ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕೇಂದ್ರಗಳಿಗೆ ಸೌಲಭ್ಯ ಕೊರತೆ

ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ 14 ಕೇಂದ್ರಗಳು
Published 4 ಮೇ 2024, 8:08 IST
Last Updated 4 ಮೇ 2024, 8:08 IST
ಅಕ್ಷರ ಗಾತ್ರ

ಶಿರಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರತಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾದ ಆರೋಗ್ಯ ಕ್ಷೇಮ ಕೇಂದ್ರಗಳು ಬಹುತೇಕ ಬಾಡಿಗೆ ಕಟ್ಟಡದಲ್ಲಿದ್ದು, ಸೌಲಭ್ಯಗಳ ಕೊರತೆ ಕಾರಣಕ್ಕೆ ಸಮಪರ್ಕವಾಗಿ ಸೇವೆ ಸಿಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ. 

ತಾಲ್ಲೂಕಿನಲ್ಲಿ ಒಟ್ಟೂ 27 ಆರೋಗ್ಯ ಕ್ಷೇಮ ಕೇಂದ್ರಗಳಿವೆ. ಇವುಗಳಲ್ಲಿ 13 ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಉಳಿದ ಹುಲೇಕಲ್, ಸೋಂದಾ, ಭೈರುಂಬೆ, ಕುಳವೆ, ಭಾಶಿ, ಬಾಳೆಗದ್ದೆ, ದೊಡ್ನಳ್ಳಿ, ಸಂಪಖಂಡ, ಮೆಣಸಿ, ಕಾನಮುಸ್ಕಿ, ನಗರ–1, ನಗರ–2, ನಗರ–3 ಹಾಗೂ ನಗರ–4 ಒಟ್ಟು 14 ಕೇಂದ್ರಗಳು ಬಾಡಿಗೆ ಕಟ್ಟಡ ಅವಲಂಬಿಸಿವೆ. ಇವುಗಳಲ್ಲಿ ಗ್ರಾಮಸ್ಥರು ಹಾಗೂ ಸ್ಥಳೀಯ ಪಂಚಾಯಿತಿಯಿಂದ 4 ಕಡೆ ವ್ಯವಸ್ಥೆ ಕಲ್ಪಿಸಿದ್ದು, ಅದಕ್ಕೆ ಬಾಡಿಗೆ ನೀಡಲಾಗುತ್ತಿಲ್ಲ. ಉಳಿದಂತೆ 10 ಕೇಂದ್ರಗಳಿಗೆ ಮಾಸಿಕ ಸರಾಸರಿ ₹40 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ ₹3 ಸಾವಿರದಿಂದ ₹5 ಸಾವಿರದ ತನಕ ಬಾಡಿಗೆ ಪಾವತಿಸಲಾಗುತ್ತಿದೆ.

‘15 ಅಂಶಗಳನ್ನು ಈ ಕ್ಷೇಮ ಕೇಂದ್ರದಲ್ಲಿ ನಿರ್ವಹಿಸಬೇಕು. ಅದರ ಜತೆಗೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು. ಇವುಗಳಲ್ಲಿ ಕೆಲವು ತಮ್ಮ ಊರಿನಲ್ಲಿ ಕೇಂದ್ರ ಇರುವ ಬಗ್ಗೆಯೇ ಜನರಿಗೆ ಮಾಹಿತಿ ಇಲ್ಲದಂತೆ ಕಾರ್ಯನಿರ್ವಹಿಸುತ್ತಿವೆ. ಗ್ರಾಮದ ಮೂಲೆಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿದ್ದು, ಅಲ್ಲಿಗೆ ತೆರಳಲು ಸರಿಯಾದ ರಸ್ತೆಯೂ ಇಲ್ಲ. ಬಾಡಿಗೆ ಕಟ್ಟಡದಲ್ಲಿ ಇರುವ ಕೇಂದ್ರಗಳಲ್ಲಿ ತುರ್ತು ಸಂದರ್ಭಕ್ಕೆ ಬಳಸಿಕೊಳ್ಳಲು ಶೌಚಾಲಯ ಇಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ’ ಎಂಬ ಆರೋಪ ಗ್ರಾಮೀಣ ಜನರಿಂದ ಕೇಳಿ ಬರುತ್ತಿದೆ.

‘ಪ್ರತಿ ಶನಿವಾರ ಬೆಳಿಗ್ಗೆ ರೋಗಿಗಳಿಗೆ ಯೋಗಾಭ್ಯಾಸ ಮಾಡಿಸಬೇಕು ಎಂದು ಸರ್ಕಾರದ ಸೂಚನೆಯಿದೆ. ಗ್ರಾಮೀಣದ ಬಹುತೇಕ ಕಡೆ ಯೋಗಾಭ್ಯಾಸ ಮಾಡಲು ಸ್ಥಳಾವಕಾಶವಿಲ್ಲ. ಹೀಗಾಗಿ ಯೋಗ ಹೇಳಿಕೊಡುವ ಯೋಗಗುರುಗಳು ನೇಮಕವಾಗಿಲ್ಲ. ಇಲ್ಲಿ ಸರ್ಕಾರದ ಸೂಚನೆ ಪಾಲನೆಯಾಗುತ್ತಿಲ್ಲ. ಕೇಂದ್ರದಲ್ಲಿ ಸರಿಯಾದ ಸೌಲಭ್ಯ ಇಲ್ಲ. ಯೋಗಭ್ಯಾಸ ಮಾಡಿಸುವುದು ದೂರದ ಮಾತು ಆಗಿದೆ. ಸಿಬ್ಬಂದಿ ಸರಿಯಾಗಿ ಕರ್ತವ್ಯಕ್ಕೆ ಬರುವುದಿಲ್ಲ’ ಎನ್ನುವ ಆರೋಪ ಸ್ಥಳೀಯರದ್ದು.

‘ಯೋಜನೆ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕಾದರೆ ಕೇಂದ್ರಗಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ಅನವಶ್ಯಕವಾಗಿ ಸಾರ್ವಜನಿಕ ಹಣ ಪೋಲಾಗುತ್ತದೆ. ಇದರ ಬಗ್ಗೆ ಆರೋಗ್ಯ ಅಧಿಕಾರಿಗಳು ಗಮನಹರಿಸಬೇಕು’ ಎನ್ನುತ್ತಾರೆ ನಗರ ನಿವಾಸಿ ಮಹೇಶ ನಾಯ್ಕ. 

ಈಗಾಗಲೇ ಕಾನಮುಸ್ಕಿ ಗ್ರಾಮದ ಒಂದು ಕೇಂದ್ರಕ್ಕೆ ಸ್ವಂತ ಕಟ್ಟಡ ಕಲ್ಪಿಸಲು ಪತ್ರ ಬರೆಯಲಾಗಿದೆ. ಉಳಿದ ಕೇಂದ್ರ ಸ್ಥಾಪಿಸಲು ಜಾಗದ ಕೊರತೆಯಿದೆ.

–ಡಾ.ವಿನಾಯಕ ಭಟ್ ತಾಲ್ಲೂಕು ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT