ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲರಾಮನ ತಿರಸ್ಕರಿಸಿದವರನ್ನು ಜನರು ಒಪ್ಪಿಕೊಳ್ಳಲಾರರು: ಕಾಂಗ್ರೆಸ್ ವಿರುದ್ಧ ಮೋದಿ

Published 28 ಏಪ್ರಿಲ್ 2024, 9:38 IST
Last Updated 28 ಏಪ್ರಿಲ್ 2024, 9:38 IST
ಅಕ್ಷರ ಗಾತ್ರ

ಶಿರಸಿ (ಮಾರಿಕಾಂಬಾ ಕ್ರೀಡಾಂಗಣ): ಅಯೋಧ್ಯೆಯ ಬಾಲರಾಮನನ್ನು ತಿರಸ್ಕರಿಸಿದವರನ್ನು ಕರ್ನಾಟಕದ ಜನರು ಎಂದಿಗೂ ಒಪ್ಪಿಕೊಳ್ಳಲಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತಮ್ಮ ಮೊನಚಾದ ಮಾತುಗಳ ಮೂಲಕ ನಾಲ್ಕು ತಾಸುಗಳಿಗೂ ಹೆಚ್ಚು ಕಾಲ ಬಿಸಿಲ ಬೇಗೆಯ ನಡುವೆಯೂ ತಮಗಾಗಿ ಕಾದು ಕುಳಿತಿದ್ದ ಸಾವಿರಾರು ಕಾರ್ಯಕರ್ತರ ಮನ ತಣಿಸಿದರು.

ಕನ್ನಡದಲ್ಲೇ ಮಾತು ಆರಂಭಿಸಿದ ಅವರು,

'ಕದಂಬ ರಾಜರು ಕನ್ನಡ ನಾಡನ್ನು ಆಳಿದರು. ಅವರ ಕೊಡುಗೆಯನ್ನು ಜನರು ಎಂದಿಗೂ ಮರೆಯಲಾರರು. ಇಂತ ನೂರಾರು ರಾಜ ವಂಶಗಳು ದೇಶವನ್ನು ಕಟ್ಟಿದರು. ಇಂತಹ ರಾಜ ವಂಶಸ್ಥರು ದೇಶ ಲೂಟಿ ಮಾಡಿದವರು ಎಂದು ಟೀಕಿಸುವುದನ್ನು ಜನರು ಸಹಿಸಬಲ್ಲರೆ?' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದೆ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಜನರ ಜೋಶ್ ಕಂಡು ಖುಷಿಯಾದ ಪ್ರಧಾನಿ, 'ಇದು ಚುನಾವಣೆ ಪ್ರಚಾರ ಸಭೆಯೆ ಅಥವಾ ವಿಜಯೋತ್ಸವ ಸಭೆಯೇ?' ಎಂದು ಪ್ರಶ್ನಿಸಿ ಜನರ ಉತ್ಸಾಹ ಇಮ್ಮಡಿಗೊಳಿಸಿದರು.

'ಹದಿನಾರು ವರ್ಷದ ಹಿಂದೆಯೂ ಶಿರಸಿಗೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೆ. ಆಗಲೂ ಜನರು ಆಶೀರ್ವದಿಸಿದ್ದರು. ಈ ಬಾರಿಯೂ ನನ್ನನ್ನು ಜನರು ನಿರಾಸೆಗೊಳಿಸಲಾರರು ಎಂಬ ನಂಬಿಕೆ ಇದೆ' ಎನ್ನುವ ಮೂಲಕ ಪಕ್ಷದ ಅಭ್ಯರ್ಥಿ ಪರ ಮತ ಕೇಳಿದರು.

'ಬಿಸಿಲಿನಲ್ಲಿ ನಿಂತು ಮೋದಿಗಾಗಿ ಕಾಯುತ್ತಿದ್ದೀರಿ. ನಿಮ್ಮನ್ನು ಬಿಸಿಲಲ್ಲಿ ನಿಲ್ಲಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ಆದರೆ ಕಷ್ಟಪಟ್ಟು ನಿಂತ ನಿಮ್ಮ ಶ್ರಮವನ್ನು ನಾವೆಂದಿಗೂ ವ್ಯರ್ಥ ಮಾಡುವುದಿಲ್ಲ. ಅಭಿವೃದ್ಧಿ ಕೆಲಸದ ಮೂಲಕ ನಿಮ್ಮ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವೆ' ಎಂದು ಕ್ರೀಡಾಂಗಣದ ಬದಿಯಲ್ಲಿ ಬಿಸಿಲಿನಲ್ಲಿ ನಿಂತಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

'ಸ್ಥಿರ ಸರ್ಕಾರ ಇದ್ದರೆ ಜಗತ್ತಿಗೆ ಭರವಸೆ ಹುಟ್ಟುತ್ತದೆ. ದಶಕದ ಹಿಂದೆ ದೇಶದ ಮತದಾರರು ನೀಡಿದ ಒಂದೊಂದು ಮತವೂ ದೇಶದಲ್ಲಿ ಪರಿಣಾಮಕಾರಿ ಬದಲಾವಣೆ ತಂದಿದೆ. ಪ್ರಧಾನಿಯಾಗಿ ವಿದೇಶಕ್ಕೆ ಹೋದಾಗ,  ಬಲಿಷ್ಠ ನಾಯಕರನ್ನು ಭೇಟಿಯಾದಾಗ ನಾನು ದೇಶದ 140 ಕೋಟಿ ಜನರು ಬೆನ್ನಿಗಿದ್ದಾರೆ ಎಂಬ ವಿಶ್ವಾಸದೊಂದಿಗೆ ಸಾಗುತ್ತೇನೆ. ನನ್ನ ಆತ್ಮವಿಶ್ವಾಸ ವಿದೇಶಿ ನಾಯಕರನ್ನು ಚಕಿತಗೊಳಿಸುತ್ತದೆ' ಎಂದರು.

'ಶಿರಸಿಯ ಸುಪಾರಿಗೆ ಭೌಗೋಳಿಕ ಹೆಗ್ಗುರುತು (ಜಿ.ಐ.ಟ್ಯಾಗ್) ನೀಡಿದ್ದು ಬಿಜೆಪಿ ಸರ್ಕಾರ. ಆಯುಷ್ ವೈದ್ಯ ಪದ್ಧತಿಯನ್ನು ಜಗತ್ತಿನ ಎದುರು ಪರಿಚಯಿಸಿದ್ದು ಬಿಜೆಪಿ' ಎಂದರು.

'ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ, ಮತ್ಸ್ಯ ಸಂಪದದಂತಹ ಜನಪರ ಯೋಜನೆ ಜಾರಿಗೆ ತಂದಿದ್ದೇವೆ. ಮೀನುಗಾರರ ಸಮಗ್ರ ಏಳ್ಗೆಗೆ ಎನ್.ಡಿ.ಎ ಸರ್ಕಾರ ಸಿದ್ಧವಿದೆ' ಎಂದರು.

'ಮತಬ್ಯಾಂಕ್ ಓಲೈಕೆಯ ಕಾಂಗ್ರೆಸ್ ಅಪರಾಧಿ ಚಟುವಟಿಕೆ ನಡೆಸುವವರಿಗೆ ವರವಾಗಿದೆ. ಬೆಂಗಳೂರಿನ ಬಾಂಬ್ ಸ್ಪೋಟ, ಹುಬ್ಬಳ್ಳಿಯಲ್ಲಿ ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯ ಹತ್ಯೆ ಘಟನೆಗಳು ಇದಕ್ಕೆ ನಿದರ್ಶನ' ಎಂದು ಟೀಕಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖಂಡರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನೀಲಕುಮಾರ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT