ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ವಿರುದ್ಧ ಅಪಪ್ರಚಾರ: ಸಾಮಾಜಿಕ ಜಾಲತಾಣಗಳತ್ತ ಪೊಲೀಸ್ ದೃಷ್ಟಿ

ಚುನಾವಣೆ: ಚಾರಿತ್ರ್ಯ ವಧೆ, ಅಪಪ್ರಚಾರ ಹೆಚ್ಚುವ ಸಾಧ್ಯತೆ
Last Updated 25 ಫೆಬ್ರುವರಿ 2023, 16:13 IST
ಅಕ್ಷರ ಗಾತ್ರ

ಕಾರವಾರ: ವಿಧಾನಸಭೆ ಚುನಾವಣೆಗೆ ಸಮೀಪಿಸುತ್ತಿದ್ದಂತೆ ಜನಪ್ರತಿನಿಧಿಗಳು, ಮುಖಂಡರ ವಿರುದ್ಧ ಅಪಪ್ರಚಾರ ನಡೆಸುವ ಯತ್ನವೂ ಜಾಲತಾಣಗಳ ಮೂಲಕ ನಡೆಯುತ್ತಿದೆ. ವದಂತಿಗಳ ಕಾರುಬಾರು ಹೆಚ್ಚಿದೆ. ಇದಕ್ಕೆ ತಡೆ ಹಾಕಲು ಪೊಲೀಸರು ಜಾಲತಾಣಗಳ ಮೇಲೆ ನಿಗಾ ಇಡಲು ಮುಂದಾಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದರು. ಯುವ ಮತದಾರರ ಓಲೈಕೆಗೆ ಈ ಮೂಲಕ ಕಸರತ್ತು ನಡೆಸಿದ್ದರು. ಇದು ಕೆಲವು ಕಡೆಗಳಲ್ಲಿ ಫಲವನ್ನೂ ನೀಡಿತ್ತು ಎಂದು ನಾಯಕರು ನಂಬಿದ್ದರು.

ಆದರೆ, ಅಂದು ವರವಾಗಿದ್ದ ಜಾಲತಾಣಗಳು ಈ ಬಾರಿ ಮುಳುವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಪ್ರಮುಖ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು, ಹಾಲಿ ಜನಪ್ರತಿನಿಧಿಗಳ ವಿರುದ್ಧ ಅಪಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳು ಬಳಕೆ ಆಗುತ್ತಿರುವುದು ಇದಕ್ಕೆ ನಿದರ್ಶನ.

ಜಿಲ್ಲೆಯ ಕುಮಟಾ, ಭಟ್ಕಳ, ಶಿರಸಿ ಕ್ಷೇತ್ರದಲ್ಲಿ ಮೀಮ್ಸ್, ಟ್ರೋಲ್ ಪೇಜ್‍ಗಳ ಮೂಲಕ ಜನಪ್ರತಿನಿಧಿಗಳನ್ನು ಟೀಕಿಸುವ ಕೆಲಸ ನಡೆಯುತ್ತಿದೆ. ರಾಜಕೀಯ ನಾಯಕರ ವಿರುದ್ಧದ ಮಾಡಲಾದ ಪೋಸ್ಟ್‌ಗಳು ವಾಟ್ಸಾಪ್, ಫೇಸ್‍ಬುಕ್ ಸೇರಿದಂತೆ ಜಾಲತಾಣಗಳಲ್ಲಿ ವ್ಯಾಪಕವಾಗಿಯೂ ಹರಿದಾಡುತ್ತಿದೆ.

ಹಳಿಯಾಳದ ಮರಡಿಗುಡ್ಡದ ಘಟನೆ ವಿಚಾರದಲ್ಲಿಯೂ ವಾಟ್ಸಾಪ್‍ಗಳ ಮೂಲಕ ಹರಡಿದ ವದಂತಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಭಟ್ಕಳದ ಶಾಸಕರ ಮನೆಯಲ್ಲಿ ಮಾಂಸದ ಊಟ ಸೇವಿಸಿ ನಾಗಬನ, ಕರಿಬಂಟ ಗುಡಿಗೆ ಭೇಟಿ ನೀಡಿದ್ದು ಎರಡು ದಿನಗಳ ಬಳಿಕ ಸಾಮಾಜಿಕ ಜಾಲತಾಣಗಳ ಪೋಸ್ಟ್ ಮೂಲಕ ಬಹಿರಂಗಗೊಂಡು ವ್ಯಾಪಕ ಚರ್ಚೆಗೆ ಕಾರಣವಾಯಿತು.

‘ರಾಜಕೀಯ ನಾಯಕರ ವ್ಯವಸ್ಥಿತ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ ಆಗುತ್ತಿದೆ. ಅಭ್ಯರ್ಥಿ, ಆಕಾಂಕ್ಷಿಗಳೆಂದು ಹೇಳಿಕೊಳ್ಳುವವರು ಇವುಗಳ ಮೂಲಕವೇ ನಿತ್ಯ ಹತ್ತಾರು ಪೋಸ್ಟ್ ಹಂಚಿಕೊಂಡು ಪ್ರಚಾರ ಗಿಟ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಮುಖ ನಾಯಕರ ಕುರಿತು ವ್ಯಾಪಕ ಟೀಕೆಗೂ ಜಾಲತಾಣ ಬಳಕೆ ಆಗುತ್ತಿದೆ. ಚುನಾವಣೆ ಹೊತ್ತಲ್ಲಿ ಇವು ಹೆಚ್ಚಲೂಬಹುದು’ ಎನ್ನುತ್ತಾರೆ ರಾಷ್ಟ್ರೀಯ ಪಕ್ಷವೊಂದರ ಜಿಲ್ಲಾ ಘಟಕದ ಪದಾಧಿಕಾರಿಯೊಬ್ಬರು.

ಸಾವಿರಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ:

‘ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಜಿಲ್ಲೆಯಲ್ಲಿ ಪರೇಶ್ ಮೆಸ್ತಾ ಸಾವಿನ ವಿಚಾರವಾಗಿ ಗಲಭೆ ನಡೆದಿದ್ದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡುತ್ತಿದ್ದ 1,200ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದೆ. ಕೋಮು ಸೌಹಾರ್ಧ ಕೆಡಿಸಲು ಯತ್ನಿಸುವ ಸಂದೇಶಗಳನ್ನು ಭಿತ್ತರಿಸುವದರ ಮೇಲೆ ನಿಗಾ ಇಡಲಾಗುತ್ತಿದೆ. ಈ ಬಾರಿಯ ಚುನಾವಣೆ ವೇಳೆಯಲ್ಲೂ ರಾಜಕೀಯ ನಾಯಕರ ಚಾರಿತ್ರ್ಯ ಹರಣ ಮಾಡಲು ಯತ್ನಿಸುವ ಪೋಸ್ಟ್‌ಗಳು, ವೈಯಕ್ತಿಕ ತೇಜೋವಧೆ ಮಾಡುವ ವಿಚಾರ ಹರಿಬಿಡುವವರ ಮೇಲೆಯೂ ನಿಗಾ ಇಡಲಾಗುತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

-------------------------

ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಅಶಾಂತಿ ಮೂಡಿಸುವ ಪೋಸ್ಟ್ ಹಾಕುವವರ ಮೇಲೆ ನಿಗಾ ಇಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಾರಿತ್ರ್ಯ ವಧೆ ಮಾಡುವ ಯಾವುದೇ ಪೋಸ್ಟ್ ಹಾಕಿದರೆ ದೂರು ಆಧರಿಸಿ ಕ್ರಮ ಜರುಗಿಸಲಾಗುವುದು.

-ಜಯಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT