ಹೊನ್ನಾವರ:‘ಕಸ್ತೂರಿ ರಂಗನ್ ವರದಿ ಜಾರಿಗೆ ಈಗಾಗಲೇ ರಾಜ್ಯದ ಅನೇಕ ಸಚಿವರು ವಿರೋಧ ವ್ಯಕ್ತಪಡಿಸಿದ್ದು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ವರದಿಯ ಭವಿಷ್ಯ ಅಡಗಿದೆ' ಎಂದು ಬಂದರು, ಮೀನುಗಾರಿಕೆ ಹಾಗೂ ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಅರಣ್ಯವಾಸಿಗಳ ಹಕ್ಕು ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಭಾನುವಾರ ಇಲ್ಲಿ ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
‘ವರದಿಯನ್ನು ಪೂರ್ಣವಾಗಿ ಒಪ್ಪಿಕೊಳ್ಳುವುದು, ಕೇರಳ ರಾಜ್ಯ ಮಾದರಿಯಲ್ಲಿ ತಿದ್ದುಪಡಿಯೊಂದಿಗೆ ವರದಿಯನ್ನು ಒಪ್ಪಿಕೊಳ್ಳುವುದು ಅಥವಾ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಹೀಗೆ ಮೂರು ಆಯ್ಕೆಗಳಿವೆ. ಸೂಕ್ತ ನಿರ್ಧಾರಕ್ಕೆ ಬರಲು ಜನರ ಸಹಕಾರ ಅಗತ್ಯ. ವರದಿಯನ್ನು ವಿರೋಧಿಸುವ ನನ್ನ ನಿಲುವಿಗೆ ಬದ್ಧನಾಗಿರುತ್ತೇನೆ' ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿ ಕರಡು ಸೂಚನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸೆ.19 ಹಾಗೂ 25ರಂದು ನಡೆಯಲಿರುವ ಸಭೆಯಲ್ಲಿ ರಾಜ್ಯ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು. ಅರಣ್ಯವಾಸಿಗಳ ಹಕ್ಕಿಗೆ ಧಕ್ಕೆಯಾಗುವುದರಿಂದ ಅವೈಜ್ಞಾನಿಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ನೀಡಬಾರದು' ಎಂದು ರವೀಂದ್ರ ನಾಯ್ಕ ಆಗ್ರಹಿಸಿದರು.
ವೇದಿಕೆಯ ಪ್ರಧಾನ ಸಂಚಾಲಕ ಜಿ.ಎಂ.ಶೆಟ್ಟಿ, ಪದಾಧಿಕಾರಿಗಳಾದ ದೇವರಾಜ ಗೊಂಡ, ಬಾಲಚಂದ್ರ ಶೆಟ್ಟಿ, ಮಹಾಬಲೇಶ್ವರ ನಾಯ್ಕ, ಸಂಕೇತ ಹೊನ್ನಾವರ, ದಿನೇಶ ನಾಯ್ಕ, ವಿನೋದ ನಾಯ್ಕ, ಆಯುಬ್ ಉಮ್ಮರ್, ಚಂದು ಬೆಳಕೆ, ಸುರೇಶ, ಜಿ.ಕೆ.ಗೌಡ ಭಾಗವಹಿಸಿದ್ದರು.