ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಕ್ಷೇತ್ರ: ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ ಅಭ್ಯರ್ಥಿ?

Published 7 ಸೆಪ್ಟೆಂಬರ್ 2023, 19:47 IST
Last Updated 7 ಸೆಪ್ಟೆಂಬರ್ 2023, 19:47 IST
ಅಕ್ಷರ ಗಾತ್ರ

ಕಾರವಾರ: ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್ ಅವರು ಬಿಜೆಪಿಯಲ್ಲೇ ಉಳಿಯುವರೇ ಅಥವಾ ಕಾಂಗ್ರೆಸ್‌ಗೆ ಮರಳುವರೇ ಎಂಬುದು ಇನ್ನೂ ನಿಗೂಢವಾಗಿದೆ. ಆದರೆ, ರಾಜಕೀಯ ವಲಯದಲ್ಲಿ ಅವರ ಮುಂದಿನ ನಡೆ, ಸಾಧಕ–ಬಾಧಕಗಳ ಕುರಿತು ವ್ಯಾಪಕ ಚರ್ಚೆ ನಡೆದಿದೆ.

2019ರ ಜುಲೈ ತಿಂಗಳಲ್ಲಿ ಅಂದಿನ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಪತನಕ್ಕೆ ಕಾರಣರಾದವರಲ್ಲಿ ಮುಂಚೂಣಿಯಲ್ಲಿದ್ದ ಅವರು ಈಗ ಇಡುವ ಮುಂದಿನ ಹೆಜ್ಜೆ ಜಿಲ್ಲೆಯ ರಾಜಕೀಯ ಚಿತ್ರಣ ಬದಲಿಸುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ನಾಯಕರು ಅಭಿಪ್ರಾಯಪಡುತ್ತಾರೆ.

ಈ ಎಲ್ಲಾ ಬೆಳವಣಿಗೆಗಳಿಗೆ ಪೂರಕವಾಗಿ ಹೆಬ್ಬಾರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

‘ಲೋಕಸಭೆ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‍ನಲ್ಲಿ ಹಲವರು ಆಕಾಂಕ್ಷಿಗಳಿದ್ದರೂ ಪಕ್ಷ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವ ಹೊಂದಿರುವ ಹೆಬ್ಬಾರ್ ಸೂಕ್ತ ಎಂಬ ಕಾರಣಕ್ಕೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು, ಕಣಕ್ಕಿಳಿಸಲು ಪಕ್ಷದ ಕೆಲ ಪ್ರಭಾವಿಗಳು ಆಸಕ್ತಿ ಹೊಂದಿದ್ದಾರೆ. ಕೆಲವರ ವಿರೋಧವೂ ಇದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.

‘2013ರಿಂದ ತಲಾ ಎರಡು ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಶಾಸಕರಾದ ಅವರು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಎರಡೂ ಪಕ್ಷಗಳಲ್ಲೂ ಆಪ್ತರನ್ನು ಹೊಂದಿರುವ ಅವರು ಜಿಲ್ಲೆಯ ರಾಜಕಾರಣದಲ್ಲಿ ಹಿಡಿತ ಹೊಂದಿದ್ದಾರೆ. 1999ರ ಬಳಿಕ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಈ ಬಾರಿ ಗೆಲ್ಲಲೇಬೇಕೆಂದು ನಾಯಕರು ಪಣತೊಟ್ಟಿದ್ದಾರೆ’ ಎಂದರು.

‘ಶಿವರಾಮ ಹೆಬ್ಬಾರ್ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ.  ನಮ್ಮ ಹಂತದಲ್ಲಿ ಯಾವುದೇ ಚರ್ಚೆ, ಅಭಿಪ್ರಾಯ ಸಂಗ್ರಹ ನಡೆದಿಲ್ಲ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ್ ತಿಳಿಸಿದರು.

‘ಪಕ್ಷದ ಸಭೆಗಳಲ್ಲಿ ಶಿವರಾಮ ಹೆಬ್ಬಾರ್ ಪಾಲ್ಗೊಳ್ಳುತ್ತಿದ್ದಾರೆ. ಅವರು ನೀಡಿದ್ದ ದೂರು ಆಧರಿಸಿ ಪಕ್ಷ ವಿರೋಧಿ ಚಟುವಟಿಕೆ ಕೈಗೊಂಡವರ ಮೇಲೆ ಕ್ರಮವಾಗಿದೆ. ಅವರು ಪಕ್ಷದಲ್ಲಿ ಮುಂದುವರಿಯುವರು ಎಂಬ ವಿಶ್ವಾಸವಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT