ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲ ತಾಪಕ್ಕೆ ಕಂಗೆಟ್ಟ ಹೈನೋದ್ಯಮ

ಗುಣಮಟ್ಟ, ಕೊಬ್ಬಿನಾಂಶದ ಮೇಲೆ ಪರಿಣಾಮ
Published 16 ಮಾರ್ಚ್ 2024, 4:52 IST
Last Updated 16 ಮಾರ್ಚ್ 2024, 4:52 IST
ಅಕ್ಷರ ಗಾತ್ರ

ಶಿರಸಿ: ಬೇಸಿಗೆ ಆರಂಭದ ದಿನಗಳಲ್ಲಿಯೇ ಜಿಲ್ಲೆಯಲ್ಲಿ ಹೈನೋದ್ಯಮವನ್ನು ಬಿಸಿಲಿನ ತಾಪ ಕಂಗೆಡಿಸಿದೆ. ದಿನದಿಂದ ದಿನಕ್ಕೆ ಹಾಲಿನ ಶೇಖರಣೆ ಕಡಿಮೆ ಆಗುವ ಜತೆ ಹಾಲಿನ ಗುಣಮಟ್ಟ (ಡಿಗ್ರಿ) ಹಾಗೂ ಕೊಬ್ಬಿನಾಂಶ (ಫ್ಯಾಟ್) ಕಡಿಮೆ ಆಗುತ್ತಿರುವುದು ಹೈನುಗಾರರನ್ನು ಚಿಂತೆಗೆ ದೂಡಿದೆ. 

ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಉತ್ತರ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಹಾಲಿನ ಶೇಖರಣೆ ಕಡಿಮೆ ಆಗುತ್ತಿದೆ. ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬರಗಾಲ ತಾಂಡವವಾಡುತ್ತಿದೆ. ಬೆಳೆ ನಷ್ಟದಿಂದ ಕಂಗಾಲಾಗಿದ್ದ ರೈತರು ಹೈನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದರು.

ಸರ್ಕಾರದಿಂದ ಬರುತ್ತಿದ್ದ ₹5 ಸಹಾಯಧನ ನೀಡಲು ವಿಳಂಬ, ಹಾಲಿನ ದರ ಕಡಿತ, ಪಶು ಆಹಾರದ ಮೇಲಿನ ದರ ಹೆಚ್ಚಳದಿಂದ ಹೈನುಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಬಿಸಿಲ ತಾಪ ಹೆಚ್ಚುತ್ತಿದ್ದು, ನೀರಿನ ಕೊರತೆ ಕಾಡುತ್ತಿದೆ. ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡಲು ಪಶು ಆಹಾರದ ದರ ಗಗನಮುಖಿಯಾಗಿದೆ. ಇರುವ ಸೌಲಭ್ಯದಲ್ಲಿ ಆಹಾರ ನೀಡುವ ಕಾರಣ ಹಾಲಿನ ಗುಣಮಟ್ಟ ಮತ್ತು ಕೊಬ್ಬಿನಾಂಶದ ಮೇಲೆ ಪರಿಣಾಮ ಬೀರುತ್ತಿದೆ’ ಎಂಬುದು ಹೈ‌ನುಗಾರರ ಮಾತಾಗಿದೆ. 

'ಡಿಗ್ರಿ ಅಥವಾ ಫ್ಯಾಟ್ ಬಾರದಿದ್ದರೆ ಹಾಲನ್ನು ವಾಪಸ್ ಕಳಿಸಲಾಗುತ್ತದೆ. ಸಾಮಾನ್ಯವಾಗಿ ಡಿಗ್ರಿ 29ರಷ್ಟು ಹಾಗೂ ಫ್ಯಾಟ್ 3.8ರಷ್ಟಿದ್ದರೆ ಮಾತ್ರ ಹಾಲು ಉತ್ಪಾದಕ ಸಂಘ ಹಾಗೂ ಬಲ್ಕ್ ಮಿಲ್ಕ್ ಕೂಲರ್ (ಬಿಎಂಸಿ)ಗಳಲ್ಲಿ ಹಾಲು ತುಂಬಿಸಿಕೊಳ್ಳುತ್ತಾರೆ. ವಾತಾವರಣದ ತಾಪ ಹೆಚ್ಚಾದಂತೆ ಡಿಗ್ರಿ 22ರಿಂದ 25ರವರೆಗೆ ಹಾಗೂ ಫ್ಯಾಟ್ 2.5ದಿಂದ 3.0ವರೆಗೆ ಬರುತ್ತದೆ. ಇನ್ನೂ ಕೆಲವೊಮ್ಮೆ ಡಿಗ್ರಿ ಬಂದರೆ ಫ್ಯಾಟ್ ಬರುತ್ತಿಲ್ಲ. ಮತ್ತೆ ಕೆಲವೊಮ್ಮೆ ಫ್ಯಾಟ್ ಬಂದರೆ ಡಿಗ್ರಿ ಬರುವುದಿಲ್ಲ. ಇದರಿಂದ ಹೈನುಗಾರರು ಸಮಸ್ಯೆ ಅನುಭವಿಸುವಂತಾಗಿದೆ' ಎನ್ನುತ್ತಾರೆ ಬಹುತೇಕ ಹಾಲು ಉತ್ಪಾದಕರು.

ವಿವಿಧ ಕಾರಣದಿಂದ ಜಿಲ್ಲೆಯಾದ್ಯಂತ ಹಾಲು ಇಳುವರಿ ಹಿಮ್ಮುಖವಾದ ಕಾರಣ ತಾಲ್ಲೂಕಿನ ಹನುಮಂತಿಯಲ್ಲಿ ಪ್ಯಾಕಿಂಗ್ ಘಟಕಕ್ಕೆ ಹಾಲಿನ ಕೊರತೆ ಎದುರಾಗುವ ಸಾಧ್ಯತೆಯಿದೆ. ‘ಘಟಕ ಆರಂಭವಾಗುವ ಪೂರ್ವದಲ್ಲಿ ನಿತ್ಯ ಸರಾಸರಿ 40ರಿಂದ 45 ಸಾವಿರ ಲೀಟರ್ ಹಾಲು ಪೂರೈಕೆ ಆಗುತ್ತಿತ್ತು. ಪ್ಯಾಕಿಂಗ್ ಘಟಕ ಸ್ಥಾಪನೆಯಾದ ನಂತರ ದಿನಕ್ಕೆ 55 ಸಾವಿರ ಲೀಟರ್ ಹಾಲು ಶೇಖರಣೆ ಮತ್ತು ಮಾರಾಟ ಆಗಿತ್ತು. ಆದರೆ ಈಗ ಗರಿಷ್ಠ 35 ಸಾವಿರ ಲೀಟರ್‌ ಹಾಲು ಪೂರೈಕೆ ಆಗುತ್ತಿದೆ’ಎಂಬುದು ಘಟಕದ ಸಿಬ್ಬಂದಿ ಮಾಹಿತಿ. 

ಹಾಲು ಮಾರಾಟದಿಂದ ರೈತರಿಗೆ ಆದಾಯ ಉಳಿಯುತ್ತಿಲ್ಲ. ಈಗ ಗುಣಮಟ್ಟ ಮತ್ತು ಕೊಬ್ಬಿನಾಂಶವೂ ಕಡಿಮೆಯಾಗುತ್ತಿದ್ದು ಹೈನೋದ್ಯಮ ಮಾಡುವುದು ನಷ್ಟಕ್ಕೆ ದಾರಿಯಾದಂತಾಗಿದೆ
- ವಿಶಾಲ ನಾಯ್ಕ ಓಣಿಕೇರಿ- ಹೈನುಗಾರ
ಕೆಎಂಎಫ್ ಪಶು ಆಹಾರದ ದರ ಇಳಿಸಲು ಮನವಿ ಮಾಡಲಾಗಿದೆ. ಹೈನುಗಾರರು ಕೂಡ ಜಾನುವಾರುಗಳಿಗೆ ಪೌಷ್ಟಿಕ ಆಹಾರ ನೀಡಿ ಉತ್ತಮ ಗುಣಮಟ್ಟದ ಹಾಲು  ಪಡೆಯಲು ಮುಂದಾಗಬೇಕು
-ಸುರೇಶ್ಚಂದ್ರ ಹೆಗಡೆ, ಧಾಮುಲ್ ನಿರ್ದೇಶಕ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT