ಹಳಿಯಾಳ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಧ್ಯಾಹ್ನದ ನಂತರ ಗಾಳಿ ಮಳೆಯಿಂದ ಭತ್ತದ ಬೆಳೆ ಕೆಲವು ಭಾಗಗಳಲ್ಲಿ ನೆಲಕ್ಕುರುಳಿ ಬೆಳೆಯು ಹಾನಿಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಭತ್ತದ ಇಳುವರಿ ಕುಂಠಿತವಾಗಿದ್ದು, ಆಗಸ್ಟ್ ವೇಳೆಯಲ್ಲಿ ಆದ ಮಳೆಯಿಂದ ಅಲ್ಪ ಪ್ರಮಾಣದಲ್ಲಿ ಬೆಳೆಯ ಬೆಳವಣಿಗೆಯಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಗಾಳಿಯಿಂದ ಬೆಳೆದ ಬೆಳೆಯು ಹಾನಿಯಾಗಿದೆ.
‘ಭತ್ತದ ಬೆಳೆ ಗಾಳಿಯಿಂದ ನೆಲಕ್ಕುರುಳಿದೆ. ಮಳೆ ನೀರಿಗೆ ತೋಯ್ದು ಕಾಳುಗಳ ತೇವಾಂಶಕ್ಕೆ ಸಿಲುಕಿವೆ. ಇದರಿಂದ ಫಸಲು ಸಿಗುವುದು ಅನುಮಾನ’ ಎಂದು ತೇಗನಳ್ಳಿ ಗ್ರಾಮದ ರೈತ ಯಲ್ಲಪ್ಪಾ ಭರಮಣ್ಣ ಸಾವಂತ ಸಮಸ್ಯೆ ಹೇಳಿಕೊಂಡರು.
‘ಮಳೆಗೆ ಸಿಲುಕಿರುವ ಭತ್ತದ ತೆನೆಗಳ ಕಾಳುಗಳು ಜೊಳ್ಳಾಗುವ ಸಾಧ್ಯತೆ ಹೆಚ್ಚಿದೆ. ತೇವಾಂಶದ ಗದ್ದೆ ಇದ್ದರೆ ಅಂತಹ ಹಾನಿಯಾಗುವ ಸಾಧ್ಯತೆ ಕಡಿಮೆ. ಆದರೆ ಗದ್ದೆ ಒಣಗಿದ್ದಲ್ಲಿ ಇಲಿಗಳು ಕಾಳು ತಿಂದು ಹಾನಿಯಾಗುವ ಸಾಧ್ಯತೆಯೂ ಹೆಚ್ಚು’ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಐ.ಮಾನೆ ಹೇಳಿದರು.
ತಾಲ್ಲೂಕಿನಲ್ಲಿ ಒಟ್ಟು 5,400 ಹೆಕ್ಟೇರ್ ಜಮೀನಿನಲ್ಲಿ ಭತ್ತದ ಬೆಳೆ ಬೆಳೆಯಲಾಗಿದ್ದು, 375 ಹೆಕ್ಟೇರ್ ಮೆಕ್ಕೆಜೋಳ 12,100 ಹೆಕ್ಟೇರ್ ಕಬ್ಬು ಬೆಳೆಯಾಗಿದ್ದು 16 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲಾಗಿದೆ. ಕಬ್ಬಿನ ಬೆಳೆ ನೀರಿನ ಕೊರತೆಯಿಂದ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ಕಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.