ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಕೆರೆಗಳಲ್ಲಿ ನೀರು ಸಂಗ್ರಹ ಸಾಮರ್ಥ್ಯ ಸಂಕುಚಿತ

ಶಿರಸಿ ತಾಲ್ಲೂಕಿನ ಕೆರೆಗಳಲ್ಲಿ ಶೇ 60ಕ್ಕೂ ಹೆಚ್ಚು ಹೂಳಿನ ಗೋಳು
Published : 16 ಸೆಪ್ಟೆಂಬರ್ 2024, 3:19 IST
Last Updated : 16 ಸೆಪ್ಟೆಂಬರ್ 2024, 3:19 IST
ಫಾಲೋ ಮಾಡಿ
Comments

ಶಿರಸಿ: ಮಳೆಯಾಶ್ರಿತ ಕೃಷಿ ವ್ಯವಸ್ಥೆ ಹೊಂದಿರುವ ಬನವಾಸಿ ಹೋಬಳಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾದರೂ ಬಹುತೇಕ ಕೆರೆಗಳಲ್ಲಿ ನಿರೀಕ್ಷಿತ ಜೀವಜಲ ಸಂಗ್ರಹಣೆಯಾಗಿಲ್ಲ. ಕೆರೆ ಅಂಗಳದಲ್ಲಿ ನೀರಿಗಿಂತ ಹೂಳು ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. 

ಪ್ರಸಕ್ತ ವರ್ಷ ತಾಲ್ಲೂಕಿನೆಲ್ಲೆಡೆ ಉತ್ತಮ ಮಳೆಯಾಗಿದೆ. ಕೆರೆಕಟ್ಟೆಗಳು ಭರ್ತಿಯಾಗಿವೆ. ಆದರೆ ಬನವಾಸಿ ಹೋಬಳಿಯ ಕೆರೆಗಳಲ್ಲಿ ಮೇಲ್ನೋಟಕ್ಕೆ ನೀರು ತುಂಬಿಕೊಂಡಂತೆ ಕಂಡರೂ ಹೂಳಿನ ಪ್ರಮಾಣ ಹೆಚ್ಚಿರುವ ಕಾರಣ ನೀರಿನ ಪ್ರಮಾಣ ತೀರಾ ಕಡಿಮೆಯಿದೆ. ಹಲವು ವರ್ಷಗಳಿಂದ ಹೂಳೆತ್ತದ, ನಿರ್ವಹಣೆಯಿಲ್ಲದ ಪರಿಣಾಮ ಕೆರೆಗಳ ಮೂಲ ಸಾಮರ್ಥ್ಯದಷ್ಟು ನೀರು ಸಂಗ್ರಹಣೆ ಆಗುತ್ತಿಲ್ಲ. ಮಳೆಗಾಲದ ಸಂದರ್ಭದಲ್ಲಿ ಕೆರೆ ಸಂಪೂರ್ಣ ತುಂಬಿದರೂ ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಕೆರೆಯೊಡಲು ಸಂಪೂರ್ಣ ಬರಿದಾಗುತ್ತದೆ' ಎಂಬುದು ಬನವಾಸಿ ಭಾಗದ ಕೃಷಿಕರ ಅನುಭವದ ಮಾತಾಗಿದೆ. 

ಬನವಾಸಿ ಹೋಬಳಿಯ ಭಾಶಿ, ಅಂಡಗಿ, ಹಲನಗದ್ದೆ, ದಾಸನಕೊಪ್ಪ, ಬಿಸಲಕೊಪ್ಪ, ಗುಡ್ನಾಪುರ, ಉಂಚಳ್ಳಿ ಭಾಗದಲ್ಲಿ 50ಕ್ಕೂ ಹೆಚ್ಚು ಬೃಹತ್ ಕೆರೆಗಳಿವೆ. ಆದರೆ ಬಹುತೇಕ ಕೆರೆಗಳು ಹೂಳು ತುಂಬಿಕೊಂಡು ಸೊರಗಿವೆ. ಬೇಸಿಗೆಯ ಸಂದರ್ಭದಲ್ಲಿ ನೀರಿಗಾಗಿ ಕೆರೆಯಲ್ಲಿ ಅಲ್ಲಲ್ಲಿ ಆಳದ ಗುಂಡಿ ತೋಡುವುದು, ಒಂದೆರಡು ಅಡಿಯಷ್ಟು ಮಾತ್ರ ಹೂಳು ತೆಗೆದಿರುವ ಪರಿಣಾಮ ನೀರಿನ ಸಂಗ್ರಹಣೆ ಸರಿಯಾಗಿ ಆಗಿಲ್ಲ.

'ಹಲವು ಕೆರೆಗಳು ಹುಲ್ಲು, ಪಾಚಿ, ಅಂತರಗಂಗೆ, ಕಸಕಡ್ಡಿಗಳಿಂದ ಆವೃತವಾಗಿದ್ದು, ಇದರಿಂದ ಕೆರೆ ಆಳ ಕಡಿಮೆಯಾಗಿ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಕೆಲ ಕೆರೆಗಳು ಅರ್ಧಕ್ಕಿಂತ ಹೆಚ್ಚು ಭಾಗ ಅತಿಕ್ರಮಣವಾಗಿವೆ. ಇವೆಲ್ಲ ಸಮಸ್ಯೆಯಿಂದ ಕೆರೆಗಳ ನೀರು ಧಾರಣಾ ಸಾಮರ್ಥ್ಯದ ಮೇಲಾಗುತ್ತಿದೆ' ಎಂಬುದು ಬನವಾಸಿಯ ರೈತ ಗಣಪತಿ ಗೌಡ ಅಭಿಪ್ರಾಯ. 

'ವರದಾ ನದಿಯಿಂದ ಏತ ನೀರಾವರಿ ಯೋಜನೆಯಡಿ ಬನವಾಸಿ ಹೋಬಳಿಯ 32 ಕೆರೆಗಳ ಒಡಲು ತುಂಬುವ ಯೋಜನೆ ಜಾರಿಗೊಂಡು ವರ್ಷ ಕಳೆದಿದೆ. ಆದರೆ ಈವರೆಗೆ ಕೆರೆಗಳ ಒಡಲು ಭರ್ತಿ ಮಾಡಲು ಸಾಧ್ಯವಾಗಿಲ್ಲ. ಒಂದೊಮ್ಮೆ ಯೋಜನೆಯಡಿ ಸಮರ್ಪಕ ನೀರು ಪೂರೈಸಿದರೆ ಆ ನೀರು ಸಂಗ್ರಹಿಸಿ ಇಟ್ಟುಕೊಳ್ಳಲು ಈ ಭಾಗದ 25ಕ್ಕೂ ಹೆಚ್ಚಿನ ಕೆರೆಗಳಿಗೆ ಸಾಮರ್ಥ್ಯ ಇಲ್ಲದಂತಾಗಿದೆ. ಮೇಲ್ಮೈ ಭಾಗವು ಬೃಹದಾಕಾರವಾಗಿ ಗೋಚರಿಸಿದರೂ ಕೆರೆಯ ಆಂತರ್ಯ ಮಾತ್ರ ಹೂಳಿನಿಂದ ಆವೃತವಾಗಿ ಕೆಲವು ಅಡಿ ಮಾತ್ರ ಇದೆ. ಇದರಿಂದಾಗಿ ಕೆರೆ ತುಂಬುವ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ' ಎಂಬುದು ಕರೆಯಾಶ್ರಿತ ಸ್ಥಳೀಯರ ಮಾತಾಗಿದೆ. 

'ಕೃಷಿ, ಜಾನುವಾರು, ಜನಜೀವನಕ್ಕೆ ಪೂರಕವಾಗಿ ನಿರ್ಮಿಸಿದ್ದ ಆಳವಾದ ಕೆರೆಯಲ್ಲಿ ಹೂಳು ತುಂಬಿದೆ. ಇದನ್ನು ತೆರವುಗೊಳಿಸಿ, ಕೆರೆ ಸುತ್ತ ದಂಡೆಯನ್ನು ಕಟ್ಟಿ ಸುತ್ತಲಿನ ಕೊಳಕು ನೀರು, ತ್ಯಾಜ್ಯ ಕೆರೆ ಸೇರದಂತೆ ಮಾಡಬೇಕು. ಕೆರೆಯ ಅಭಿವೃದ್ಧಿಯಿಂದ ಅಂತರ್ಜಲ ಹೆಚ್ಚಿ ಸುತ್ತ ಮುತ್ತಲಿನ ಬಾವಿಗಳಿಗೆ ನೀರಿನ ಸಮಸ್ಯೆ ನೀಗಿಸಬಹುದು. ಜತೆಗೆ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಬಹುದಾಗಿದೆ. ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಎದುರಿಸುತ್ತಿರುವುದರಿಂದ ಈ ಭಾಗದ ಎಲ್ಲ ಕೆರೆಗಳನ್ನು ಸರ್ಕಾರವೇ ಮುಂದಾಗಿ ಶೀಘ್ರದಲ್ಲಿ ಅಭಿವೃದ್ಧಿಪಡಿಸಬೇಕು' ಎಂಬುದು ಹೋಬಳಿ ರೈತರ ಒತ್ತಾಯವಾಗಿದೆ.

ಬಹುತೇಕ ಕೆರೆಗಳು ಶೇ 15ರಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಕೆರೆಗಳ ಮೂಲ ದಾಖಲೆಯಾದ ಟ್ಯಾಂಕ್ ರಜಿಸ್ಟರ್ ಪ್ರಕಾರ ಹೂಳೆತ್ತುವ ಕಾರ್ಯ ಆಗಬೇಕು. ಹೂಳೆತ್ತಿದರೆ ಮಾತ್ರ ಕೆರೆಗಳಿಗೆ ಜೀವಂತಿಕೆ ಸಾಧ್ಯ
ಶಿವಾನಂದ ಕಳವೆ ಪರಿಸರ ಬರಹಗಾರ
ಬನವಾಸಿ ಭಾಗದ ಹೂಳು ತುಂಬಿರುವ ಕೆಲ ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಉಳಿದ ಕೆರೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು
ಶಿವರಾಮ ಹೆಬ್ಬಾರ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT