ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಕಾರ ರಂಗದಿಂದ ಸಾಮಾಜಿಕ ಪ್ರಗತಿ: ಸುರೇಶ್ ಪ್ರಭು

Published 23 ಡಿಸೆಂಬರ್ 2023, 5:18 IST
Last Updated 23 ಡಿಸೆಂಬರ್ 2023, 5:18 IST
ಅಕ್ಷರ ಗಾತ್ರ

ಶಿರಸಿ: ದೇಶವು ಆರ್ಥಿಕ ಪ್ರಗತಿಯನ್ನು ಹೊಂದುವುದರ ಜತೆ ಸಾಮಾಜಿಕ ಪ್ರಗತಿ ಹೊಂದುವುದು ಅವಶ್ಯಕವಾಗಿದೆ. ಇದು ಸಾಕಾರಗೊಳಿಸಲು ಸಹಕಾರ ರಂಗದಿಂದ ಮಾತ್ರ ಸಾಧ್ಯ ಎಂದು ರಾಷ್ಟ್ರೀಯ ಸಹಕಾರಿ ನೀತಿ ಸಮಿತಿ ಅಧ್ಯಕ್ಷ ಸುರೇಶ್ ಪ್ರಭು ಹೇಳಿದರು.

ನಗರದ ಸುಪ್ರಿಯಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಶುಕ್ರವಾರ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಹಾಗೂ ವಿ.ಎಸ್.ಸೋಂದೆ ಫೌಂಡೇಷನ್ ಆಯೋಜಿಸಿದ್ದ ವಿ.ಎಸ್.ಸೋಂದೆ ದ್ವಿತೀಯ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ‘ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರ’  ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ದೇಶವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿದ್ದು, ಮುಂದಿನ 5 ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲು ಸಹಕಾರ ಕ್ಷೇತ್ರದ ಹಾಗೂ ಸಹಕಾರಿಗಳ ಪಾತ್ರ ಮಹತ್ತರವಾಗಿದೆ. ದೇಶ ಪ್ರಗತಿ ಕಾಣಲು ಪ್ರತಿ ಜಿಲ್ಲೆ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯನ್ನು ಕಾಣುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಯೋಗಾತ್ಮಕವಾಗಿ ದೇಶದ 6 ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ಈ ಜಿಲ್ಲೆಗಳು 2 ರಿಂದ 3 ಪ್ರತಿಶತ ಹೆಚ್ಚಿನ ಆರ್ಥಿಕ ಪ್ರಗತಿ ಕಂಡಿವೆ ಎಂದರು. 

ಸ್ಥಳೀಯ ಪರಿಸರಕ್ಕೆ ಧಕ್ಕೆಯಾಗದಂತೆ ಸಹಕಾರ ತತ್ವದಡಿ ಬೆಳವಣಿಗೆ ನಡೆಸುವ ಯೋಜನೆಗಳು ಕಾರ್ಯಗತಗೊಳ್ಳಬೇಕೆಂದು ಹೇಳಿದ ಅವರು, ಯಾವುದೇ ಪ್ರಗತಿಗೆ ಸಹಕಾರ ರಂಗದ ಬೆಳವಣಿಗೆ ಅವಶ್ಯಕವಾಗಿದ್ದು, ಸಹಕಾರಿಗಳು ಎಂದಿನ ಸಾಂಪ್ರದಾಯಿಕ ಕಾರ್ಯಗಳ ಜತೆಗೆ ಹೊಸ ಯೊಜನೆಗಳ ಮುಖಾಂತರ ಬದಲಾವಣೆ ತಂದು ಲಾಭದಾಯಕ ಸಂಸ್ಥೆಗಳಾಗಿ ಮುಂದುವರಿಯಬೇಕು ಎಂದು ಹೇಳಿದರು.

ಸಂಸ್ಥೆ ಬೆಳೆಯಬೇಕಾದರೆ ಶ್ರಮದ ಜತೆ ನಾಯಕತ್ವದ ಅವಶ್ಯಕತೆ ಸಾಕಷ್ಟು ಇರುತ್ತದೆ. ನಾಯಕತ್ವ ವಹಿಸುವಲ್ಲಿ ಸೋಂದೆಯವರ ಮುಂಚೂಣಿಯಲ್ಲಿರುತ್ತಿದ್ದರು.  ಶಿರಸಿ ಅರ್ಬನ್ ಬ್ಯಾಂಕ್ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸೋಂದೆಯವರ ಕೊಡುಗೆ ಅಪಾರವಾಗಿದೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸೋಂದೆಯವರ ಸಾಧನೆ, ತ್ಯಾಗ ಅಪಾರವಾಗಿದೆ. ಅವರ ಮುಂದಾಲೋಚನೆಯಿಂದ ಅರ್ಬನ್ ಬ್ಯಾಂಕ್ ಸಾಕಷ್ಟು ಪ್ರಗತಿ ಸಾಧಿಸಿದೆ. ಶಿಕ್ಷಣ, ಸಾಮಾಜಿಕ, ಕ್ಷೇತ್ರಗಳಿಗೂ ಅವರ ಕೊಡುಗೆ ಅಪಾರ. ಯುವ ಸಮೂಹಕ್ಕೆ ಆರ್ಥಿಕ ಶಕ್ತಿಯನ್ನು ನೀಡಿ ಉದ್ಯೋಗವನ್ನೂ ಸೋಂದೆಯವರು ನೀಡಿದ್ದಾರೆ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಬಹಳ ಮಹತ್ತರ ಪಾತ್ರವನ್ನು ವಹಿಸಿದೆ. ಅದೇ ರೀತಿ ಅರ್ಬನ್ ಬ್ಯಾಂಕ್ ಇಡೀ ರಾಜ್ಯದಲ್ಲಿ ಉತ್ತಮ ಹೆಸರು ಮಾಡಿದೆ ಎಂದು ಹೇಳಿದರು. 

ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ ಪ್ರಾಸ್ತಾವಿಕ ಮಾತನಾಡಿದರು. ವಿ‌.ಎಸ್ ಸೋಂದೆ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ರಾಜೇಶ ಧಾಕಪ್ಪ, ಬ್ಯಾಂಕ್ ಸಿಇಒ ಆರತಿ ಶೆಟ್ಟರ್, ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT