಟ್ಟು ಮಾಡಬೇಕು’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವ್ಕರ್, ತಾಲ್ಲೂಕು ಘಟಕ ಅಧ್ಯಕ್ಷ ಭುವನ್ ಭಾಗ್ವತ, ಶಾಸಕ ಸತೀಶ ಸೈಲ್, ಮಾಜಿ ಶಾಸಕ ವಿ.ಎಲ್ ಪಾಟೀಲ, ಮುಖಂಡರಾದ ನಿವೇದಿತ್ ಆಳ್ವ, ಯಶೋಧರ ನಾಯ್ಕ, ರಮಾನಂದ ನಾಯಕ, ಮಧುಸೂದನ್ ಶೇಟ್, ವಿ.ಎಲ್. ನಾಯ್ಕ, ಹೊನ್ನಪ್ಪ ನಾಯಕ, ಸಚಿನ್ ನಾಯ್ಕ, ಭಾಸ್ಕರ ಪಟಗಾರ, ಸತೀಶ ನಾಯ್ಕ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಭಾರತಿ ಪಟಗಾರ, ವೀಣಾ ನಾಯ್ಕ, ತಾರಾ ಗೌಡ, ಕೃಷ್ಣಾನಂದ ವೆರ್ಣೇಕರ್, ಫ್ರಾನ್ಸಿಸ್ ಫರ್ನಾಂಡೀಸ್, ನಾಗೇಶ ನಾಯ್ಕ, ಆರ್.ಎಚ್. ನಾಯ್ಕ, ರತ್ನಾಕರ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT