ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಹಲಗೆ ಜೋಡಣೆಗೆ ನಿರಾಸಕ್ತಿ: ಬರಿದಾಗಿ ನಿಂತ ಕಿಂಡಿ ಅಣೆಕಟ್ಟುಗಳು

ನಿರ್ವಹಣೆಗೆ ಅಲಕ್ಷ್ಯ
Published 9 ಜನವರಿ 2024, 5:06 IST
Last Updated 9 ಜನವರಿ 2024, 5:06 IST
ಅಕ್ಷರ ಗಾತ್ರ

ಶಿರಸಿ: ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ವೃದ್ಧಿಯ ಮೂಲ ಉದ್ದೇಶದಿಂದ ತಾಲ್ಲೂಕಿನ ವಿವಿಧ ಕಡೆ ನಿರ್ಮಿಸಿರುವ ಬಾಂದಾರ, ಕಿಂಡಿ ಅಣೆಕಟ್ಟುಗಳಲ್ಲಿ ಹಲಗೆ ಜೋಡಿಸದ ಕಾರಣಕ್ಕೆ ಬೇಸಿಗೆ ಆರಂಭಕ್ಕೂ ಮುನ್ನ ಹಳ್ಳಗಳು ನೀರಿಲ್ಲದೆ ಬರಡಾಗಿವೆ.

‘ಹರಿಯುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ’ ಎಂಬ ಧ್ಯೇಯದೊಂದಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯ್ತಿಗಳಿಂದ ಲಕ್ಷಾಂತರ ಅನುದಾನ ವ್ಯಯಿಸಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ತಾಲ್ಲೂಕಿನ ಕಲಗಾರ, ದೇವರಹೊಳೆ, ಬನವಾಸಿ ಹೋಬಳಿಯ ತಿಗಣಿ, ಭಾಶಿ ಸೇರಿದಂತೆ ಹಲವೆಡೆ ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಂಡಿವೆ.

ಅಂದಾಜು 6ರಿಂದ 8 ಸಾವಿರ ಎಕರೆಗೆ ನೀರಾವರಿ ಹಾಗೂ ಸಾವಿರಾರು ಮಂದಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಇವುಗಳ ನಿರ್ಮಾಣವಾಗಿದೆ. ಆದರೆ ಕಾಲಕಾಲಕ್ಕೆ ಹಲಗೆ ಜೋಡಣೆ ಮಾಡದ ಕಾರಣಕ್ಕೆ ಕಿಂಡಿ ಅಣೆಕಟ್ಟುಗಳು ಸಂಪೂರ್ಣ ಬರಿದಾಗುತ್ತಿವೆ. 

‘ಕಿಂಡಿ ಅಣೆಕಟ್ಟು ನಿರ್ಮಿಸಿದ ಆಯಾ ಇಲಾಖೆಗಳೇ ಅವುಗಳ ನಿರ್ವಹಣೆಗೆ ಗಮನ ಹರಿಸಬೇಕು. ಕೆಲವೆಡೆ ಗ್ರಾಮ ಪಂಚಾಯ್ತಿ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರೆ, ಇನ್ನೂ ಕೆಲವೆಡೆ ಸಣ್ಣ ನೀರಾವರಿ ಇಲಾಖೆ ಜವಾಬ್ದಾರಿ ನಿರ್ವಹಿಸುತ್ತದೆ. ಆದರೆ ಎಲ್ಲಿಯೂ ನಿಗದಿತ ಸಮಯದಲ್ಲಿ ಹಲಗೆ ಜೋಡಣೆ ಕಾರ್ಯ ನಡೆಯುತ್ತಿಲ್ಲ’ ಎಂಬುದು ದೇವರಹೊಳೆ ಭಾಗದ ಗಣೇಶ ನಾಯ್ಕ ಅವರ ದೂರು.

‘ಡಿಸೆಂಬರ್ ಆರಂಭದಲ್ಲಿ ಬೇಸಿಗೆ ವಾತಾವರಣವಿದ್ದರೂ, ಆಗಲೂ ನೀರು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಅನುದಾನ ನೀಡುವ ಇಲಾಖೆಗಳಿಗೆ ಇದರ ನಿರ್ವಹಣೆಯ ಹೊಣೆ ಇಲ್ಲ. ಈ ಕಾರಣದಿಂದ ಇಲ್ಲಿ ನೀರು ನಿಲ್ಲುವುದೂ ಇಲ್ಲ, ಇಂಗುವುದೂ ಇಲ್ಲ. ಪ್ರಸ್ತುತ ಹೊಳೆಗಳಲ್ಲಿ ಹರಿವು ನಿಂತಿದೆ. ಈಗ ಗೇಟ್ ಹಾಕಿದರೆ ಪ್ರಯೋಜವಿಲ್ಲ' ಎಂಬುದು ಭಾಶಿ ಗ್ರಾಮಸ್ಥರೊಬ್ಬರ ಅಭಿಪ್ರಾಯ. 

‘ಒಂದೆರಡು ವರ್ಷ ಕಿಂಡಿ ಅಣೆಕಟ್ಟು ನಿರ್ಮಾಣದ ಉದ್ದೇಶ ಈಡೇರಿದೆಯೇ ಹೊರತು ಆ ಮೇಲೆ ಅದರ ಉಪಯೋಗ ಶೂನ್ಯವಾಗಿದೆ. ಇದಕ್ಕೆ ಮೂಲ ಕಾರಣ ನಿರ್ವಹಣೆ ಮಾಡದಿರುವುದು. ನೀರಿನ ಹರಿವು ಇರುವ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಇದಕ್ಕೆ ಹಲಗೆ ಜೋಡಿಸಬೇಕು. ಹಲಗೆಗಳ ಮಧ್ಯೆ ಮಣ್ಣು ಹಾಕಬೇಕು. ಮಳೆಗಾಲ ಆರಂಭಕ್ಕೆ ಮುನ್ನ ಹಲಗೆಗಳನ್ನು ತೆಗೆಯಬೇಕು. ಆದರೆ ಇವುಗಳನ್ನು ಮಾಡದ ಕಾರಣ ಕಿಂಡಿ ಅಣೆಕಟ್ಟುಗಳು ಕಾಡಿನ ಮರಮಟ್ಟುಗಳು, ತ್ಯಾಜ್ಯ, ಕಸಕಡ್ಡಿಗಳು ಸಿಲುಕುವ ಕೇಂದ್ರವಾಗಿ ಮಾರ್ಪಡುತ್ತಿವೆ’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಾರೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಬಾಂದಾರ ಕಿಂಡಿ ಅಣೆಕಟ್ಟುಗಳಿವೆ. ಅವುಗಳಲ್ಲಿ ಕೆಲವಷ್ಟಕ್ಕೆ ಹಲಗೆ ಜೋಡಿಸಲಾಗಿದೆ. ಇನ್ನುಳಿದವು ಇನ್ನಷ್ಟೇ ಹಾಕಬೇಕಿದೆ
ಬಸವರಾಜ್ ಬಿ.ಎಚ್ ಸಣ್ಣ ನೀರಾವರಿ ಇಲಾಖೆ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT