ಶಿರಸಿ: ತಾಲ್ಲೂಕಿನ ಸುಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯಗಳ ಕೊರತೆ ಕಾಣುತ್ತದೆ. ಅದಕ್ಕೆಲ್ಲ ಅನುದಾನ ಕೊರತೆ ಹಲವು ಸಮಸ್ಯೆಗಳು ಜೀವಂತವಾಗಿರಲು ಕಾರಣವಾಗಿದೆ.
ತಾಲ್ಲೂಕು ಕೇಂದ್ರದಿಂದ ಅಂದಾಜು 15 ಕಿ.ಮೀ. ದೂರದಲ್ಲಿರುವ ಸುಗಾವಿ ಗ್ರಾಮ ಪಂಚಾಯಿತಿ ಬನವಾಸಿ ಹೋಬಳಿಯಲ್ಲಿದೆ. ಇಲ್ಲಿ ಸರ್ವಋತು ರಸ್ತೆ, ಸಮರ್ಪಕ ವಿದ್ಯುತ್ ಹಾಗೂ ಶುದ್ಧ ನೀರಿನ ಸಮಸ್ಯೆ ಪ್ರಮುಖವಾಗಿದೆ.
'ಪಂಚಾಯಿತಿ ವ್ಯಾಪ್ತಿಯಲ್ಲಿ 20 ಕಿ.ಮೀ.ಗೂ ಹೆಚ್ಚಿನ ರಸ್ತೆ ಕಚ್ಚಾ ರಸ್ತೆಯಿದೆ. ಬಿದ್ರಳ್ಳಿ, ಬೆಂಗಳೆ, ಕೆಳಗಿನಬೈಲ್ ಭಾಗದ ರಸ್ತೆಗಳು ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿದ್ದು, ಸಂಚಾರಕ್ಕೆ ಸಮಸ್ಯೆ ಆಗುತ್ತಿವೆ. ಇದರ ಜತೆ 10ಕ್ಕೂ ಹೆಚ್ಚು ಕಡೆ ಕಾಲುಸಂಕದ ಅಗತ್ಯವಿದ್ದು, ಈವರೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಶಿರಸಿ-ಬನವಾಸಿ ಮುಖ್ಯ ರಸ್ತೆಯಿದೆ. ಈ ಮಾರ್ಗದಲ್ಲಿ ಬಸ್ ಸೌಲಭ್ಯವಿದೆ. ಆದರೆ ಬಸ್‍ಗಳ ಸಂಖ್ಯೆ ಕಡಿಮೆಯಿರುವ ಕಾರಣ ಶಾಲೆಗೆ ತೆರಳುವ ಮಕ್ಕಳಿಗೆ ತೊಂದರೆ ಆಗುತ್ತಿದೆ. ಬೆಂಗಳೆ, ಸುಗಾವಿ ಭಾಗದ ಮಕ್ಕಳು, ಸಾರ್ವಜನಿಕರು ಬಸ್ ಏರಲು 5 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಸಾಗಬೇಕು. ಒಳ ಮಾರ್ಗಗಳು ಹದಗೆಟ್ಟ ಕಾರಣ ಖಾಸಗಿ ವಾಹನಗಳ ಓಡಾಟವೂ ವಿರಳ. ಹೀಗಾಗಿ ತರಗತಿಗಳಿಗೆ ಸಮಯಕ್ಕೆ ತೆರಳಲು ತೊಡಕಾಗುತ್ತಿದೆ' ಎನ್ನುತ್ತಾರೆ ಪಂಚಾಯಿತಿ ಸದಸ್ಯ ಚಂದ್ರಶೇಖರ ನಾಯ್ಕ.
'ಇತರೆಡೆಗಳಂತೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಜಲ ಜೀವನ ಮಿಷನ್ (ಜೆಜೆಎಂ) ಕಾಮಗಾರಿ ಪೂರ್ಣವಾಗಿಲ್ಲ. ವಡ್ಡಿನಕೊಪ್ಪ, ಕಲ್ಗುಂಡಿಕೊಪ್ಪ, ಮಂಟಗಾಲ ಭಾಗದಲ್ಲಿ ಇನ್ನೂ ಮನೆ ಮನೆಗೆ ನೀರು ನೀಡಲು ಸಾಧ್ಯವಾಗಿಲ್ಲ. ಸುಗಾವಿಯಲ್ಲಿ ಈ ಹಿಂದೆ ನೀರ ಯೋಜನೆಗೆ ತೋಡಿದ್ದ ಕೊಳವೆ ಬಾವಿಗಳಲ್ಲಿ ನೀರಿಲ್ಲ. ಈ ಬಾರಿ ಮಳೆಯಾಗಿರುವ ಕಾರಣ ಸದ್ಯ ನೀರ ಸಮಸ್ಯೆಯಿಲ್ಲ' ಎನ್ನುತ್ತಾರೆ ಅವರು.
'ವಸತಿ ಯೋಜನೆಯಡಿ 300ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದು, ಮನೆ ವಿತರಣೆಯಾಗಿಲ್ಲ. ಈಗಾಗಲೇ ವಸತಿ ಯೋಜನೆಯಡಿ 70 ಮನೆ ನಿರ್ಮಿಸಿಕೊಂಡವರಿಗೆ ಸರ್ಕಾರದ ಹಣ ಬಿಡುಗಡೆಯಾಗಿಲ್ಲ. ಎಲ್ಲಿಯೂ ರಂಗಮಂದಿರವಾಗಲೀ, ಸಮುದಾಯ ಭವನವಾಗಲೀ ಇಲ್ಲ. ಇದರ ಜತೆ ಹಲವೆಡೆ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆಯಿದೆ. ಬನವಾಸಿಯಲ್ಲಿ ಗ್ರಿಡ್ ಸ್ಥಾಪನೆಯಾದರೆ ಸಮಸ್ಯೆ ಬಗೆಹರಿಯುತ್ತದೆ. ಸೋಲಾರ್ ಬೀದಿ ದೀಪ ವಿತರಿಸಲು ಪಂಚಾಯಿತಿಗೆ ಅನುದಾನವೇ ಇಲ್ಲ’ ಎನ್ನುತ್ತಾರೆ ಸದಸ್ಯ ಗಣೇಶ ಜೋಶಿ.
ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಳಾಗಿರುವ ಕಚ್ಚಾ ರಸ್ತೆಗಳ ಅಭಿವೃದ್ಧಿಯನ್ನು ಪಂಚಾಯಿತಿ ಅನುದಾನದಲ್ಲಿ ಮಾಡಲಾಗುತ್ತದೆ. ಆದರೆ ಅನುದಾನ ಕೊರತೆಯಿರುವ ಕಾರಣ ಕೆಲ ರಸ್ತೆಗಳನ್ನು ಮಾತ್ರ ನಿರ್ವಹಿಸಲಾಗಿದೆಮಹಾದೇವಿ ಡಿ ಪಿಡಿಒ ಸುಗಾವಿ ಪಂಚಾಯಿತಿ
ಶಾಶ್ವತ ಪರಿಹಾರ ಮರೀಚಿಕೆ...
'ಪ್ರತಿ ವರ್ಷ ಬೇಸಿಗೆ ಆರಂಭದೊಂದಿಗೆ ಬಿದ್ರಳ್ಳಿ ಮಾಸ್ತಿಜಡ್ಡಿ ಗಡಿಗೇರಿ ಬೆಂಗಳೆ ಭಾಗದಲ್ಲಿ ನೀರಿನ ಸಮಸ್ಯೆ ಆಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಇಂದಿಗೂ ಮರೀಚಿಕೆಯಾಗಿದೆ. ಸರ್ಕಾರದಿಂದ ನೇರವಾಗಿ ಯಾವುದೇ ಯೋಜನೆ ಜಾರಿಗೆ ಅವಕಾಶವಿಲ್ಲ. ಎಲ್ಲವೂ ಗ್ರಾಮ ಪಂಚಾಯಿತಿ ಮುಖಾಂತರವೇ ಆಗಬೇಕಿರುವ ಕಾರಣ ಸಮಸ್ಯೆ ನಿವಾರಣೆಯಾಗುತ್ತಿಲ್ಲ' ಎಂಬುದು ಗ್ರಾಮಸ್ಥರ ದೂರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.