ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಗಣೇಶಪಾಲ್‌ ಸೇತುವೆ ಕಾಮಗಾರಿಗೆ ವಿಘ್ನ

ಶಿರಸಿ, ಯಲ್ಲಾಪುರ ತಾಲ್ಲೂಕುಗಳ ಸಂಪರ್ಕ ಕೊಂಡಿ
Published 14 ಮೇ 2024, 4:39 IST
Last Updated 14 ಮೇ 2024, 4:39 IST
ಅಕ್ಷರ ಗಾತ್ರ

ಶಿರಸಿ: ಶಿರಸಿ ಹಾಗೂ ಯಲ್ಲಾಪುರ ತಾಲ್ಲೂಕುಗಳ ಸಂಪರ್ಕ ಕೊಂಡಿಯಾಗಬೇಕಿದ್ದ ಗಣೇಶಪಾಲ್‌ ಸೇತುವೆ ಕಾಮಗಾರಿಗೆ ವಿಘ್ನ ಎದುರಾಗಿದ್ದು, ಮಳೆಗಾಲ ಸಮೀಪಿಸುತ್ತಿದ್ದರೂ ಸ್ಥಗಿತಗೊಂಡ ಕಾಮಗಾರಿ ಪುನರಾರಂಭವಾಗಿಲ್ಲ. ಹೀಗಾಗಿ ಪ್ರಸಕ್ತ ವರ್ಷವೂ ಸೇತುವೆ ಮೇಲಿನ ಸಂಚಾರ ಈ ಭಾಗದವರಿಗೆ ಕನಸಾಗಿಯೇ ಉಳಿಯುವಂತಾಗಿದೆ. 

ಅನುದಾನದ ಕೊರತೆ, ನೀಲನಕ್ಷೆ ತಯಾರಿಸಿ ಗುತ್ತಿಗೆ ಕಂಪೆನಿಗೆ ಹಸ್ತಾಂತರ ವಿಳಂಬ, ಜಾಗ ಗುರುತಿಸುವಿಕೆಯಲ್ಲಿ ಗೊಂದಲ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾಮಗಾರಿ ಆರಂಭಿಸಲು 6 ತಿಂಗಳು ವಿಳಂಬವಾಗಿತ್ತು. ಇವೆಲ್ಲ ಗೊಂದಲಗಳು ನಿವಾರಣೆಯಾಗಿ ಗುತ್ತಿಗೆ ಕಂಪೆನಿಯು 2023ರ ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿಯನ್ನು ಆರಂಭಿಸಿತ್ತು. ಅಡಿಪಾಯ ತೆಗೆದು, ಕಬ್ಬಿಣದ ಸರಳುಗಳನ್ನು ಅಳವಡಿಸಿದ್ದು, ಮುಂದಿನ ಹಂತದ ಕಾಮಗಾರಿ ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿದೆ.

ಯಲ್ಲಾಪುರ ಹಿತ್ಲಳ್ಳಿ ಗ್ರಾಮ ಪಂಚಾಯಿತಿ ಮತ್ತು ಶಿರಸಿಯ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಸೇತುವೆ ಕಾಮಗಾರಿಯು ಎರಡೂ ತಾಲ್ಲೂಕಿನ ಸಾರ್ವಜನಿಕರ ಹಲವು ದಶಕದ ಬೇಡಿಕೆಯಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಮತ್ತು ವಿಧಾನಸಭೆ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಕೆಆರ್‌ಡಿಸಿಎಲ್ ಮೂಲಕ ₹11 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. 2022ರ ಡಿಸೆಂಬರ್ ತಿಂಗಳಿನಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿಗೆ ವಿಘ್ನ ಎದುರಾಗಿತ್ತು. 11 ತಿಂಗಳ ನಂತರ ಸೇತುವೆ ನಿರ್ಮಾಣ ಪ್ರಾರಂಭವಾಗಿರುವುದಕ್ಕೆ ಆ ಭಾಗದ ಜನರಲ್ಲಿ ಸಂತಸ ಮೂಡಿತ್ತು. ಬಹು ವರ್ಷದ ಕನಸ್ಸು ನನಸಾಗುತ್ತಿದೆ ಎಂದು ಆ ಭಾಗದ ಸಾರ್ವಜನಿಕರು ಬಹಳ ಸಂತೋಷ ವ್ಯಕ್ತಪಡಿಸಿದ್ದರು. ಈಗ ಅವರ ನಿರೀಕ್ಷೆ ಹುಸಿಯಾಗುವಂತಾಗಿದೆ.

ಕಳೆದೆರಡು ತಿಂಗಳಿನಿಂದ ಗಣೇಶಪಾಲ್ ಸೇತುವೆ ಕೆಲಸ ಸ್ಥಗಿತಗೊಂಡಿದೆ. ಈ ಕುರಿತು ವಿಚಾರಿಸಿದರೆ ಕಾರ್ಮಿಕರ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ.
ಪ್ರವೀಣ ಹೆಗಡೆ ಕೊಡ್ನಗದ್ದೆ, ಗ್ರಾಮ ಪಂಚಾಯಿತಿ ಸದಸ್ಯ

‘ಕಾಮಗಾರಿ ಸ್ಥಗಿತಗೊಳ್ಳಲು ಕಾರ್ಮಿಕರ ಕೊರತೆ ಎನ್ನುವ ಗುತ್ತಿಗೆದಾರರು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರನ್ನೂ ವಾಪಸ್ ಕರೆಸಿ ಕಾಮಗಾರಿ ನಿಲ್ಲಿಸಿದ್ದಾರೆ. 2022ರಲ್ಲಿ ಮಂಜೂರಾದ ಕಾಮಗಾರಿ 2 ವರ್ಷ ಮುಗಿಯುವುದರೊಳಗೆ ಪೂರ್ಣಗೊಳ್ಳಬೇಕೆಂಬ ನಿಯಮವಿದ್ದರೂ ಇನ್ನೂ ತಳ ಬಿಟ್ಟು ಮೇಲೆದ್ದಿಲ್ಲ. ಜೂನ್ ತಿಂಗಳಿನಿಂದ ಮಳೆಗಾಲ ಆರಂಭವಾದರೆ ಮೂರ‍್ನಾಲ್ಕು ತಿಂಗಳು ಕೆಲಸ ಬಂದ್ ಮಾಡಬೇಕಾಗುತ್ತದೆ. ಯಾವ ಕಾರಣದಿಂದ ಕೆಲಸ ಬಂದ್ ಆಗಿದೆ ಎಂಬುದನ್ನು ಸಂಬಂಧಿಸಿದ ಇಲಾಖೆ ಗಮನವಹಿಸಿ, ಕಾಮಗಾರಿ ಆರಂಭಿಸಲು ಸೂಚನೆ ನೀಡಬೇಕು‘ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. 

ಪ್ರಮುಖ ಕೊಂಡಿ

ಯಲ್ಲಾಪುರ ಮತ್ತು ಶಿರಸಿ ತಾಲ್ಲೂಕುಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುವ ಸೇತುವೆ ನಿರ್ಮಾಣವಾದರೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಸದ್ಯ ಸೋಂದಾ ಹಿತ್ಲಳ್ಳಿ ತುಡುಗುಣಿ ಮಾರ್ಗವಾಗಿ ಯಲ್ಲಾಪುರಕ್ಕೆ ತೆರಳುತ್ತಿದ್ದಾರೆ. ಸೇತುವೆ ನಿರ್ಮಾಣವಾದ ಬಳಿಕ ಹಿತ್ಲಳ್ಳಿ ಉಮ್ಮಚಗಿ ಮಂಚಿಕೇರಿ ಗ್ರಾಪಂ ವ್ಯಾಪ್ತಿಯ ನೂರಾರು ಹಳ್ಳಿಗಳ ಜನರು ಶಿರಸಿಗೆ ಆಗಮಿಸಲು ಮತ್ತು ಕೊಡ್ನಗದ್ದೆ ವಾನಳ್ಳಿ ಭಾಗದ ನೂರಾರು ಗ್ರಾಮಸ್ಥರಿಗೆ ಯಲ್ಲಾಪುರ ಸಂಪರ್ಕಿಸಲು ಬಹಳ ಸಮೀಪವಾಗಲಿದೆ. ಕೊಡ್ನಗದ್ದೆ ವ್ಯಾಪ್ತಿಯ ಸಾವಿರಾರು ಅಡಿಕೆ ಬೆಳೆಗಾರರು ರಾಶಿ ಅಡಿಕೆಗೆ ಯಲ್ಲಾಪುರದ ಮಾರುಕಟ್ಟೆಯನ್ನೇ ಅವಲಂಭಿಸಿದ್ದಾರೆ. ಗಣೇಶಪಾಲ್ ಸೇತುವೆ ನಿರ್ಮಾಣವಾದರೆ ಯಲ್ಲಾಪುರ ತಲುಪಲು 20 ಕಿ.ಮೀ ಉಳಿತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT