ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ನಗರದಂಚಿನ ಬೆಟ್ಟಕ್ಕೆ ಅತಿಕ್ರಮಣದ ಪೆಟ್ಟು

ಆದೇಶವಾದರೂ ತೆರವು ಮಾಡದ ಇಲಾಖೆಗಳು
Published : 23 ಸೆಪ್ಟೆಂಬರ್ 2024, 5:04 IST
Last Updated : 23 ಸೆಪ್ಟೆಂಬರ್ 2024, 5:04 IST
ಫಾಲೋ ಮಾಡಿ
Comments

ಶಿರಸಿ: ನಗರದಂಚಿನ ಗ್ರಾಮಗಳ ಮಾಲ್ಕಿ ಅಡಿಕೆ ತೋಟದ ಬಳಕೆಗೆ ಬಿಟ್ಟಿರುವ ಬೆಟ್ಟ ಭೂಮಿಯಲ್ಲಿ ಅತಿಕ್ರಮಣ ಹೆಚ್ಚಿದೆ. ಆದರೆ ಇವುಗಳ ತೆರವು ಕಾರ್ಯದ ಜವಾಬ್ದಾರಿ ಇರುವ ಇಲಾಖೆಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು, ಭೂಮಿ ಹಕ್ಕಿರುವ ವಹಿವಾಟುದಾರರಿಗೆ ತಲೆನೋವಾಗಿ ಪರಿಣಮಿಸಿದೆ. 

ತಾಲ್ಲೂಕಿನ ಹುತ್ಗಾರ, ಸದಾಶಿವಳ್ಳಿ, ಇಸಳೂರು, ಕುಳವೆ, ದೊಡ್ನಳ್ಳಿ, ಯಡಳ್ಳಿ ಗ್ರಾಮ ಪಂಚಾಯಿತಿಗಳು ನಗರಕ್ಕೆ ತಾಗಿಕೊಂಡಿದ್ದು, ಕೆಲವೆಡೆ ಬೆಟ್ಟ ಭೂಮಿ ಅತಿಕ್ರಮಣ ಆಗುತ್ತಿದೆ. ನಗರ ಬೆಳೆದಂತೆ ಕಟ್ಟಡ, ಇತರ ಚಟುವಟಿಕೆಗೆ ಜಾಗದ ಕೊರತೆಯಿರುವ ಕಾರಣ ಅತಿಕ್ರಮಣ ಹೆಚ್ಚುತ್ತಿದೆ. ಬೆಟ್ಟದಲ್ಲಿ ಅತಿಕ್ರಮಣ ಮಾಡಿದವರಿಗೆ ಯಾರಿಗೂ ಆಯಾ ಗ್ರಾಮದಲ್ಲಿ ಅಡಿಕೆ ಭಾಗಾಯ್ತ ಇಲ್ಲ. ಯಾರೊಬ್ಬರೂ ಬೆಟ್ಟದ ವೈವಾಟುದಾರರಲ್ಲ. ಅತಿಕ್ರಮಣದಾರರಿಗೆ ಬೆಟ್ಟದಲ್ಲಿ ಯಾವ ಹಕ್ಕೂ ಇಲ್ಲ. ಆದಾಗ್ಯೂ ಅತಿಕ್ರಮಣ ಹೆಚ್ಚುತ್ತಿದ್ದು, ವಾಣಿಜ್ಯ ಚಟುವಟಿಕೆ, ಮನೆಗಳ ನಿರ್ಮಾಣ ನಡೆದಿದೆ. ಹೀಗಾಗಿ ಬೆಟ್ಟ ಬಳಕೆದಾರರು ಕಂಗಾಲಾಗಿದ್ದಾರೆ' ಎಂಬುದು ನಗರದಂಚಿನ ಬೆಟ್ಟ ವಹಿವಾಟುದಾರರ ಮಾತಾಗಿದೆ.

ಈ ಹಿಂದೆ ಸರ್ವೆ ಇಲಾಖೆಯವರು ತಹಶೀಲ್ದಾರ್‌ ಆದೇಶದ ಮೇರೆಗೆ ಸರ್ವೆ ಮಾಡಿದಾಗ, ನಗರದ ಸುತ್ತಮುತ್ತಲ ಬೆಟ್ಟ ಭೂಮಿಯಲ್ಲಿ 24 ಜನರು ಅತಿಕ್ರಮಣ ಮಾಡಿದ್ದು ಕಂಡುಬಂದಿದೆ. ಕಾನೂನು ಪ್ರಕಾರ ಅತಿಕ್ರಮಣ ತೆರವು ಮಾಡಲು ಕಂದಾಯ ಇಲಾಖೆಯಿಂದ ಈ ಹಿಂದೆಯೇ ಆದೇಶ ಆಗಿದ್ದರೂ ಇನ್ನೂ ತೆರವು ಆಗಿಲ್ಲ. ಬೆಟ್ಟದಲ್ಲಿ ಅತಿಕ್ರಮಣವಾದ ತಕ್ಷಣ ತೆರವುಗೊಳಿಸುವ, ಅತಿಕ್ರಮಣ ಮಾಡಿದವರನ್ನು ಶಿಕ್ಷಿಸುವ ಕೆಲಸವಾಗದೇ ಇರುವುದರಿಂದ ಅತಿಕ್ರಮಣದಾರರಿಗೆ ಭಯವಿಲ್ಲದಂತಾಗಿದೆ. ಬೆಟ್ಟದ ಮೂಲ ವಹುವಾಟುದಾರರನ್ನು ಹೆದರಿಸಿ, ಬೆದರಿಸಿ ಸುಮ್ಮನಿರಿಸುವ ಕೆಲಸ ಕೂಡ ಆಗುತ್ತಿದೆ' ಎನ್ನುತ್ತಾರೆ ಹುತ್ಗಾರ ಪಂಚಾಯಿತಿ ವ್ಯಾಪ್ತಿಯ ಸದಾನಂದ ಹೆಗಡೆ. 

‘ಬೆಟ್ಟದಲ್ಲಿ ಕಾನೂನು ಬಾಹಿರವಾಗಿ ಆದ ಅತಿಕ್ರಮಣವನ್ನು ತೆರವು ಗೊಳಿಸುವ ಕಾರ್ಯಾಚರಣೆ ಮಾಡುವ ಕೆಲಸ ಬಂದಾಗ ಅರಣ್ಯ ಇಲಾಖೆಯವರು, ತೆರವು ಗೊಳಿಸುವ ಕೆಲಸ ಕಂದಾಯ ಇಲಾಖೆಯ ಕೆಲಸವೆಂದು ಹೇಳುತ್ತಾರೆ. ಕಂದಾಯ ಇಲಾಖೆಯವರು ತಮ್ಮದು ತೆರವು ಗೊಳಿಸುವ ಕೆಲಸ ಅಲ್ಲ, ಅರಣ್ಯ ಇಲಾಖೆಯ ಕೆಲಸ ಎಂದು ಹೇಳುತ್ತಾರೆ. ಹೀಗಾಗಿ ಅತಿಕ್ರಮಣ ಆಗುವದನ್ನು ನಿಲ್ಲಿಸುವವರು ಇಲ್ಲದಂತಾಗಿದೆ. ಇದರಿಂದ ಅತಿಕ್ರಮಣದಾರರಿಗೆ ಉತ್ತೇಜನ ಸಿಕ್ಕಿ ಮತ್ತೆ ಮತ್ತೆ ಅತಿಕ್ರಮಣ ಮಾಡುತ್ತಿದ್ದಾರೆ. ನಿಜವಾದ ಹಕ್ಕು ಇರುವವನಿಗೆ ನ್ಯಾಯ ಸಿಗದಂತಾಗಿದೆ’ ಎನ್ನುತ್ತಾರೆ ಪುಟ್ಟನಮನೆಯ ವಿಶ್ವನಾಥ ಹೆಗಡೆ. 

‘ಕಂದಾಯ ಇಲಾಖೆ ಆದೇಶದನ್ವಯ ಬೆಟ್ಟ ಅತಿಕ್ರಮಣ ತಡರವಾಗಬೇಕು. ತೋಟಕ್ಕೆ ಬಿಟ್ಟ ಬೆಟ್ಟವನ್ನು ಅದರ ವಹಿವಾಟುದಾರರಿಗೇ ವಹಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಇನ್ನಷ್ಟು ಅತಿಕ್ರಮಣ ಹೆಚ್ಚುವ ಸಾಧ್ಯತೆಯಿದೆ’ ಎನ್ನುತ್ತಾರೆ ಅವರು.ಬೆಟ್ಟ ಭೂಮಿ ಸಂರಕ್ಷಣೆ ಜಾಗ ಅರಣ್ಯ ಇಲಾಖೆಯದ್ದಾಗಿದೆ. ತೆರವು ಜವಾಬ್ದಾರಿಯ ಬಗ್ಗೆ ಗೊಂದಲವಿದ್ದು ಶೀಘ್ರದಲ್ಲಿ ಬಗೆಹರಿಸಿಕೊಂಡು ಮುಂದಿನ ಕ್ರಮ ಅನುಸರಿಸಲಾಗುವುದು. ಶ್ರೀಧರ ಮುಂದಲಮನಿ ತಹಶೀಲ್ದಾರ್ ಶಿರಸಿ

ಬೆಟ್ಟ ಭೂಮಿ ಅತಿಕ್ರಮಣವಾದರೆ ಸಂಬಂಧಪಟ್ಟ ಇಲಾಖೆ ಆ ಅತಿಕ್ರಮಣ ತಡೆದು ತೆರವುಗೊಳಿಸಬೇಕು. ಜತೆ ಅತಿಕ್ರಮಣ ಮಾಡಿದವರಿಗೆ ತಕ್ಷಣ ಶಿಕ್ಷೆ ಕೊಡಿಸಬೇಕು.
-ವಿಶ್ವನಾಥ ಹೆಗಡೆ ಬೆಟ್ಟ ವಹಿವಾಟುದಾರ
ಬೆಟ್ಟ ಭೂಮಿ ಸಂರಕ್ಷಣೆ ಜಾಗ ಅರಣ್ಯ ಇಲಾಖೆಯದ್ದಾಗಿದೆ. ತೆರವು ಜವಾಬ್ದಾರಿಯ ಬಗ್ಗೆ ಗೊಂದಲವಿದ್ದು ಶೀಘ್ರದಲ್ಲಿ ಬಗೆಹರಿಸಿಕೊಂಡು ಮುಂದಿನ ಕ್ರಮ ಅನುಸರಿಸಲಾಗುವುದು.
-ಶ್ರೀಧರ ಮುಂದಲಮನಿ ತಹಶೀಲ್ದಾರ್ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT