ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ದುರಸ್ತಿ ಕಂಡ ಮಳೆ ಮಾಪನ ಘಟಕ

ಶಿರಸಿ ತಾಲ್ಲೂಕಿನ 32 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಂತ್ರ ಸ್ಥಾಪನೆ
Published 10 ಜೂನ್ 2024, 5:39 IST
Last Updated 10 ಜೂನ್ 2024, 5:39 IST
ಅಕ್ಷರ ಗಾತ್ರ

ಶಿರಸಿ: ಕಳೆದ ವರ್ಷಗಳಲ್ಲಿ ರೈತರಿಗೆ ಹವಾಮಾನಾಧಾರಿತ ಬೆಳೆ ವಿಮೆ ಪರಿಹಾರ ಪಡೆಯುವಲ್ಲಿ ತೀವ್ರ ತೊಡಕನ್ನುಂಟುಮಾಡಿದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆ ಮಾಪನ ಘಟಕಗಳು ಪ್ರಸಕ್ತ ವರ್ಷ ದುರಸ್ತಿ ಭಾಗ್ಯ ಕಂಡಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಸರಿಯಾಗಿ ದಾಖಲಾಗುವ ಸಾಧ್ಯತೆಯಿದೆ. 

ವರ್ಷಗಳ ಹಿಂದೆ ಮಳೆ ಪ್ರಮಾಣ ದಾಖಲಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆ.ಎಸ್.ಎನ್.ಡಿ.ಐ.ಸಿ.) ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ನಿಗದಿಪಡಿಸಿ ದೂರಸ್ಥ ಮಳೆಮಾಪನ ಯಂತ್ರ ಸ್ಥಾಪಿಸಿತ್ತು. ಬಹುತೇಕ ಕಡೆ ಗ್ರಾಮ ಪಂಚಾಯಿತಿ ಕಟ್ಟಡಗಳ ಮೇಲೆ ಸೌರಚಾಲಿತ ಯಂತ್ರಗಳನ್ನು ಅಳವಡಿಸಲಾಗಿತ್ತು. ಆದರೆ ಇವುಗಳ ನಿರ್ವಹಣೆಗೆ ಸ್ಥಳೀಯವಾಗಿ ಸಿಬ್ಬಂದಿ ನಿಯೋಜನೆಯಾಗಿರಲಿಲ್ಲ. ಕೆಲವು ಕಡೆಗಳಲ್ಲಿ ಗಿಡಗಂಟಿಗಳು ಯಂತ್ರದ ಸುತ್ತ ಬೆಳೆದುನಿಂತು ಮಳೆ ಪ್ರಮಾಣ ಅಳೆಯಲು ಅಡ್ಡಿಯಾಗಿತ್ತು. ಬಹುತೇಕ ಯಂತ್ರಗಳು ಬಳಕೆಯಾಗದೆ ತುಕ್ಕು ಹಿಡಿದಿದ್ದವು. ಅವು ದುರಸ್ತಿಯಾಗದ ಕಾರಣ ದೂಳು ತಿನ್ನುತ್ತಿದ್ದವು.

ಇವೆಲ್ಲ ಕಾರಣಕ್ಕೆ ಮಳೆಗಾಲದ ಅವಧಿಯಲ್ಲಿ ಪ್ರತಿ 20 ನಿಮಿಷಕ್ಕೆ ಮಳೆ ಪ್ರಮಾಣದ ಮಾಹಿತಿಯನ್ನು ಇಲ್ಲಿಂದ ಕೆ.ಎಸ್.ಎನ್.ಡಿ.ಐ.ಸಿ. ಸಂಗ್ರಹಿಸಲು ಕಷ್ಟಸಾಧ್ಯವಾಗುತ್ತಿತ್ತು. ವ್ಯಾಪಕ ಮಳೆ ಸುರಿದಿದ್ದರೂ ಮಳೆ ಮಾಪನ ಯಂತ್ರಗಳಿಂದ ಸಂಗ್ರಹಿಸಲಾದ ವರದಿಯಲ್ಲಿ ಹೆಚ್ಚು ಮಳೆ ಬಿದ್ದಿರುವ ಅಂಶಗಳು ಸೇರುತ್ತಿರಲಿಲ್ಲ. ಇದರಿಂದ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಪಡೆಯಲು ಸಮಸ್ಯೆ ಕಾಡುತ್ತಿತ್ತು. ಇದು ಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೂ ದೊಡ್ಡ ತಲೆನೋವು ತಂದಿಟ್ಟಿತ್ತು. ಹೀಗಾಗಿ ಈ ಬಾರಿ ಮುಂಗಾರು ಪೂರ್ವ ಮಳೆ ಮಾಪನ ಘಟಕಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. 

‘ಬೆಳೆವಿಮೆ ಪರಿಹಾರ ತಾರತಮ್ಯದ ವಿರುದ್ಧ ಕಳೆದ ವರ್ಷ ಪ್ರತಿಭಟನೆ ನಡೆಸಿದ ವಿವಿಧ ಭಾಗದ ರೈತರು ಮಳೆ ಮಾಪನ ಕೇಂದ್ರಗಳ ದುರವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಕಾರಣ ಈ ವರ್ಷ ಮಳೆಗಾಲಕ್ಕೂ ಮುನ್ನವೇ ಅವುಗಳನ್ನು ಸುಸ್ಥಿತಿಯಲ್ಲಿಡಲು ಕ್ರಮವಹಿಸಲಾಗಿದೆ. ಮಳೆ ಮಾಪನ ಯಂತ್ರಗಳ ಸ್ಥಿತಿಗತಿ ಅರಿಯಲು ಅಂಕಿ–ಸಂಖ್ಯೆ ಇಲಾಖೆ ಅಧಿಕಾರಿಗಳ ಜತೆ ಖುದ್ದಾಗಿ ಸ್ಥಳ ಪರಿಶೀಲಿಸಲಾಗಿತ್ತು. ಈ ಸಂದರ್ಭದಲ್ಲಿ ಅಗತ್ಯವಿರುವ ಕಡೆ ಯಂತ್ರೋಪಕರಣ ಸರಿಪಡಿಸಿಕೊಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಾಹಿತಿ ನೀಡಿದರು.

‘ಯಂತ್ರದಿಂದ ಸರಿಯಾದ ಮಳೆ ಮಾಹಿತಿ ರವಾನೆಯಾಗದ ಕಾರಣ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ಪಡೆಯಲು ಕಳೆದ ಎರಡು ವರ್ಷಗಳ ಹಿಂದೆ ಸಾಧ್ಯವಾಗಿರಲಿಲ್ಲ. ಆದರೆ ಈ ಸಾಲಿನಲ್ಲಿ ಅವುಗಳ ದುರಸ್ತಿ ಮಾಡಿದ್ದು, ಇನ್ನಾದರೂ ಸರಿಯಾದ ಮಾಹಿತಿ ದಾಖಲಿಸಲಾಗುತ್ತದೆಯೇ ಕಾದುನೋಡಬೇಕಿದೆ’ ಎನ್ನುತ್ತಾರೆ ದಾಸನಕೊಪ್ಪದ ರೈತ ಮಾರುತಿ ನಾಯ್ಕ.

ಕೆಲವೆಡೆ ಯಂತ್ರಗಳು ಅರಣ್ಯ ಪ್ರದೇಶದಲ್ಲಿವೆ. ಅಲ್ಲಿ ಗಿಡಗಂಟಿಗಳ ಕಟಾವು ಆಗಬೇಕು. ಕೇವಲ ಯಂತ್ರಗಳ ದುರಸ್ತಿ ಕಾರ್ಯವಾದರೆ ಸಾಲದು ಅವುಗಳನ್ನು ಸುಸ್ಥಿತಿಯಲ್ಲಿಡಲು ಸಿಬ್ಬಂದಿ ನಿಯೋಜಿಸಲು ಕ್ರಮವಹಿಸಬೇಕು
–ರಾಘವೇಂದ್ರ ನಾಯ್ಕ ಬನವಾಸಿ ರೈತ ಮುಖಂಡ
ಮಳೆ ಮಾಪನ ಯಂತ್ರಗಳ ದುರಸ್ತಿ ಕಾರ್ಯ ಮಾಡಲಾಗಿದೆ. ಪ್ರಸ್ತುತ ಮಳೆ ಬೀಳುತ್ತಿದ್ದು ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ? ಇಲ್ಲವೇ? ಎಂಬುದನ್ನು ತಾಲ್ಲೂಕು ಪಂಚಾಯಿತಿಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ
–  ಸತೀಶ ಹೆಗಡೆ ತಾ.ಪಂ ಇಒ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT