ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ನೌಕರನ ಮಾದರಿ ಕುರಿ ಸಾಕಣೆ

ಮಧುಕೇಶ್ವರ ನಾಯ್ಕರ ವ್ಯವಸ್ಥಿತ ಸಮಗ್ರ ಕೃಷಿಗೆ ಪೂರಕವಾದ ಕುರಿ ಸಾಕಣೆ
Published : 13 ಸೆಪ್ಟೆಂಬರ್ 2024, 5:19 IST
Last Updated : 13 ಸೆಪ್ಟೆಂಬರ್ 2024, 5:19 IST
ಫಾಲೋ ಮಾಡಿ
Comments

ಶಿರಸಿ: ಕೇಂದ್ರ ಸರ್ಕಾರದ ಅಂಚೆ ಇಲಾಖೆಯ (ಆರ್.ಎಂ.ಎಸ್) ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಬಾಲ್ಯದ ಆಸಕ್ತಿಯ ಕ್ಷೇತ್ರವಾದ ಕುರಿ ಸಾಕಣೆ ಜತೆಜತೆಗೆ ತಮ್ಮ ಜಮೀನಿನಲ್ಲಿ ವೈವಿಧ್ಯಮಯ ಬೆಳೆಗಳಿಗೆ ಜಾಗ ಕಲ್ಪಿಸಿ ಆರ್ಥಿಕ ನೆಲೆ ಕಂಡುಕೊಂಡಿದ್ದಾರೆ. 

ತಾಲ್ಲೂಕಿನ ಅಚ್ಚನಳ್ಳಿ ಗ್ರಾಮದ ರೈತ ಮಧುಕೇಶ್ವರ ನಾಯ್ಕ ಸಮಗ್ರ ಕೃಷಿ ವ್ಯವಸ್ಥೆ ಅಳವಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ವಾಣಿಜ್ಯ ವಿಷಯದಲ್ಲಿ ಪದವಿ ಪಡೆದು ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಆಗಾಗ ಬಿಡುವು ಮಾಡಿಕೊಂಡು ಹಳ್ಳಿಗೆ ಬಂದು ಭೂಮಿತಾಯಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಗ್ರ ಕೃಷಿ ಅಳವಡಿಸಿಕೊಂಡು ಯಶಸ್ವಿ ಪಥದಲ್ಲಿ ಸಾಗಿ, ವರ್ಷಕ್ಕೆ ₹10ರಿಂದ ₹12 ಲಕ್ಷಗಳನ್ನು ಸಂಪಾದಿಸುತ್ತಿದ್ದಾರೆ. ಮೂಲತಃ ಇವರದ್ದು ಕೃಷಿ ಕುಟುಂಬವಾದ ಕಾರಣ ಪ್ರಾಣಿಗಳ ‌ಮೇಲೆ ಪ್ರೀತಿ. ಇದರಿಂದ ಕುರಿ‌, ಕೋಳಿ, ಮೀನು, ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಸ್ವಂತ ಕೃಷಿ ಭೂಮಿಯಲ್ಲಿ ಪಶುಸಂಗೋಪನಾ ಇಲಾಖೆಯ ಎನ್.ಎಲ್.ಎಂ. ಯೋಜನೆಯಲ್ಲಿ ₹1 ಕೋಟಿಯ ಪ್ರಾಜೆಕ್ಟ್ ಅಡಿ ಕುರಿ ಶೆಡ್ ನಿರ್ಮಿಸಿದ್ದು, ಶೇ 50ರ ಸಹಾಯಧನವನ್ನೂ ಪಡೆದಿದ್ದಾರೆ. 

'ಕುರಿ ಫಾರ್ಮ್‍ನಲ್ಲಿ ಮೊದಲ ಹಂತದಲ್ಲಿ ರಾಣೆಬೆನ್ನೂರು, ಬೆಳಗಾವಿ ಭಾಗದಿಂದ 535 ಕುರಿ ಮರಿಗಳನ್ನು ಖರೀದಿಸಿ  ಸಾಕಾಣಿಕೆ ಮಾಡಿದ್ದೆ. ಕೇವಲ ಆರು ತಿಂಗಳ ಅವಧಿಯಲ್ಲಿ 150ರಷ್ಟು ಕುರಿ ಮಾರುವ ಮೂಲಕ ಭರ್ಜರಿ ಲಾಭ ಬಂದಿದೆ. ವಿವಿಧ ತಳಿಯ ಕುರಿಗಳಿದ್ದು, ಕಾರ್ಮಿಕರು, ಕುಟುಂಬಸ್ಥರ ಜತೆ ಮೇವು, ನೀರು ಹಾಕುವುದು, ಮರಿಗಳಿಗೆ ಹಾಲು ಕುಡಿಸುವ ಕಾರ್ಯ ಮಾಡುತ್ತೇನೆ' ಎನ್ನುತ್ತಾರೆ ಅವರು.

 'ಆರಿದ್ರಾ ಮಳೆ ಹಬ್ಬ, ಶಿರಸಿ ಮಾರಿಕಾಂಬಾ ಜಾತ್ರೆ, ಬಕ್ರೀದ್​ ಹಬ್ಬ ಸೇರಿ ವಿಶೇಷ ಹಬ್ಬ ಹರಿದಿನಗಳ ಸನಿಹದಲ್ಲಿ‌ ಕುರಿಗಳಿಗೆ ಬಾರಿ ಬೇಡಿಕೆ ಬರುತ್ತದೆ. ಹಬ್ಬದ ವೇಳೆಗೆ ದಷ್ಟಪುಷ್ಟವಾಗಿ ಮೈ ಹಿಡಿಯುವಂತೆ ಇವುಗಳನ್ನು ತಯಾರು ಮಾಡಲಾಗುತ್ತದೆ. ಒಂದು ಕುರಿಗೆ ₹10 ಸಾವಿರದಿಂದ ₹15 ಸಾವಿರ ಬೆಲೆ ಇದೆ' ಎಂದು ಅವರು ಹೇಳಿದರು.

ಕುರಿ ಸಾಕಣೆ ಜತೆ ತಮ್ಮ ಐದು ಎಕರೆ ಜಮೀನಿನಲ್ಲಿ ಅಡಿಕೆ, ಬಾಳೆ, ತೆಂಗು ಬೆಳೆದಿದ್ದಾರೆ. ಒಂದು ಎಕರೆ ಜಾಗದಲ್ಲಿ ತಾಳೆ ನಾಟಿ ಮಾಡಿದ್ದು, ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಇವುಗಳ ಜತೆಗೆ ಕೋಳಿ ಸಾಕಣೆ, ಮೀನು, ಜೇನು ಸಾಕಣೆಯನ್ನೂ ಮಾಡಿರುವ ಇವರು ಇವುಗಳಿಂದಲೂ ಆದಾಯ ಪಡೆಯುತ್ತಿದ್ದಾರೆ. ಕುರಿ ಮೇವಿಗೆ ಅಜೋಲಾ ಬೆಳೆಸಿದ್ದಾರೆ. ಎರೆಹುಳು ಗೊಬ್ಬರವನ್ನು ಸಿದ್ಧಪಡಿಸಿ ಬೆಳೆಗೆ ಬಳಸಿ ಉತ್ತಮ ಫಸಲು ಪಡೆಯುತ್ತಿದ್ದಾರೆ. 

ಕುರಿಗಳಿಂದ ಸಿಗುವ ಗೊಬ್ಬರವನ್ನು ತಮ್ಮ ಜಮೀನಿಗೆ ಬಳಸಿಕೊಳ್ಳುವ ಜತೆ ಹೆಚ್ಚುವರಿ ಗೊಬ್ಬರವನ್ನು ಮಾರುತ್ತಿದ್ದಾರೆ. ತಿಂಗಳಿಗೆ 2 ಟ್ರ್ಯಾಕ್ಟರ್ ಗೊಬ್ಬರ ಮಾರುವ ಇವರು ₹20 ಸಾವಿರದಿಂದ ₹30 ಸಾವಿರ ಆದಾಯ ಗಳಿಸುತ್ತಿದ್ದಾರೆ. ಬಹು ಬೇಡಿಕೆಯ ಕುರಿ ಗೊಬ್ಬರವನ್ನು ರೈತರು ಸ್ವತಃ ಇವರ ಶೆಡ್‍ಗೆ ಬಂದು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. 

ಮಧುಕೇಶ್ವರ ನಾಯ್ಕ
ಮಧುಕೇಶ್ವರ ನಾಯ್ಕ
ಕೃಷಿ ಒಂದು ವೇಳೆ ಕೈ ಕೊಡಬಹುದು ಆದರೆ ಉಪಕಸುಬುಗಳು ಶಿಸ್ತಿನಿಂದ ಮಾಡಿದರೆ ಕೈ ಕೊಡುವುದಿಲ್ಲ
-ಮಧುಕೇಶ್ವರ ನಾಯ್ಕ ಕುರಿ ಸಾಕಣೆದಾರ
ಸರ್ಕಾರದ ಯೋಜನೆಯ ಸೌಲಭ್ಯ ಪಡೆದು ಕುರಿ ಸಾಕಣೆಯ ಜತೆಗೆ ಸಮಗ್ರ ಕೃಷಿ ವ್ಯವಸ್ಥೆ ಲಾಭದಾಯಕವಾಗಿ ಮಾಡಿಕೊಂಡಿರುವುದು ಶ್ಲಾಘನೀಯ
- ಡಾ.ಗಜಾನನ ಹೊಸಮನಿ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT