ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ | ಹೆಚ್ಚುತ್ತಿರುವ ಬಿಸಿಲ ಬೇಗೆ: ಅಡಿಕೆ ಗಿಡಗಳಿಗೆ ಟ್ಯಾಂಕರ್‌ ನೀರು

ಹೆಚ್ಚುತ್ತಿರುವ ಬಿಸಿಲ ಬೇಗೆ: ಬತ್ತುವ ಹಂತದಲ್ಲಿ ಜಲಮೂಲ
Published 22 ಫೆಬ್ರುವರಿ 2024, 4:04 IST
Last Updated 22 ಫೆಬ್ರುವರಿ 2024, 4:04 IST
ಅಕ್ಷರ ಗಾತ್ರ

ಮುಂಡಗೋಡ: ಬಿಸಿಲಿನ ಹೊಡೆತಕ್ಕೆ ತತ್ತರಿಸಿರುವ ಜಲಮೂಲಗಳು ಒಂದೆಡೆಯಾದರೆ, ತೋಟ, ಗದ್ದೆಗಳಲ್ಲಿ ಇರುವ ಕೊಳವೆಬಾವಿಗಳು ನೀರು ಚೆಲ್ಲದೆ ಅಸಹಾಯಕವಾಗಿ ನಿಂತಿರುವುದು ಮತ್ತೊಂದೆಡೆ.

ಜೋಪಾನದಿಂದ ಬೆಳೆಸಿರುವ ಅಡಿಕೆ, ಬಾಳೆ ತೋಟಗಳು ನೀರಿಲ್ಲದೇ ಒಣಗುತ್ತಿರುವುದನ್ನು ಸಹಿಸಲು ಆಗದೇ, ಟ್ಯಾಂಕರ್‌ ಮೂಲಕ ನೀರನ್ನು ಹಾಯಿಸಿ ತಕ್ಕ ಮಟ್ಟಿಗೆ ಬೆಳೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರೈತರು ನಿರತರಾಗಿದ್ದಾರೆ.

ತಾಲ್ಲೂಕಿನಲ್ಲಿ ಬರದ ಛಾಯೆ ದಿನದಿಂದ ದಿನಕ್ಕೆ ಹೆಚ್ಚು ಪರಿಣಾಮ ಬೀರುತ್ತಿದೆ. ಜಲಾಶಯದ ನೀರು ಹರಿದು ಹೋಗುವ ಕಾಲುವೆ ಎಡಬಲ ಇರುವ ಸಣ್ಣ ಕೆರೆಗಳಲ್ಲಿ ತಕ್ಕ ಮಟ್ಟಿಗೆ ನೀರು ನಿಂತಿದೆ. ಇದೇ ನೀರು ಕೆಲವು ರೈತರಿಗೆ ಬೇಸಿಗೆಯಲ್ಲಿ ಆಸರೆಯಾಗಿದ್ದು, ಬೆಳೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ, ಸಿಕ್ಕಷ್ಟು ನೀರನ್ನು ಹಾಯಿಸಿ, ತೋಟ, ಗದ್ದೆಗಳನ್ನು ಹಸಿರು ಆಗಿ ಇರುವಂತೆ ಶ್ರಮಿಸುತ್ತಿದ್ದಾರೆ. ವಾರಕ್ಕೊಮ್ಮೆ ಎಂಬಂತೆ ತೋಟಗಳಿಗೆ ಟ್ಯಾಂಕರ್‌ ಮೂಲಕ, ಇಲ್ಲವೇ ಕೆರೆಯಿಂದ ನೀರು ಹರಿಸುತ್ತಿದ್ದಾರೆ.

‘ನಾಲ್ಕು ವರ್ಷದ ಅಡಿಕೆ ಗಿಡಗಳು ಅಲ್ಲೊಂದು, ಇಲ್ಲೊಂದು ಹೂವು ಬಿಡುತ್ತಿವೆ. ತೋಟ ನೀರಿಲ್ಲದೇ ಹಳದಿಯಾಗುತ್ತಿದೆ. ಕಣ್ಣೆದುರಿಗೆ ಬೆಳೆ ಹಾಳಾಗುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಇದ್ದ ಕೊಳವೆಬಾವಿಗಳು ಕೈ ಚೆಲ್ಲಿವೆ. ಇದರಿಂದ, ಟ್ಯಾಂಕರ್‌ ನೀರು ತಂದು ಗಿಡಗಳಿಗೆ ಹಾಯಿಸುತ್ತಿದ್ದೇನೆ’ ಎಂದು ರೈತ ಮುಖಂಡ ಪಿ.ಜಿ.ತಂಗಚ್ಚನ್‌ ಹೇಳಿದರು.

‘ವಾರಕ್ಕೆ ಒಮ್ಮೆಯಾದರೂ ಗಿಡವೊಂದಕ್ಕೆ ನೀರು ಹಾಯಿಸಬೇಕಾಗಿದೆ. ಕಳೆದ ಕೆಲವು ದಿನಗಳಿಂದ ತಾತ್ಕಾಲಿಕ ವ್ಯವಸ್ಥೆ ಎಂಬಂತೆ ನೀರು ಉಣಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ ಹೊರತು, ಹನಿ ಮಳೆಯೂ ಧರೆಯತ್ತ ಮುಖ ಮಾಡುತ್ತಿಲ್ಲ. ಬೆಳೆ ರಕ್ಷಿಸಿಕೊಳ್ಳುವುದು ಇನ್ನಷ್ಟು ಕಷ್ಟಕರವಾಗಲಿದೆ. ಕುಡಿಯುವ ನೀರಿಗೂ ತೊಂದರೆ ಪಡಬೇಕಾಗುವ ಸಾಧ್ಯತೆ ಹೆಚ್ಚಿದೆ’ ಎಂದರು.

‘ತಾಲ್ಲೂಕಿನಲ್ಲಿ 2,880 ಹೆಕ್ಟೇರ್‌ ಅಡಿಕೆ ಕ್ಷೇತ್ರವಿದ್ದು, ಶೇ 80ರಷ್ಟು ರೈತರು ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಂಡಿದ್ದಾರೆ. ಉಷ್ಣತೆಯಲ್ಲಿ ಏರು ಪೇರು ಆಗುತ್ತಿರುವುದರಿಂದ ಅಡಿಕೆ ತೋಟದ ಮೇಲೆ ತಕ್ಕ ಮಟ್ಟಿಗೆ ಪರಿಣಾಮ ಬೀರುತ್ತಿದೆ. ಮಾರ್ಚ್‌ ತಿಂಗಳಲ್ಲಿ ಅಕಾಲಿಕ ಮಳೆಯಾದರೆ ಅಡಿಕೆ ಬೆಳೆಗೆ ತುಂಬಾ ಸಹಕಾರಿಯಾಗುತ್ತದೆ. ಕೆಲವು ತೋಟದ ಸುತ್ತಲೂ, ಖಾಲಿ ಜಮೀನುಗಳು ಇರುವುದರಿಂದ, ತೋಟಕ್ಕೆ ನೀರಿನ ಪ್ರಮಾಣ ಜಾಸ್ತಿ ಬೇಕಾಗುತ್ತಿದೆʼ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ಕುಲ್ಲೂರ ಹೇಳಿದರು.

ಅಂತರ್ಜಲ ಮಟ್ಟ ಕುಸಿತ ಕಂಡಿರುವುದರಿಂದ ಹಲವು ರೈತರು ಹನಿ ನೀರಾವರಿ ಯೋಜನೆ ಅಳವಡಿಕೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ

–ಕೃಷ್ಣ ಕುಲ್ಲೂರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT