ಶಿರಸಿ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಜೋರಾಗಿ ಮಳೆ ಸುರಿಯುತ್ತಿದ್ದು, ಬುಧವಾರವೂ ಮುಂದುವರಿದಿದೆ.
ಗ್ರಾಮೀಣ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿಕೊಳ್ಳುತ್ತಿವೆ. ಶಾಲ್ಮಲಾ, ಅಘನಾಶಿನಿ, ವರದಾ ನದಿಗಳಲ್ಲಿ ನೀರಿನ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ತಾಲ್ಲೂಕಿನಾದ್ಯಂತ ಕೃಷಿ, ತೋಟಗಾರಿಕಾ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಆಗಾಗ ಬೀಸುವ ರಭಸದ ಗಾಳಿ, ಮಳೆಯಿಂದಾಗಿ ವಿದ್ಯುತ್ ಅವ್ಯವಸ್ಥೆ ಮುಂದುವರಿದಿದೆ.
ಹುಲೇಕಲ್ ಗ್ರಾಮ ಪಂಚಾಯಿತಿಯ ಹಂಚರಟಾ ಗ್ರಾಮದ ಹೀನಾ ಕೌಸರ್ ಸಾಬ್ ಮನೆಯ ಮಣ್ಣಿನ ಗೋಡೆ ಕುಸಿತವಾಗಿ ₹10 ಸಾವಿರ ಹಾನಿಯಾಗಿದೆ.
ನಗರದ ಗಾಂಧಿನಗರದ ಕಸ್ತಾಲಿನ್ ಜೂಜೆ ಡಿಸೋಜಾ ಅವರಿಗೆ ಸೇರಿದ ಶೌಚಾಲಯದ ಗೋಡೆ ಬಿದ್ದು ₹ 25 ಸಾವಿರ ಹಾನಿಯಾಗಿದೆ. ಶಿರಸಿ ಹುಲೇಕಲ್ ಮಾರ್ಗ ಮಧ್ಯ ಕಲಗಾರಒಡ್ಡು ಬಳಿ ರಸ್ತೆಗೆ ಬೃಹತ್ ಮರ ಬಿದ್ದು ಕೆಲ ಕಾಲ ಸಂಚಾರ ಸ್ಥಗಿತವಾಗಿತ್ತು.
ಅರಣ್ಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳೀಯ ಸಹಕಾರದಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಾಲ್ಲೂಕು ಕೇಂದ್ರದಿಂದ ದೂರದ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಕೈಕೊಟ್ಟಿದೆ.
ನಗರ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವಭಾವಿಯಾಗಿ ಹಲವೆಡೆ ಗಟಾರ ಸ್ವಚ್ಛತೆ ಮಾಡದೇ ಇರುವುದರಿಂದ ಮಳೆಯ ನೀರು ರಸ್ತೆಯ ಮೇಲೆ ಹರಿದು ಸಮಸ್ಯೆ ಉಂಟಾಗುತ್ತಿದೆ. 15 ನಿಮಿಷ ಜೋರಾಗಿ ಮಳೆ ಸುರಿದರೂ ಗಟಾರ ತುಂಬಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸವಾರರಿಗೆ, ಪಾದಾಚಾರಿಗಳಿಗೆ ಓಡಾಟಕ್ಕೆ ತೊಂದರೆ ಉಂಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.