ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಜಿಲ್ಲೆಯಲ್ಲಿ ‘ಡಕೋಟಾ’ ಬಸ್‍ಗಳೇ ಅಧಿಕ: ಪ್ರಯಾಣಿಕರಿಗೆ ಸಂಕಷ್ಟ

Published 28 ಅಕ್ಟೋಬರ್ 2023, 6:52 IST
Last Updated 28 ಅಕ್ಟೋಬರ್ 2023, 6:52 IST
ಅಕ್ಷರ ಗಾತ್ರ

ಕಾರವಾರ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿಯ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ಸಂಸ್ಥೆಗಳ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದ್ದು ಸಂಸ್ಥೆಗೆ ಖುಷಿ ತಂದಿದೆ. ಆದರೆ ದಿನ ಕಳೆದಂತೆ ಹಳತಾಗುವ ಬಸ್‍ಗಳು ಹೆಚ್ಚುತ್ತಿರುವುದು ಸಿಬ್ಬಂದಿಗೆ ಚಿಂತೆ ತಂದಿದೆ.

ಚಕ್ರ ಸ್ಫೋಟಿಸಿ ರಸ್ತೆ ಬದಿಯಲ್ಲಿ ನಿಲ್ಲುವುದು, ಘಟ್ಟ ಏರಲಾಗದೆ ಅರ್ಧದಲ್ಲಿ ಬಂದ್ ಆಗುವುದು, ಬಸ್ ನಿಲ್ದಾಣದಿಂದ ಹೊರಡುವ ವೇಳೆ ಹತ್ತಾರು ಮಂದಿ ಪ್ರಯಾಣಿಕರೇ ಬಸ್ ನೂಕಿ ಸ್ಟಾರ್ಟ್ ಮಾಡಬೇಕಾದ ಸ್ಥಿತಿಯಲ್ಲಿ ಸಾರಿಗೆ ಸಂಸ್ಥೆಯ ಬಸ್‍ಗಳಿವೆ. ಕಳೆದ ಮೂರು ತಿಂಗಳಿನಲ್ಲಿ ಅಂದಾಜು ಆರಕ್ಕೂ ಹೆಚ್ಚು ಬಸ್ ಚಕ್ರ ಸ್ಫೋಟಗೊಂಡ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. 

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಏಳು ಸಾರಿಗೆ ಘಟಕ ವ್ಯಾಪ್ತಿ ಒಳಗೊಂಡಿರುವ ಶಿರಸಿ ವಿಭಾಗದಲ್ಲಿ 510 ರಷ್ಟು ಬಸ್‍ಗಳಿವೆ. ಈ ಬಸ್‍ಗಳ ಮೂಲಕ ಪ್ರತಿನಿತ್ಯ 480 ಮಾರ್ಗಗಳಲ್ಲಿ ಬಸ್ ಸಂಚಾರ ನಿಭಾಯಿಸಲಾಗುತ್ತಿದೆ. ಅಂದಾಜು 100 ಬಸ್‍ಗಳು ಸರಾಸರಿ ಹತ್ತು ಲಕ್ಷ ಕಿ.ಮೀ ಗಿಂತ ಹೆಚ್ಚು ಓಡಾಟ ನಡೆಸಿವೆ ಎಂಬುದು ಸಂಸ್ಥೆಯ ಹಿರಿಯ ಅಧಿಕಾರಿಗಳು ನೀಡುವ ಮಾಹಿತಿ.

‘ಹಳತಾದ ಬಸ್‍ಗಳ ಓಡಾಟ ಅಧಿಕವಾಗಿವೆ. ಗ್ರಾಮೀಣ ಭಾಗಕ್ಕೆ ಸಂಚರಿಸುವ ಬಸ್‍ಗಳಲ್ಲಿ ಬಹುತೇಕ ಹಳತಾಗಿದ್ದು ಪದೇ ಪದೇ ಹಾಳಾಗುತ್ತವೆ. ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಂಚರಿಸುವ ಸಮಯದಲ್ಲಿ ಬರುವ ಬಸ್‍ಗಳೇ ಮಾರ್ಗ ಮಧ್ಯೆ ಕೆಟ್ಟು ನಿಲ್ಲುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ’ ಎಂಬುದು ತಾಲ್ಲೂಕಿನ ಕದ್ರಾ ಗ್ರಾಮಸ್ಥರ ಆರೋಪ.

‘ಸಾರಿಗೆ ಸಂಸ್ಥೆಯ ಬಸ್‍ಗಳು ಈ ಮೊದಲು ಗರಿಷ್ಠ ಏಳು ಲಕ್ಷ ಕಿ.ಮೀ ದೂರ ಓಡಾಟ ನಡೆಸಿದ ಬಳಿಕ ಅವುಗಳ ಬಳಕೆ ನಿಲ್ಲಿಸುವ ನಿಯಮ ಈ ಹಿಂದೆ ಇತ್ತು. ಈಗ ಬಸ್‍ಗಳ ಓಡಾಟದ ಮಿತಿಯನ್ನು 10–15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಶಿರಸಿ ವಿಭಾಗದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಓಡಾಟ ನಡೆಸಿದ ಬಸ್‍ಗಳ ಸಂಖ್ಯೆ ಹೆಚ್ಚಿದೆ. ಹಳತಾದ ಬಸ್‍ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಇದರಿಂದ ಮಾರ್ಗಮಧ್ಯದಲ್ಲೇ ಕೆಟ್ಟು ನಿಲ್ಲುವ ಸ್ಥಿತಿ ಇದ್ದು, ಇದರಿಂದ ಸಿಬ್ಬಂದಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ’ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ನೌಕರರ ಯೂನಿಯನ್‍ನ ಪದಾಧಿಕಾರಿಯೊಬ್ಬರು.

‘ಹೊಸ ಬಸ್‍ಗಳಿಗೆ ಬೇಡಿಕೆ ಇಟ್ಟರೂ ಜಿಲ್ಲೆಗೆ ನೀಡಲು ಹಿಂದೇಟು ಹಾಕುತ್ತಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಬಸ್ ನೀಡಿಲ್ಲ’ ಎಂದು ಬೇಸರಿಸಿದರು.

ಶಿರಸಿ ವಿಭಾಗಕ್ಕೆ ಹೊಸದಾಗಿ ನೂರು ಬಸ್‍ಗಳಿಗೆ ಪ್ರಸ್ತಾವ ಕಳಿಸಲಾಗಿದ್ದು ಆರು ಬಸ್‍ಗಳು ಮಂಜೂರಾಗಿವೆ. ತೀರಾ ಹಳತಾದ ಬಸ್‌ಗಳನ್ನು ಓಡಿಸುತ್ತಿಲ್ಲ
ಕೆ.ಎಚ್.ಶ್ರೀನಿವಾಸ್ ವಾ.ಕ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ
ಹಳೆಯ ಟೈರ್ ಮರುಬಳಕೆ
‘ಸಾರಿಗೆ ಸಂಸ್ಥೆಯ ಬಸ್‍ಗಳಿಗೆ ಹೊಸ ಚಕ್ರ ಅಳವಡಿಸುವುದೇ ಅಪರೂಪ. ಚಕ್ರವು ಹಳತಾಗದಂತೆಲ್ಲ ಅದನ್ನು ರಿಮೋಲ್ಡ್ ಮಾಡಿಸಿ ಬಳಸಲಾಗುತ್ತದೆ. ಇದರಿಂದ ಪದೇ ಪದೇ ಬಸ್‍ಗಳ ಚಕ್ರ ಸ್ಫೋಟಿಸುವ ಅವಘಡಗಳು ನಡೆಯುತ್ತಿವೆ’ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಚಾಲಕರೊಬ್ಬರು. ‘ಚಕ್ರಗಳು ಹಳತಾದ ಬಳಿಕ ಹೊಸ ಚಕ್ರ ಅಳವಡಿಸುತ್ತಿದ್ದರೆ ಹೆಚ್ಚಿನ ವೆಚ್ಚ ತಗಲುತ್ತದೆ. ಹೊಸ ಚಕ್ರಗಳ ಖರೀದಿಗೂ ಮಿತಿ ಇದೆ. ಸಂಸ್ಥೆಯ ಸೂಚನೆ ಪಾಲಿಸಿಯೇ ಚಕ್ರಗಳನ್ನು ಖರೀದಿಸಬೇಕಾಗುತ್ತದೆ. ಹೀಗಾಗಿ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ರಿಮೋಲ್ಡ್ ಮಾಡಿಸುವುದು ಅನಿವಾರ್ಯ’ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT