ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಬೆಳೆಸಾಲಕ್ಕೆ ‘ತಂತ್ರಾಂಶ’ ತೊಡಕು

ಭೂಮಿ ತಂತ್ರಾಂಶದ ತಾಂತ್ರಿಕ ಸಮಸ್ಯೆಗೆ ರೈತ ಕಂಗಾಲು
Published 6 ಜೂನ್ 2024, 4:40 IST
Last Updated 6 ಜೂನ್ 2024, 4:40 IST
ಅಕ್ಷರ ಗಾತ್ರ

ಶಿರಸಿ: ರೈತರ ಜಮೀನಿನ ಸಮಗ್ರ ಮಾಹಿತಿ ಒದಗಿಸುವ ಭೂಮಿ ತಂತ್ರಾಂಶದಲ್ಲಿನ ತೊಡಕಿನಿಂದ ಕೃಷಿ, ತೋಟಗಾರಿಕೆ ಕ್ಷೇತ್ರಾಭಿವೃದ್ಧಿಗೆ ಪೂರಕವಾಗಿರುವ ‘ಬೆಳೆಸಾಲ’ ಪಡೆಯಲು ರೈತರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲ ಆರಂಭದ ದಿನಗಳಲ್ಲಿ ರೈತರು ಕ್ಷೇತ್ರಾಭಿವೃದ್ಧಿಗೆ, ಜಮೀನು ಕಾರ್ಯಕ್ಕೆ ಅನುಕೂಲವಾಗಿ ಸರ್ಕಾರ ₹3 ಲಕ್ಷದವರೆಗೆ ನೀಡುವ ಶೂನ್ಯ ಬಡ್ಡಿದರದ ಬೆಳೆಸಾಲ ಪಡೆಯುತ್ತಾರೆ. ಅದಕ್ಕಾಗಿ ಸ್ಥಳೀಯ ಸಹಕಾರಿ ಸಂಘಗಳ ಮೂಲಕ ಬೆಳೆಸಾಲ ಅರ್ಜಿ ಸಲ್ಲಿಸುತ್ತಾರೆ. ಅರ್ಜಿಯ ಜತೆ ಫ್ರೂಟ್ಸ್ ಐಡಿ (ಎಫ್ಐಡಿ) ಹಾಗೂ ಆಧಾರ್ ನಂಬರ್ ಜೋಡಣೆಯಾದ ಜಮೀನಿನ ಪಹಣಿ ನೀಡಬೇಕು. ಸಹಕಾರಿ ಸಂಸ್ಥೆಯ ವತಿಯಿಂದ ರೈತ ನೀಡಿದ ಮಾಹಿತಿ ಭೂಮಿ ತಂತ್ರಾಂಶಕ್ಕೆ ಅಪ್ಲೋಡ್ ಮಾಡಲಾಗುತ್ತದೆ. ನಂತರ ಬಾಂಡ್‌ಗೆ ರೈತನ ಸಹಿ ಪಡೆಯಲಾಗುತ್ತದೆ. ಇದಾದ ನಂತರ ರೈತನ ಬ್ಯಾಂಕ್ ಖಾತೆಗೆ ಬೆಳೆಸಾಲದ ಮೊತ್ತ ಜಮಾ ಮಾಡಲಾಗುತ್ತದೆ. ಆದರೆ ಎಲ್ಲ ಮಾಹಿತಿಗಳನ್ನು ರೈತ ಸಹಕಾರಿ ಸಂಸ್ಥೆಗೆ ಒದಗಿಸಿದರೂ ಪ್ರಸ್ತುತ ಭೂಮಿ ತಂತ್ರಾಶದಲ್ಲಿ ಅವುಗಳನ್ನು ಅಪ್ಲೋಡ್ ಮಾಡುವ ವೇಳೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಹಲವು ರೈತರು ಬೆಳೆಸಾಲ ಪಡೆಯಲು ಪರದಾಡುವಂತಾಗಿದೆ.

ರೈತರ ಪಹಣಿಯಲ್ಲಿ ಬೆಳೆ ಸರಿಯಾಗಿ ನಮೂದಾಗಿದ್ದರೂ ತಂತ್ರಾಂಶ ಅದನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಬೆಳೆಸಾಲ ಮಂಜೂರಿಗೆ ಸಮಸ್ಯೆ ಎದುರಾಗಿದೆ. ಯಾವ ಕಾರಣಕ್ಕೆ ಹೀಗಾಗುತ್ತಿದೆ ಎಂಬುದನ್ನು ಕಂದಾಯ, ಕೃಷಿ ಇಲಾಖೆಗಳಲ್ಲಿ ವಿಚಾರಿಸಿದರೂ ಪ್ರಯೋಜನವಾಗುತ್ತಿಲ್ಲ. ಎಫ್ಐಡಿ ಸಹಾಯವಾಣಿ (08022208333)ಗೆ ಕರೆ ಮಾಡಿ ದೂರು ದಾಖಲಿಸಿದರೂ ಸ್ಪಂದನೆ ಸಿಗುತ್ತಿಲ್ಲ. ಬೆಳೆಸಾಲ ಪಡೆಯಲು ರೈತರು ನಿತ್ಯ ಸಹಕಾರಿ ಸಂಘಗಳಿಗೆ ಅಲೆಯುತ್ತಿದ್ದರೆ, ಸಂಘಗಳು ಸರಿಯಾದ ಮಾಹಿತಿಯಿಲ್ಲದೇ ಪಜೀತಿ ಅನುಭವಿಸುತ್ತಿವೆ’ ಎಂಬುದು ಶಿರಸಿಯ ರೈತ ಶಿವಪ್ರಸಾದ ಹೆಗಡೆ ಮಾತು. 

‘ಇಲಾಖೆಗಳ ನಡುವೆ ಸಮನ್ವಯತೆಯಿಲ್ಲ. ಬೆಳೆಸಾಲ ನೀಡುವ ವ್ಯವಸ್ಥೆ ಉತ್ತಮವಾಗಿದ್ದರೂ ತಂತ್ರಾಂಶಗಳು ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ತೀವ್ರ ಸಮಸ್ಯೆ ಎದುರಾಗಿದೆ. ಬೆಳೆಸಾಲ ನೀಡುವ ಸಹಕಾರಿ ಸಂಘಸಂಸ್ಥೆಗಳು ವ್ಯವಸ್ಥೆಯ ಹೊರಗೆ ಸಾಲ ನೀಡುವುದಿಲ್ಲ. ತಂತ್ರಾಂಶ ಸಮಸ್ಯೆ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಎಫ್ಐಡಿ ಕಡ್ಡಾಯ ಕೇಳುವ ಬೆಳೆವಿಮೆಗೂ ಸಮಸ್ಯೆ ಆಗುವ ಸಾಧ್ಯತೆಯಿದೆ. ಬೆಳೆಸಾಲ, ಬೆಳೆವಿಮೆ ಸಿಗದಿದ್ದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂಬುದು ಬಹುತೇಕ ರೈತರ ಅಭಿಪ್ರಾಯ.

‘ಪಹಣಿಯಲ್ಲಿ ಬೆಳೆ ದಾಖಲು ಸರಿಯಾಗಿದೆ. ಆದರೆ ಇಂಥ ಸಮಸ್ಯೆಗಳು ಯಾಕೆ ಬರುತ್ತಿವೆ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವ ಪ್ರಯತ್ನ ನಡೆದಿದೆಯಾದರೂ ಇನ್ನೂ ಬಗೆಹರಿಯದಿರುವುದು ಬೆಳೆಸಾಲದ ನಿರೀಕ್ಷೆಯಲ್ಲಿರುವ ಹಲವು ರೈತರಿಗೆ ಸಮಸ್ಯೆಗೆ ಕಾರಣವಾಗಿದೆ’ ಎಂಬುದು ರೈತ ಸಂಪರ್ಕ ಕೇಂದ್ರದ ಅಧಿಕಾರಿಯೊಬ್ಬರ ಮಾಹಿತಿ.

ಬೆಳೆಸಾಲ ಪಡೆಯಲು ರೈತರ ಎಪ್ಐಡಿ ಮಾಹಿತಿ ಒಳಗೊಂಡ ರೈತರ ಪಹಣಿ ಮಾಹಿತಿಯನ್ನು ಭೂಮಿ ತಂತ್ರಾಂಶಕ್ಕೆ ಅಪ್ಲೋಡ್ ಮಾಡಬೇಕು. ಆದರೆ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ‘ನಿಮ್ಮ ಜಮೀನಿನ ಮಾಹಿತಿ ತಂತ್ರಾಂಶದಲ್ಲಿ ಇಲ್ಲ’ ಎಂದು ಬರುತ್ತಿದೆ. ಇದರಿಂದ ಬೆಳೆಸಾಲದ ಅರ್ಜಿ ಸಲ್ಲಿಸಲು ಆಗದಂತಾಗಿದ್ದು ರೈತರು ಕಂಗಾಲಾಗಿದ್ದಾರೆ

-ನರಸಿಂಹ ಹೆಗಡೆ ಹುಲೇಕಲ್ ಕೃಷಿಕ

ಜಂಟಿ ಖಾತೆಗಳಿಗೆ ಸ್ವಲ್ಪ ಸಮಸ್ಯೆಯಿದೆ. ಈ ಕುರಿತು ಇಲಾಖೆ ವ್ಯಾಪ್ತಿಯಲ್ಲಿ ಬಗೆಹರಿಸುವ ಪ್ರಯತ್ನ ನಡೆದಿದೆ

-ಸತೀಶ ಹೆಗಡೆ ತಾಲ್ಲೂಕು ಪಂಚಾಯಿತಿ ಇಒ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT