ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವಸಾನದತ್ತ ಸ್ಮಾರಕಗಳು: ಸೋಂದಾ ಕೋಟೆಗೆ ಬೇಕಿದೆ ರಕ್ಷಣೆ

ಪುರಾತತ್ವ ಇಲಾಖೆ ಕ್ರಮ ವಹಿಸಲು ಆಗ್ರಹ
Published 11 ಆಗಸ್ಟ್ 2024, 5:01 IST
Last Updated 11 ಆಗಸ್ಟ್ 2024, 5:01 IST
ಅಕ್ಷರ ಗಾತ್ರ

ಶಿರಸಿ: ಐತಿಹಾಸಿಕ ಕ್ಷೇತ್ರ ಸೋಂದಾದಲ್ಲಿರುವ ಕೋಟೆಯ ಬಹುತೇಕ ಸ್ಮಾರಕಗಳು ಅವಸಾನದ ಹಂತಕ್ಕೆ ತಲುಪಿವೆ.

ಸಹ್ಯಾದ್ರಿ ಪಾರಂಪರಿಕ ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ತಾಲ್ಲೂಕಿನ ಸೋಂದಾ ಕೋಟೆ ಹಲವು ಐತಿಹಾಸಿಕ ಘಟನೆಗಲಿಗೆ ಸಾಕ್ಷಿಯಾಗಿತ್ತು. ವಿಜಯನಗರದ ಸಾಮಂತ ಸೋದೆ ಅರಸರು ಯಾವ ಚಕ್ರವರ್ತಿಗಳಿಗೂ ಕಮ್ಮಿ ಇಲ್ಲದಂತೆ ರಾಜ್ಯಭಾರ ನಡೆಸಿದ್ದರು. ಸೋದೆ ಸದಾಶಿವರಾಯ, ಸುಂಕೇರಿಯಿಂದ ಕಾರವಾರ ಮುತ್ತಿಗೆ ಹಾಕಲು ಬಂದ ಬ್ರಿಟಿಷರನ್ನು ಸೋಲಿಸಿದ ಮಹಾನ್ ಪರಾಕ್ರಮಿ ಎಂದೇ ಖ್ಯಾತಿ ಪಡೆದಿದ್ದ.

ಇಂಥ ಇತಿಹಾಸ ಪುರುಷರು ಶಾಲ್ಮಲಾ ನದಿ ದಡದಲ್ಲಿ ನಿರ್ಮಿಸಿದ್ದ ಕೋಟೆಯಲ್ಲಿ ಸಣ್ಣ ದೇವಾಲಯ, ಫಿರಂಗಿಗಳು ಮತ್ತು ಅಲಂಕೃತ ಕಲ್ಲಿನ ಮಂಚವನ್ನು ಕೇಂದ್ರ ಪುರಾತತ್ವ ಇಲಾಖೆ ಸಂರಕ್ಷಿಸಿದೆ. ಉಳಿದ 30 ಎಕರೆ ವಿಶಾಲವಾದ ಕೋಟೆ ಆವರಣ, ಕಾಡಿನಂತೆ ಭಾಸವಾಗುತ್ತಿದ್ದು. ನೂರಾರು ಸ್ಮಾರಕಗಳು ರಕ್ಷಣೆಯಿಲ್ಲದೆ ಸೊರಗಿವೆ. 

‘ಕಲ್ಲಿನ ದೋಣಿಗಳು, ಎರಡು ಫಿರಂಗಿಗಳು, ವೀರಗಲ್ಲುಗಳು, ಸುರಂಗಗಳು, ರಾಣಿಯರ ಸ್ನಾನ ಗೃಹ, ದೇವರ ಮೂಲ, ಕುದುರೆ ಲಾಯ, ನಕ್ಷತ್ರ ಬಾವಿ, ರಾಟಾಳ ಬಾವಿ, ಗೋಪುರ, ಅಡುಗೆಮನೆ ಹಾಗೂ ನೀರಾವರಿ ವ್ಯವಸ್ಥೆಯ ಅವಶೇಷಗಳು ಅಲ್ಲಲ್ಲಿ ಮಣ್ಣಿಗೆ ಬಿದ್ದು, ಮೂಲ ಸ್ವರೂಪ ಕಳೆದುಕೊಂಡಿವೆ‌.  ಕೋಟೆ ಆವರಣದಲ್ಲಿರುವ ಶಿವಮಂದಿರ ಜೀರ್ಣೋದ್ಧಾರಗೊಳ್ಳುತ್ತಿದ್ದು, ಶಾಲ್ಮಲಾ ಸಂಗಮದ ಬಳಿ ನಿರ್ಮಿಸಿದ ಪಿಚ್ಚಿಂಗ್ ಕುಸಿಯುತ್ತಿದೆ. ಇವುಗಳನ್ನು ರಕ್ಷಿಸಬೇಕಾದ ಕೇಂದ್ರ ಪುರಾತತ್ವ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ’ ಎಂಬುದು ಸ್ಥಳೀಯರು ದೂರುತ್ತಾರೆ. 

‘ಸೋಂದಾ ಕೋಟೆ ಪ್ರದೇಶದಲ್ಲಿ ಇನ್ನಷ್ಟು ಉತ್ಖನನ, ಐತಿಹಾಸಿಕ ಅಧ್ಯಯನ ಕೈಗೊಳ್ಳಬೇಕು. ಕೋಟೆ ಜಾಗದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ ಜಾರಿ ಮಾಡಬೇಕು. ಕೋಟೆಯನ್ನು ಜೀವ ವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಿಸಬೇಕು. ಈಗಾಗಲೇ ಜೀವ ವೈವಿಧ್ಯ ಮಂಡಳಿಗೆ ಸಲ್ಲಿಕೆಯಾದ ಪ್ರಸ್ತಾವಕ್ಕೆ ಅನುಮತಿ ನೀಡಬೇಕು’ ಎಂದು ಸೋಂದಾ ಜಾಗೃತ ವೇದಿಕೆಯ ಸಂಚಾಲಕ ರತ್ನಾಕರ ಹೆಗಡೆ ಒತ್ತಾಯಿಸಿದರು.

ಶಿರಸಿಯ ಸೋಂದಾ ಸಮೀಪದ ಕೋಟೆಯಲ್ಲಿರುವ ಸುರಂಗ ಮಾರ್ಗ
ಶಿರಸಿಯ ಸೋಂದಾ ಸಮೀಪದ ಕೋಟೆಯಲ್ಲಿರುವ ಸುರಂಗ ಮಾರ್ಗ
ಕನ್ನಡ ನೆಲದ ಇತಿಹಾಸ ಸಾರುವ ಸೋಂದಾ ಕೋಟೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶಕ್ಕಾದರೂ ರಕ್ಷಿಸಬೇಕು
-ಲಕ್ಷ್ಮೀಶ ಸೋಂದಾ ಇತಿಹಾಸ ಸಂಶೋಧಕ

ಅಗತ್ಯ ವ್ಯವಸ್ಥೆ ಕಲ್ಪಿಸಿ’

‘ಸ್ಮಾರಕಗಳು ಇರುವಲ್ಲಿಯೇ ಕಟ್ಟೆ ಶೆಡ್ ನಿರ್ಮಿಸಿ ರಕ್ಷಿಸಬೇಕು. ಇವುಗಳ ವೀಕ್ಷಣೆಗೆ ಪಾದಚಾರಿ ಮಾರ್ಗ ನಿರ್ಮಿಸಬೇಕು. ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು. ಕಾಯಂ ವಾಚ್‌ಮನ್ ನೇಮಕ ಮಾಡಬೇಕು. ಕೋಟೆ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಲು ಗೈಡ್ ನೇಮಿಸಬೇಕು. ವಿಶ್ರಾಂತಿ ಗೃಹ ಶೌಚಾಲಯ ನಿರ್ಮಿಸುವ ಜತೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಾಲ್ಮಲಾ ನದಿ ಪಕ್ಕದಲ್ಲಿ ನೇರವಾಗಿ ಕೋಟೆಗೆ ಹೋಗುವ ರಸ್ತೆ ಸಂಪರ್ಕಿಸಲು ತೂಗುಸೇತುವೆ ನಿರ್ಮಿಸಬೇಕು. ಹಾಗಾದರೆ ಮಾತ್ರ ಐತಿಹಾಸಿಕ ಕೋಟೆಗೆ ಮತ್ತಷ್ಟು ಮೆರಗು ಬರುತ್ತದೆ’ ಎಂದು ರತ್ನಾಕರ ಹೆಗಡೆ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT