ಕಾರವಾರ: ಅರಬ್ಬಿ ಸಮುದ್ರದ ಅಬ್ಬರಕ್ಕೆ ಈ ಬಾರಿಯೂ ಕಡಲು ಕೊರೆತ ಸಮಸ್ಯೆ ಮುಂದುವರೆದಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಬಂದರು ಜಲಸಾರಿಗೆ ಮಂಡಳಿ ಮುಂದಾಗುತ್ತಿಲ್ಲ ಎಂಬುದು ಜನರ ಆರೋಪ.
ತಾಲ್ಲೂಕಿನ ಮಾಜಾಳಿ ಬಾವಳ ಸಮೀಪ ಕಡಲತೀರದಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಯು ಸಂಪೂರ್ಣ ಕೊಚ್ಚಿಹೋಗಿದೆ. ಅಂಕೋಲಾ ತಾಲ್ಲೂಕಿ ಹಾರವಾಡದ ತರಂಗಮೇಟ್ ಗ್ರಾಮದಲ್ಲಿ ಹಲವು ಮನೆಗಳು, ತೆಂಗಿನ ತೋಟ ಸಮುದ್ರ ಪಾಲಾಗಿದೆ. ಗೋಕರ್ಣದಲ್ಲಿ ಕಡಲತೀರದಲ್ಲಿದ್ದ ರೆಸ್ಟೊರೆಂಟ್, ರೆಸಾರ್ಟ್ ಕೊಠಡಿ ಅಲೆಯ ಅಬ್ಬರಕ್ಕೆ ನಾಶವಾಗಿವೆ.
‘12 ಸ್ಥಳಗಳಲ್ಲಿ ಗಂಭೀರ ಪ್ರಮಾಣದ ಕಡಲು ಕೊರೆತ ಉಂಟಾಗಿದೆ. 1,200 ಮೀ.ಗೂ ಉದ್ದದ ಕಡಲತೀರಕ್ಕೆ ಹಾನಿ ಉಂಟಾಗಿದೆ’ ಎಂಬುದಾಗಿ ಬಂದರು ಜಲಸಾರಿಗೆ ಮಂಡಳಿ ಹೇಳುತ್ತಿದೆ.
‘ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಹಿಂದಿನ ಕೆಲ ವರ್ಷಗಳಿಗಿಂತ ಕಡಲು ಕೊರೆತ ಪ್ರಮಾಣ ಹೆಚ್ಚಿದೆ. ವಿಪರೀತ ತೊಂದರೆ ಎದುರಾದ ಸ್ಥಳಗಳನ್ನು ಗುರುತಿಸಿ ಅಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಪರಿಹಾರ ಕಾಮಗಾರಿಗೆ ಪ್ರಸ್ತಾವ ಕಳಿಸಲಾಗಿದೆ. ತುರ್ತು ಕೆಲಸಕ್ಕೆ ₹6 ಕೋಟಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ವಿ.ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಮೀಕ್ಷೆಯಲ್ಲಿ 12 ಸ್ಥಳಗಳಲ್ಲಿ ಗಂಭೀರ ಪ್ರಮಾಣದಲ್ಲಿ ಕಡಲು ಕೊರೆತ ಉಂಟಾಗಿರುವುದಾಗಿ ಗುರುತಿಸಲಾಗಿದೆ. ಕಾರವಾರದ ಬಾವಳ, ಅಂಕೋಲಾದ ತರಂಗಮೇಟ್, ಹೊನ್ನಾವರದ ಪಾವಿನಕುರ್ವೆ, ಭಟ್ಕಳದ ಹೆರ್ತಾರ ಪ್ರದೇಶದ ವಿವಿಧ ಕಡೆಯಲ್ಲಿ ಕಡಲು ಕೊರೆತದಿಂದ ವ್ಯಾಪಕ ಪ್ರಮಾಣದ ಹಾನಿ ಸಂಭವಿಸಿದೆ’ ಎಂದು ವಿವರಿಸಿದರು.
‘ಕಡಲು ಕೊರೆತ ಉಂಟಾದ ಬಳಿಕ ಅಧಿಕಾರಿಗಳು ಪರಿಹಾರ ಮಾರ್ಗೋಪಾಯ ಕಲ್ಪಿಸಲು ಮುಂದಾಗುತ್ತಾರೆ. ಕೊರೆತ ಉಂಟಾಗಬಹುದಾದ ಸ್ಥಳವನ್ನು ಮುಂಚಿತವಾಗಿ ಗುರುತಿಸಿ ಸುರಕ್ಷತೆ ವಹಿಸಲು, ಕಡಲು ಕೊರೆತ ತಡೆಯಲು ಶಾಶ್ವತವಾಗಿ ರೂಪಿಸಬೇಕಾದ ಯೋಜನೆ ಕೈಗೊಳ್ಳಲು ಆಸಕ್ತಿ ತೋರಿಸುತ್ತಿಲ್ಲ’ ಎಂದು ಮಾಜಾಳಿಯ ಕೃಷ್ಣ ಮೇಥಾ ದೂರಿದರು.
ಕಡಲು ಕೊರೆತ ತಡೆಗೆ ತುರ್ತು ಕಾಮಗಾರಿಗೆ ಕರಾವಳಿಯ ಮೂರು ಜಿಲ್ಲೆ ಸೇರಿ ₹20 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅನುದಾನ ಲಭಿಸಿದ ತಕ್ಷಣ ರಕ್ಷಣಾ ಕಾಮಗಾರಿ ಕೈಗೊಳ್ಳುತ್ತೇವೆಕ್ಯಾಪ್ಟನ್ ಸಿ.ಸ್ವಾಮಿ ಬಂದರು ಜಲಸಾರಿಗೆ ಮಂಡಳಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.