ಹೊನ್ನಾವರ: ಶರಾವತಿ ನದಿಯ ಎಡದಂಡೆಯ ಕೊಡಾಣಿ ತಾಲ್ಲೂಕು ಕೇಂದ್ರದಿಂದ ದೂರದಲ್ಲಿದೆ. ಬಹು ಹಿಂದಿನಿಂದ ಸಾರಿಗೆಗೆ ನದಿಯನ್ನೇ ಅವಲಂಬಿಸಿದ್ದ ಇಲ್ಲಿನ ಜನತೆಗೆ ರಸ್ತೆ ಸಂಪರ್ಕ ಈವೆಗೂ ಪೂರ್ತಿಯಾಗಿ ಸಿಕ್ಕಿಲ್ಲ.
4 ಗ್ರಾಮಗಳ 26 ಮಜರೆಗಳನ್ನೊಳಗೊಂಡಿರುವ ಕೊಡಾಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 3,614 ಜನರಿದ್ದಾರೆ. ಇಡೀ ಗ್ರಾಮ ಸುತ್ತಾಡಿದರೂ ಒಂದೂ ಆಸ್ಪತ್ರೆ ಇಲ್ಲಿ ಸಿಗುವುದಿಲ್ಲ.
ಜನಪದ ಕಥೆಯ ಹಿನ್ನೆಲೆಯೊಂದಿಗೆ ಐತಿಹಾಸಿಕ ಪ್ರಸಿದ್ಧಿ ಇರುವ ಅನಿಲಗೋಡ ಕೊಡಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಜನಪದರ ದೇವರುಗಳಾದ ಕುಮಾರ ರಾಮನ ಸ್ಮರಣೆ ಅಂಗವಾಗಿ ಇಲ್ಲಿ ವಾರ್ಷಿಕವಾಗಿ ನಡೆಯುವ ‘ಅಣ್ಗೋಡ ಹಬ್ಬ’ಕ್ಕೆ ದೂರದ ಊರುಗಳಿಂದಲೂ ಭಕ್ತರು ಬರುತ್ತಾರೆ.
ಅಡಿಕೆ, ತೆಂಗು, ಭತ್ತ ಮೊದಲಾದ ಬೆಳೆಗಳೊಂದಿಗೆ ಸದಾ ಹಸಿರಿನಿಂದ ಕಂಗೊಳಿಸುವ ಈ ಊರು ಜಾನಪದ ವೈಭವದ ನಡುವೆಯೂ ಗ್ರಾಮದ ಉಳಿದ ಮಜರೆಗಳಂತೆ ಕೆಲವು ಕೊರತೆಗಳನ್ನು ಎದುರಿಸುತ್ತಿದೆ.
ದಿನಕರ ದೇಸಾಯಿ ಸ್ಥಾಪಿಸಿದ ಜನತಾ ಹೈಸ್ಕೂಲ್ ಇಲ್ಲಿನ ಹಳ್ಳಿಗರಿಗೆ ದಶಕಗಳ ಹಿಂದೆಯೇ ಪ್ರೌಢ ಶಿಕ್ಷಣವನ್ನು ಪರಿಚಯಿಸಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮಹಿಳೆಯರು ವೃದ್ಧರು ಸೇರಿದಂತೆ ಹೆಚ್ಚಿನ ಜನರಿಗೆ ರಸ್ತೆ ಸೌಕರ್ಯ ಸಮರ್ಪಕವಾಗಿಲ್ಲವೆಂಬ ಕೊರಗಿದೆ.
‘ಹೆಗ್ಗಾರ–ಮಾಗೋಡ–ನಗರಬಸ್ತಿಕೇರಿ ರಸ್ತೆ ಊರಿಗೆ ಹೊರ ಜಗತ್ತಿನ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಅಲ್ಲಿಂದ ಕುಮಾರ ರಾಮ ಮತ್ತು ಮಹಾಸತಿಯರ ದೇವಸ್ಥಾನಕ್ಕೆ ಈಚಿನ ವರ್ಷಗಳಲ್ಲಿ ರಸ್ತೆಯೊಂದು ನಿರ್ಮಾಣವಾಗಿದೆ. ದೇವಸ್ಥಾನಕ್ಕೆ ರಸ್ತೆಯಾಗಿರುವುದರಿಂದ ಹೊರಗಿನ ಭಕ್ತರಿಗೆ ಇಲ್ಲಿಗೆ ಬರಲು ಅನುಕೂಲವಾಗಿದೆ. ಆದರೆ, ಇರುವ ರಸ್ತೆಗಳೆಲ್ಲ ಊರಿನ ಹೊರವಲಯದಲ್ಲಿ ಇವೆ. ಊರಿನ ಒಳಗೆ ಬರಬೇಕೆಂದರೆ ಕಾಲ್ನಡಿಗೆಯೇ ಗತಿ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅನಂತ ನಾಯ್ಕ ಹೆಗ್ಗಾರ.
‘ಜನರು ಸರಂಜಾಮುಗಳನ್ನು ತಲೆಹೊರೆಯಿಂದ ಸಾಗಿಸುವ ಪರಿಸ್ಥಿತಿ ಈಗಲೂ ಇದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಜಲವಳ್ಳಿಯಿಂದ ಮಾಗೋಡಿಗೆ ಸಂಪರ್ಕ ಸೇತುವೆ ನಿರ್ಮಿಸಬೇಕೆನ್ನುವ ಜನರ ಬೇಡಿಕೆ ಬಹುಕಾಲದಿಂದ ನನೆಗುದಿಗೆ ಬಿದ್ದಿದೆ. ಕಾಯಿಲೆಯಾದರೂ ಹತ್ತಿರದಲ್ಲೆಲ್ಲೂ ಆಸ್ಪತ್ರೆಯಿಲ್ಲದಿರುವುದು ಜನರನ್ನು ಹಲವು ಬಾರಿ ಸಂಕಟಕ್ಕೆ ನೂಕಿದೆ’ ಎಂದು ಸಮಸ್ಯೆ ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.