ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಪೈಪ್‍ಲೈನ್ ಕಾಮಗಾರಿಗೆ ಅಡ್ಡಿಯಾಗುತ್ತಿರುವ ‘ತಕರಾರು’

Published 23 ಮಾರ್ಚ್ 2024, 4:57 IST
Last Updated 23 ಮಾರ್ಚ್ 2024, 4:57 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಸುಮಾರು 11 ಗ್ರಾಮ ಪಂಚಾಯಿತಿಗಳ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ₹169 ಕೋಟಿ ವೆಚ್ಚದ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯ ಪೈಪ್‍ಲೈನ್‍ನ್ನು ಜನವಸತಿ ಪ್ರದೇಶದಲ್ಲಿ ಅಳವಡಿಸುವುದಕ್ಕೆ ಖಾಸಗಿ ಜಮೀನು ಮಾಲೀಕರು ತಕರಾರು ಮಾಡುತ್ತಿರುವುದು ಕಾಮಗಾರಿಗೆ ಹಿನ್ನಡೆ ಉಂಟುಮಾಡಿದೆ ಎಂಬ ದೂರು ವ್ಯಕ್ತವಾಗಿದೆ.

ತಾಲ್ಲೂಕಿನ ಸಂತೆಗುಳಿ ಗ್ರಾಮ ಪಂಚಾಯಿತಿಯ ದೀವಳ್ಳಿಯಿಂದ 11 ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಯೋಜನೆಯ ಉದ್ದೇಶವಾಗಿದೆ. ರಸ್ತೆಯಂಚಿನ ಮನೆಗಳಿಗೆ ನೇರವಾಗಿ ನೀರಿನ ಸಂಪರ್ಕ ನೀಡಬಹುದಾಗಿದೆ. ಆದರೆ ಬೇರೆಯವರ ಮನೆಯ ಕಾಲು ದಾರಿ ಮೂಲಕ ಇನ್ನೊಂದು ಜನ ವಸತಿ ಪ್ರದೇಶಕ್ಕೆ ಹೋಗುವಂತ ಕಡೆಗಳಲ್ಲಿ ಖಾಸಗಿ ಜಮೀನು ಮಾಲೀಕರು ಪೈಪ್‍ಲೈನ್ ಅಳವಡಿಸಲು ಆಕ್ಷೇಪಿಸುತ್ತಿದ್ದಾರೆ ಎಂಬುದು ಅಧಿಕಾರಿಗಳ ದೂರು.

‘ರಸ್ತೆಯಿಂದ ದೂರ ಒಳ ಭಾಗದಲ್ಲಿರುವ ನಮ್ಮ ನಾಲ್ಕಾರು ಮನೆಗಳಿಗೆ ಬೇರೆಯವರ ಮನೆಯ ತೋಟದ ಕಾಲು ದಾರಿಯ ಮೂಲಕ ಹೋಗಬೇಕಿದೆ. ರಸ್ತೆಯಂಚಿನ ಜಾಗದವರು ಪೈಪ್‍ಲೈನ್ ಅಳವಡಿಸಲು ತಕರಾರು ಮಾಡಿದ್ದರಿಂದ ನಮಗೆ ಕುಡಿಯುವ ನೀರಿನ ಸಂಪರ್ಕ ಸಿಗುತ್ತಿಲ್ಲ. ಬೇಸಿಗೆಯಲ್ಲಿ ಈ ಭಾಗದಲ್ಲಿ ಬಾವಿಯ ನೀರು ಸವಳಾಗುತ್ತದೆ, ಮಳೆಗಾಲದಲ್ಲಿ ನೆರೆ ನೀರು ನುಗ್ಗಿ ಕೆಸರುಮಯವಾಗುತ್ತದೆ. ಇಂತ ಸಂದರ್ಭದಲ್ಲಿ ಎತ್ತರದ ಪ್ರದೇಶದಲ್ಲಿರುವ ಬೇರೆಯವರ ಮನೆಯ ಬಾವಿಗಳಿಂದ ಕುಡಿಯುವ ನೀರು ತರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಬೊಗರಿಬೈಲ ಗ್ರಾಮದ ನಿವಾಸಿ ಶಂಕರ ನಾಯ್ಕ.

‘ಪೈಪ್‍ಲೈನ್ ಅಳವಡಿಸುವ ಕಾಮಗಾರಿಗೆ ತಕರಾರಿನ ವಿಷಯ ನನ್ನ ಗಮನಕ್ಕೆ ಬಂದಿಲ್ಲ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುವುದು’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದರು.

‘ಶೇ 20ರಷ್ಟು ಪ್ರದೇಶದಲ್ಲಿ ಪೈಪ್‍ಲೈನ್ ಕಾಮಗಾರಿಗೆ ಖಾಸಗಿ ಜಮೀನು ಮಾಲೀಕರಿಂದ ತಕರಾರು ಉಂಟಾಗುತ್ತಿದೆ. ಹೆಚ್ಚಿನ ಕಡೆಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ನಿವಾರಿಸಲಾಗಿದೆ’ ಎಂದು ಜೆಜೆಎಂ ಯೋಜನೆಯ ಕಾಮಗಾರಿ ಉಸ್ತುವಾರಿ ಎಂಜಿನಿಯರ್ ರಾಘವೇಂದ್ರ ನಾಯ್ಕ ತಿಳಿಸಿದರು.

ಮಾತುಕತೆ ಮೂಲಕ ಬಗೆಹರಿಯದ ಪ್ರಕರಣಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿ ನ್ಯಾಯ ಸಮಿತಿಗೆ ವಹಿಸಿ ಬಗೆಹರಿಸಲು ಕೋರಲಾಗುವುದು
ರಾಘವೇಂದ್ರ ನಾಯ್ಕ, ಜೆಜೆಎಂ ಯೋಜನೆ ಕಾಮಗಾರಿಯ ಉಸ್ತುವಾರಿ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT