ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಅಡಿಕೆಗೆ ವ್ಯಾಪಕ ಕೊಳೆ ರೋಗ ಬಾಧೆ: ಪರಿಹಾರ ಪಡೆಯಲು ಬೇಕಿದೆ ‘ಅವಕಾಶ’

Published : 21 ಆಗಸ್ಟ್ 2024, 5:38 IST
Last Updated : 21 ಆಗಸ್ಟ್ 2024, 5:38 IST
ಫಾಲೋ ಮಾಡಿ
Comments

ಶಿರಸಿ: ಅಡಿಕೆಗೆ ಬಾಧಿಸುತ್ತಿರುವ ಕೊಳೆ ರೋಗಕ್ಕೆ ಅರ್ಧಕ್ಕೂ ಹೆಚ್ಚು ಬೆಳೆ ಕೈತಪ್ಪಿದರೂ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಪಡೆಯಲು ಸರ್ಕಾರದ ನಿಯಮಾವಳಿಯಲ್ಲಿ ‘ಅವಕಾಶ’ ಇಲ್ಲದಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. 

ಪ್ರಸಕ್ತ ವರ್ಷ ಸುರಿದ ಅತಿವೃಷ್ಟಿಗೆ ಅಡಿಕೆ ಬೆಳೆಗೆ ತೀವ್ರ ಕೊಳೆರೋಗ ವ್ಯಾಪಿಸಿದೆ. ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಿಸಲು ಅವಕಾಶ ನೀಡದೇ ಮಳೆ ಸುರಿದ ಪರಿಣಾಮ ರೋಗ ಉಲ್ಬಣಗೊಂಡು ಮರದಲ್ಲಿದ್ದ ಭಾಗಶಃ ಕಾಯಿಗಳನ್ನು ಆಹುತಿ ತೆಗೆದುಕೊಂಡಿದೆ.

‘ಅಡಿಕೆ ಮರ ಬಿದ್ದು ಹಾನಿಯಾದವರಿಗೆ ಪ್ರಕೃತಿ ವಿಕೋಪ ನಿಧಿಯಡಿ ಅಲ್ಪ ಪರಿಹಾರ ದೊರೆಯುತ್ತದೆ. ಆದರೆ ಪ್ರತಿ ವರ್ಷ ವಾತಾವರಣ ವೈಪರೀತ್ಯದಿಂದ ಬರುವ ಕೊಳೆ ರೋಗದಿಂದ ಬೆಳೆಗಾರರಿಗೆ ಹೆಚ್ಚಿನ ಹಾನಿಯಾಗುತ್ತಿದೆ. ಎನ್‌ಡಿಆರ್‌ಎಫ್,  ಎಸ್‌ಡಿಆರ್‌ಎಫ್‌ ಹಾಗೂ ಸರ್ಕಾರಗಳ ವಿಮಾ ಯೋಜನೆಗಳಡಿ ಕೊಳೆ ರೋಗಕ್ಕೆ ಪರಿಹಾರ ನೀಡಲು ಅವಕಾಶವನ್ನೇ ಇಟ್ಟಿಲ್ಲ. ಈ ಹಿಂದೆ ಹೆಕ್ಟೇರ್‌ಗೆ ₹18 ಸಾವಿರ ಪರಿಹಾರ ನೀಡುತ್ತಿದ್ದುದನ್ನು ಕಾರಣವಿಲ್ಲದೆ  ಸ್ಥಗಿತಗೊಳಿಸಲಾಗಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಅನ್ಯಾಯ ಆಗುವಂತಾಗಿದೆ’ ಎಂಬುದು ಅಡಿಕೆ ಬೆಳೆಗಾರರ ದೂರಾಗಿದೆ. 

‘ಒಂದು ಹೆಕ್ಟೇರ್‌ನಲ್ಲಿ ವರ್ಷಕ್ಕೆ 25 ಕ್ವಿಂಟಲ್‌ ಅಡಿಕೆ ಬೆಳೆ ಬರುತ್ತಿದ್ದು, ಇದರ ಮಾರುಕಟ್ಟೆ ಮೌಲ್ಯ ಅಂದಾಜು ₹7 ಲಕ್ಷದಿಂದ ₹8 ಲಕ್ಷ. ಆದರೆ ಈ ಬಾರಿ ಅರ್ಧ ಬೆಳೆ ಈಗಾಗಲೇ ಉದುರಿದೆ. ಉಳಿದ ಅಡಿಕೆಗೂ ರೋಗ ವ್ಯಾಪಿಸುತ್ತಿದೆ. ಸರ್ಕಾರವು ವಿಮಾ ಯೋಜನೆಯಡಿ ಕೊಳೆರೋಗದಿಂದಾದ ಹಾನಿಗೂ ಪರಿಹಾರ ನೀಡಲು ನಿಯಮಾವಳಿ ರೂಪಿಸಬೇಕು. ಅಡಿಕೆ ಮಾರುಕಟ್ಟೆ ಮೌಲ್ಯ, ಉತ್ಪಾದನೆ ಆಧರಿಸಿ ವೈಜ್ಞಾನಿಕ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಬೇಕು’ ಎಂಬುದು ಅಡಿಕೆ ಬೆಳೆಗಾರರ ಒತ್ತಾಯವಾಗಿದೆ. 

‘ರಾಜ್ಯದ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. 1 ಲಕ್ಷ ಹೆ.ಗೂ ಹೆಚ್ಚಿನ ಪ್ರದೇಶದಲ್ಲಿ ಕೊಳೆ ರೋಗ ವ್ಯಾಪಕವಾಗಿ ಹರಡಿದ್ದು, ನೂರಾರು ಕೋಟಿ ರೂಪಾಯಿಯ ಬೆಳೆ ನಾಶವಾಗಿದೆ. ಹೀಗಾಗಿ ತೋಟಗಾರಿಕಾ ಇಲಾಖೆ ಸಮೀಕ್ಷೆ ನಡೆಸಿ ಹಾನಿ ವರದಿ ಸಿದ್ಧಪಡಿಸುತ್ತಿದೆ. ವಿವಿಧೆಡೆ ಕನಿಷ್ಠ ಶೇ 33ರಿಂದ ಗರಿಷ್ಠ ಶೇ 50ರಷ್ಟು ಬೆಳೆ ಹಾನಿಯಾಗಿರುವುದನ್ನು ಗುರುತಿಸುತ್ತಿದೆ. ಹಲವೆಡೆ ಬಿಸಿಲು, ಮಳೆಯಿರುವ ಕಾರಣ ರೋಗ ಮತ್ತಷ್ಟು ಉಲ್ಬಣಿಸುತ್ತಿದ್ದು, ನಷ್ಟ ಇನ್ನಷ್ಟು ಹೆಚ್ಚಲಿದೆ' ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Quote - ಅಡಿಕೆ ಕೊಳೆ ರೋಗದಿಂದಾದ ಹಾನಿಗೆ ಹೆಚ್ಚಿನ ಪರಿಹಾರ ನೀಡಬೇಕು. ಬೋರ್ಡೋ ಮಿಶ್ರಣದ ಮೇಲಿನ ಜಿಎಸ್‌ಟಿ ಇಳಿಸಬೇಕು. ಮಳೆ ಮಾಪನ ಅಳತೆ ಸಮರ್ಪಕಗೊಳಿಸಬೇಕು ಗೋಪಾಲಕೃಷ್ಣ ವೈದ್ಯ ಟಿಎಸ್ಎಸ್ ಅಧ್ಯಕ್ಷ ಶಿರಸಿ

Quote - ವಿಮೆ ಯೋಜನೆಯಡಿ ಅಡಿಕೆಗೆ ಕೊಳೆ ರೋಗದಿಂದಾದ ಹಾನಿಗೆ ಪರಿಹಾರ ನೀಡಲು ಅವಕಾಶವಿಲ್ಲ. ಕೊಳೆ ರೋಗವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆದೇಶಿಸಿದರೆ ಪರಿಹಾರ ದೊರಕುತ್ತದೆ ಬಿ.ಪಿ.ಸತೀಶ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT