ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮಕ್ಕಳ ಪಾಲಿಗೆ ಮೊಟ್ಟೆ ಅಚ್ಚುಮೆಚ್ಚು

ಶಿರಸಿಯಲ್ಲಷ್ಟೆ ಶೇಂಗಾ ಚಿಕ್ಕಿಗೆ ಆದ್ಯತೆ: ಬಾಳೆಹಣ್ಣು ವಿತರಣೆಯಿಲ್ಲ
Published 14 ಮಾರ್ಚ್ 2024, 4:42 IST
Last Updated 14 ಮಾರ್ಚ್ 2024, 4:42 IST
ಅಕ್ಷರ ಗಾತ್ರ

ಕಾರವಾರ: ಸರ್ಕಾರ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಆರಂಭಿಸಲು ಮುಂದಾದ ವೇಳೆ ಪ್ರಬಲ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಆರಂಭಿಸಿದ ಯೋಜನೆಗೆ ಸ್ಪಂದನೆ ಸಿಕ್ಕಿದ್ದು, ಶಾಲೆಗಳಲ್ಲಿ ಮೊಟ್ಟೆ ಸೇವಿಸಲು ಆಸಕ್ತಿ ತೋರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ.

ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೌಷ್ಟಿಕತೆ ವೃದ್ಧಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ನೀಡುವ ಆಹಾರಗಳಲ್ಲಿ ಮೊಟ್ಟೆಯೇ ಅಗ್ರಸ್ಥಾನ ಪಡೆದಿದೆ.

ಪ್ರತಿನಿತ್ಯ ಜಿಲ್ಲೆಯಲ್ಲಿ 1,46,823 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಾರೆ. ಅವರಲ್ಲಿ ಶೇ 75.79 ರಷ್ಟು ವಿದ್ಯಾರ್ಥಿಗಳು ಮೊಟ್ಟೆ ಸೇವನೆ ಮಾಡುತ್ತಿದ್ದಾರೆ. ವಾರದಲ್ಲಿ ಎರಡು ದಿನ ಮಾತ್ರ ಮೊಟ್ಟೆ ಅಥವಾ ಅದಕ್ಕೆ ಪರ್ಯಾಯವಾಗಿ ಶೇಂಗಾ ಚಿಕ್ಕಿ, ಬಾಳೆಹಣ್ಣು ವಿತರಿಸಲಾಗುತ್ತಿದೆ. ಶೇ 20.37 ವಿದ್ಯಾರ್ಥಿಗಳು ಶೇಂಗಾ ಚಿಕ್ಕಿ ಸೇವಿಸಿದರೆ, ಶೇ 3.73ರಷ್ಟು ವಿದ್ಯಾರ್ಥಿಗಳು ಮಾತ್ರ ಬಾಳೆಹಣ್ಣು ಸೇವಿಸುತ್ತಿದ್ದಾರೆ.

ಘಟ್ಟದ ಮೇಲಿನ ತಾಲ್ಲೂಕುಗಳನ್ನು ಒಳಗೊಂಡಿರುವ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿಲ್ಲ. ಕರಾವಳಿ ಭಾಗದ ಐದು ತಾಲ್ಲೂಕುಗಳಲ್ಲಿ ವಿತರಿಸಲಾಗುತ್ತಿದ್ದರೂ ಸೇವಿಸುವ ಮಕ್ಕಳ ಸಂಖ್ಯೆ ಕಡಿಮೆ ಇದೆ. ಶಿರಸಿ ತಾಲ್ಲೂಕಿನಲ್ಲಿ ಮಾತ್ರ ಮೊಟ್ಟೆಯ ಬದಲು ಶೇಂಗಾ ಚಿಕ್ಕಿ ಸೇವಿಸುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಅಲ್ಲಿನ 19,482 ವಿದ್ಯಾರ್ಥಿಗಳ ಪೈಕಿ 8,572 ಮಂದಿ ಮೊಟ್ಟೆ ಸೇವಿಸಿದರೆ, 10,910 ಮಕ್ಕಳು ಶೇಂಗಾ ಚಿಕ್ಕಿ ಸವಿಯುತ್ತಿದ್ದಾರೆ.

‘ಮಲೆನಾಡು ಪ್ರದೇಶ ಹೆಚ್ಚಿರುವ ಶಿರಸಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಬಾಳೆ ಬೆಳೆಗಾರರು ಹೆಚ್ಚಿದ್ದಾರೆ. ಅಲ್ಲಿನ ಬಹುತೇಕ ಮನೆಗಳಲ್ಲಿ ಬಾಳೆಹಣ್ಣು ಲಭ್ಯವಿರುವ ಕಾರಣ ಮಕ್ಕಳಿಗೆ ಬಾಳೆಹಣ್ಣು ವಿತರಣೆ ಮಾಡುತ್ತಿಲ್ಲ. ಮೊಟ್ಟೆ, ಶೇಂಗಾ ಚಿಕ್ಕಿ ವಿತರಣೆ ವಾರದಲ್ಲಿ ಎರಡು ದಿನ ಮಾಡಲಾಗುತ್ತಿದೆ’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ಅಧಿಕಾರಿ ಸದಾನಂದ ಸ್ವಾಮಿ ತಿಳಿಸಿದರು.

‘ಕರಾವಳಿ ಭಾಗದಲ್ಲಿ ಶೇ 84 ರಷ್ಟು ಮಕ್ಕಳು ಮೊಟ್ಟೆ ಸೇವಿಸುತ್ತಿದ್ದಾರೆ. ಶೇಂಗಾ ಚಿಕ್ಕಿ, ಬಾಳೆ ಹಣ್ಣು ವಿತರಣೆ ಮಾಡಲಾಗುತ್ತಿದ್ದರೂ ಅವುಗಳ ಸೇವನೆಗೆ ಆಸಕ್ತಿ ತೋರಿಸುವ ಮಕ್ಕಳ ಸಂಖ್ಯೆ ಕಡಿಮೆ ಇದೆ’ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ಅಧಿಕಾರಿ ಕೆ.ಆರ್.ತ್ರಿವೇಣಿ ಹೇಳಿದರು.

ಶಾಲಾಭಿವೃದ್ಧಿ ಸಮಿತಿಯವರು ಅಥವಾ ಗ್ರಾಮದ ಗಣ್ಯರು ವಿಶೇಷ ಸಂದರ್ಭಗಳಲ್ಲಿ ಮಕ್ಕಳಿಗೆ ಸಿಹಿಯೂಟ ಒದಗಿಸುತ್ತಿದ್ದು ಅತಿಥಿ ಊಟ ಎಂಬ ಹೆಸರಿನಲ್ಲಿ ಮಕ್ಕಳಿಗೆ ವಿಶೇಷ ಭೋಜನ ಕೊಡಲಾಗುತ್ತಿದೆ

-ಸದಾನಂದ ಸ್ವಾಮಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಅಕ್ಷರದಾಸೋಹ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT