ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಸೌಲಭ್ಯಕ್ಕೆ ಕಾದಿದೆ ‘ರಾಣಿ ನಿವಾಸ’

ಕದಂಬರ ಆಳ್ವಿಕೆ ಕಾಲದ ಅವಶೇಷಗಳ ಸಂರಕ್ಷಣೆ ಕೊರತೆ: ನಿರ್ಲಕ್ಷ್ಯಕ್ಕೆ ಆಕ್ರೋಶ
Published 19 ಫೆಬ್ರುವರಿ 2024, 5:09 IST
Last Updated 19 ಫೆಬ್ರುವರಿ 2024, 5:09 IST
ಅಕ್ಷರ ಗಾತ್ರ

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಕದಂಬೋತ್ಸವ ಆಚರಣೆಗೆ ಪ್ರೇರಣೆಯಾಗಿದ್ದ ಗುಡ್ನಾಪುರದ ರಾಣಿ ನಿವಾಸ ಸೌಲಭ್ಯವಿಲ್ಲದೆ ಸೊರಗಿದೆ. ಇಲ್ಲಿನ ಅವಶೇಷಗಳು ಸೂಕ್ತ ರಕ್ಷಣೆಯಿಲ್ಲದೆ ಮಣ್ಣಲ್ಲಿ ಮಣ್ಣಾಗುತ್ತಿವೆ. 

ಬನವಾಸಿಗೆ ಸಮೀಪದ ಗುಡ್ನಾಪುರದಲ್ಲಿ ಕದಂಬರ ಆಳ್ವಿಕೆ ಕಾಲದ ರಾಣಿ ನಿವಾಸದ ಹಲವು ಅವಶೇಷಗಳಿವೆ. ಕದಂಬ ವಂಶದ ಮಹಾರಾಜರು ವಸಂತ ಕಾಲದಲ್ಲಿ ತಮ್ಮ ಕುಟುಂಬ ಸಹಿತ ಇಲ್ಲಿಗೆ ಆಗಮಿಸಿ ತಂಗುತ್ತಿದ್ದ ಈ ಸ್ಥಳವು ಐತಿಹಾಸಿಕ ಹಿನ್ನಲೆ ಹೊಂದಿde. ಪ್ರಸ್ತುತ ಇಲ್ಲಿರುವ ಅವಶೇಷಗಳು ರಾಣಿಮನೆಯ ವೈಭವಕ್ಕೆ ಸಾಕ್ಷಿಯಾಗಿವೆ. ಆದರೆ ನಿರ್ವಹಣೆ ಕೊರತೆ ಈ ವೈಭವ ಕಳೆಗುಂದಲು ಕಾರಣವಾಗಿದೆ. 

ಶಿಥಿಲ ಸ್ಥಿತಿಯಲ್ಲಿರುವ ರಾಣಿ ನಿವಾಸದ ಕಟ್ಟಡದ ಒಳಗೆ ಜೀರ್ಣ ಸ್ಥಿತಿಯಲ್ಲಿರುವ ವೀರಭದ್ರ, ಗಣಪತಿ ಮೂರ್ತಿ, ಜೈನ ತೀರ್ಥಂಕರರ ಮೂರ್ತಿ ಕಾಣಬಹುದಾಗಿದೆ. ಹೊರ ಆವರಣದಲ್ಲಿ ಕೇವಲ ತಂತಿ ಬೇಲಿ, ತಲೆಯ ಮೇಲೊಂದು ತಗಡಿನ ಶೀಟ್ ರಕ್ಷಣೆಯಲ್ಲಿ ರಾಜಾ ರವಿಮರ್ವನ ಕಾಲದ ಗುಡ್ನಾಪುರ ಶಾಸನದ ಕಂಬ ನಿಂತಿದೆ. ಸಂಸ್ಕೃತ ಭಾಷೆಯ 27 ಸಾಲುಗಳ ಬರಹ ಹೊಂದಿರುವ ಗುಡ್ನಾಪುರ ಶಾಸನ ಕದಂಬ ರಾಜವಂಶರ ಮಹತ್ವದ ದಾಖಲೆಯಾಗಿದೆ.

20 ಅಡಿ ಎತ್ತರ ಶಾಸನದಲ್ಲಿ ಕದಂಬರು 5ನೇ ಶತಮಾನದಲ್ಲಿ ವಸಂತೋತ್ಸವ ಆಚರಿಸುವ ಉಲ್ಲೇಖವಿದೆ. ರಾಜನಿಗೆ ಸಾಧ್ಯವಾಗದಿದ್ದರೆ ಪ್ರಜೆಗಳು ಪ್ರತಿ ವರ್ಷ ವಸಂತೋತ್ಸವ ಆಚರಿಸಬೇಕು ಎಂದು ಈ  ಶಾಸನದಲ್ಲಿ ಬರೆಯಲಾಗಿದೆ. ಶಾಸನದ ಉಲ್ಲೇಖ ಆಧರಿಸಿ ಅನೇಕ ಪ್ರಮುಖರು ನಡೆಸಿದ ನಿರಂತರ ಪರಿಶ್ರಮದ ಫಲವಾಗಿ 1996ರಿಂದ ಬನವಾಸಿಯಲ್ಲಿ ಕದಂಬೋತ್ಸವ ಎನ್ನುವ ಐತಿಹಾಸಿಕ ಹಬ್ಬ ಆಚರಣೆಗೆ ಚಾಲನೆ ದೊರೆತಿದೆ. ಆದರೆ ಕದಂಬೋತ್ಸವಕ್ಕೆ ಮೂಲ ಸರಕಾಗಿರುವ ಗುಡ್ನಾಪುರದ ರಾಣಿ ನಿವಾಸ ಕಡೆಗಣನೆಯಾಗಿದೆ. ಕದಂಬರ ಪ್ರತೀಕವಾಗಿರುವ ಈ ಕಟ್ಟಡಗಳ ರಕ್ಷಣೆಗೆ ಪುರಾತತ್ವ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬುದು ಸ್ಥಳೀಯರ ದೂರು.

‘1972ರಲ್ಲಿ ಹಿರಿಯ ಸಾಹಿತಿ ದಿವಂಗತ ಬಿ.ಎಚ್.ಶ್ರೀಧರ ಮತ್ತು ಅಭಿಶಂಕರರ ಪರಿಶ್ರಮದ ಭಾಗವಾಗಿ ಗುಡ್ನಾಪುರದಲ್ಲಿ ಈ ಅವಶೇಷಗಳು ಬೆಳಕಿಗೆ ಬಂದಿವೆ. ಅಂದಿನಿಂದ ಇಂದಿನವರೆಗೆ ಇದರ ಅಭಿವೃದ್ಧಿ ವ್ಯವಸ್ಥಿತವಾಗಿ ನಡೆದಿಲ್ಲ. ವಾರ್ಷಿಕವಾಗಿ ರಾಣಿ ನಿವಾಸಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಗೆ ತಂಗಲು ವ್ಯವಸ್ಥೆಯಿಲ್ಲ. ರಾಣಿ ನಿವಾಸದ ಸಮಗ್ರ ಮಾಹಿತಿ ಒಳಗೊಂಡ ನಾಮಫಲಕಗಳೂ ಇಲ್ಲ’ ಎನ್ನುತ್ತಾರೆ ಸ್ಥಳೀಯರಾದ ಸಂತೋಷ ನಾಯ್ಕ. 

‘ಇಲ್ಲಿ ಸೂಕ್ತ ಆವರಣ ಗೋಡೆಯ ವ್ಯವಸ್ಥೆ ಇಲ್ಲದ ಕಾರಣ ಜಾನುವಾರುಗಳು ಎಗ್ಗಿಲ್ಲದೆ ಈ ನಿವಾಸದ ಆವರಣದಲ್ಲಿ ಓಡಾಡುತ್ತವೆ. ಅವಶೇಷಗಳನ್ನು ಮೆಟ್ಟಿ ಪುಡಿ ಮಾಡುತ್ತಿವೆ. ತಕ್ಷಣ ಈ ಅವ್ಯವಸ್ಥೆ ನಿಲ್ಲಬೇಕು. ಮೇಲುಸ್ತುವಾರಿ ಜವಾಬ್ದಾರಿ ಹೊತ್ತ ಪ್ರಾಚ್ಯವಸ್ತು ಇಲಾಖೆ ರಾಣಿ ನಿವಾಸ ಒಳಗೊಂಡು ಇಲ್ಲಿರುವ ಪಳೆಯುಳಿಕೆಗಳ ರಕ್ಷಣೆಗೆ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

ರಕ್ಷಣೆಯಿಲ್ಲದಿರುವ ಜೈನ ತೀರ್ಥಂಕರರ ಮೂರ್ತಿ
ರಕ್ಷಣೆಯಿಲ್ಲದಿರುವ ಜೈನ ತೀರ್ಥಂಕರರ ಮೂರ್ತಿ
ಪುರಾತತ್ವ ಇಲಾಖೆಯು ಗುಡ್ನಾಪುರದಲ್ಲಿ ಇನ್ನಷ್ಟು ಉತ್ಖನನ ನಡೆಸಬೇಕು. ರಾಣಿ ನಿವಾಸ ಕಟ್ಟಡದ ಅವಶೇಷ ರಕ್ಷಣೆ ಮಾಡಬೇಕು. ಕಟ್ಟಡದ ಅವಶೇಷಗಳು ಹಾಳಾಗಿ ಹೋಗದಂತೆ ಎಚ್ಚರಿಕೆ ವಹಿಸಬೇಕು
ನಿರ್ಮಲಾ ನಾಯ್ಕ ಗ್ರಾ.ಪಂ. ಅಧ್ಯಕ್ಷೆ ಗುಡ್ನಾಪುರ
ರಾಣಿ ನಿವಾಸದ ಅವಶೇಷಗಳಿಗೆ ಹಾನಿಯಾಗದಂತೆ ಆವರಣ ಗೋಡೆಗಳ ದುರಸ್ತಿ ಸ್ವಚ್ಛತೆ ಮಾಡಬೇಕು. ಪ್ರವೇಶ ದ್ವಾರದಲ್ಲಿ ಮಾಹಿತಿ ಫಲಕ ಅಳವಡಿಸಿ ಶಿಲಾ ಶಾಸನವನ್ನು ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡುವಂತೆ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಗಂಗೂಬಾಯಿ ಮಾನಕರ್ ಜಿಲ್ಲಾಧಿಕಾರಿ ಉತ್ತರ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT