ಕಾರವಾರ: ‘ಶಿರೂರು ಗುಡ್ಡ ಕುಸಿತದ ನಂತರ ಗಂಗಾವಳಿ ನದಿ ಉಕ್ಕೇರಿದ್ದರಿಂದ ನಮ್ಮೂರಿಗೆ ಉಂಟಾದ ಹಾನಿಯಿಂದ ದಿಕ್ಕೆಟ್ಟು ಹೋದ ಸ್ಥಿತಿಯಲ್ಲಿ ನಮ್ಮ ಮಕ್ಕಳಿಗೆ ಧೈರ್ಯ ತುಂಬಿ, ನಮಗೂ ಆತ್ಮವಿಶ್ವಾಸ ತುಂಬಿದ ಸಂಧ್ಯಾ ಟೀಚರ್ ನಮ್ಮ ಪಾಲಿಗೂ ಗುರುವಿನಂತೆ ಕಂಡರು...’
ಹೀಗೆ ಅಂಕೋಲಾ ತಾಲ್ಲೂಕಿನ ಉಳುವರೆಯ ಗ್ರಾಮಸ್ಥರು ತಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಧ್ಯಾ ನಾಯ್ಕ ಅವರನ್ನು ಶ್ಲಾಘಿಸಿದರು. ‘ಬಡವರ ಮನೆಯ ಮಕ್ಕಳ ಸಂಕಷ್ಟಗಳಿಗೆ ಸ್ಪಂದಿಸುವ ಅಪರೂಪದ ಗುಣ ಅವರಲ್ಲಿದೆ’ ಎನ್ನುವಾಗ ಕೆಲವರು ಭಾವುಕರಾದರು.
ಕುಮಟಾ ತಾಲ್ಲೂಕು ಅಘನಾಶಿನಿ ಗ್ರಾಮದ ಮೂಲದ ಸಂಧ್ಯಾ ನಾಯ್ಕ ಉಳುವರೆ ಶಾಲೆಯಲ್ಲಿ ನಾಲ್ಕೂವರೆ ವರ್ಷದಿಂದ ಶಿಕ್ಷಕಿಯಾಗಿದ್ದಾರೆ. ಇದಕ್ಕೂ ಮುನ್ನ ಅವರು ವಿಜಯಪುರ ಜಿಲ್ಲೆಯಲ್ಲಿ ಶಿಕ್ಷಕಿಯಾಗಿದ್ದರು.
‘ಗ್ರಾಮವು ಸಂಕಷ್ಟದಲ್ಲಿದ್ದಾಗ ಶಿಕ್ಷಕಿ ಸಂಧ್ಯಾ ನಾಯ್ಕ ನೆರವಿಗೆ ನಿಂತರು. ತಮಗೆ ಪರಿಚಯವಿದ್ದವರಿಗೆ, ಸಂಬಂಧಿಕರಿಗೆ, ಹಲವು ಸಂಘ ಸಂಸ್ಥೆಗಳಿಗೆ ಇಲ್ಲಿನ ಜನರ ಕಷ್ಟ ವಿವರಿಸಿದರು. ಹಲವರು ಸ್ಪಂದಿಸಿ ಸಂತ್ರಸ್ತರಿಗೆ ನೆರವಾದರು. ಪಾಠ ಬೋಧನೆಗೆ ಸೀಮಿತವಾಗದೆ ತನ್ನ ಶಾಲೆಯ ಮಕ್ಕಳಿಗೆ, ಅವರ ಕುಟುಂಬದವರ ಸಂಕಷ್ಟದ ಸಮಯದಲ್ಲಿ ನೆರವಾಗಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥ ಜಗದೀಶ್.
ಬಡ ಕುಟುಂಬದ ಮಕ್ಕಳು ಹೆಚ್ಚಿರುವ ಶಾಲೆಯಲ್ಲಿ ಮಕ್ಕಳಿಗೆ ನನ್ನ ಕೈಲಾದ ನೆರವು ನೀಡುತ್ತೇನೆ. ಇದರಲ್ಲಿ ಸಂತೃಪ್ತಿ ಇದೆ.ಸಂಧ್ಯಾ ನಾಯ್ಕ, ಉಳುವರೆ ಶಾಲೆಯ ಶಿಕ್ಷಕಿ
ಜುಲೈ 16 ರಂದು ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ ಬಳಿಕ ಉಳುವರೆಯ ಆರು ಮನೆಗಳು ಸಂಪೂರ್ಣ ನಾಮಾವಶೇಷವಾಗಿದ್ದರೆ, 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಹತ್ತಾರು ಮಕ್ಕಳು ಗಾಯಗೊಂಡು ಆಕ್ರಂದಿಸುತ್ತಿದ್ದರು. ದುರಂತದ ಭಯ ಮಕ್ಕಳನ್ನು ಆವರಿಸಿದ್ದರಿಂದ ಅವರು ಧೃತಿಗೆಟ್ಟಿದ್ದರು. ಅಂಥ ಸಂದರ್ಭದಲ್ಲಿ ಮಕ್ಕಳಲ್ಲಿ ಶಿಕ್ಷಕಿ ಸ್ಥೈರ್ಯ ತುಂಬಿದ್ದರು.
‘ಮಾನವೀಯತೆ ಮುಖ್ಯ’
‘ಶಾಲೆಗೆ ಸಮೀಪದಲ್ಲಿರುವ ಗಂಗಾವಳಿ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಬಿದ್ದಿದೆ ಎಂದು ಕರೆ ಮಾಡಿದರು. ತಕ್ಷಣವೇ ಪತಿಯನ್ನು ಕರೆದುಕೊಂಡು ಪುಟ್ಟ ಮಗುವನ್ನು ಮನೆಯಲ್ಲೇ ಬಿಟ್ಟು ಶಾಲೆಗೆ ಓಡಿಬಂದೆ. ಗ್ರಾಮಸ್ಥರೆಲ್ಲ ಆತಂಕದಿಂದ ಓಡಾಡುತ್ತಿದ್ದರು. ಮಕ್ಕಳು ಆಕ್ರಂದಿಸುತ್ತಿದ್ದರು. ಕೆಲವೇ ಕ್ಷಣದಲ್ಲಿ ಶಿರೂರು ದುರಂತದ ಭಯಾನಕತೆ ಅರಿವಿಗೆ ಬಂತು. ಮಕ್ಕಳಿಗೆ ಸಾಂತ್ವನ ಹೇಳಿ ಅವರಲ್ಲಿ ಸಂಕಷ್ಟಕ್ಕೆ ಒಳಗಾದ ಪಾಲಕರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಶಾಲೆಯಲ್ಲಿರುವ 58 ಮಕ್ಕಳು ನನ್ನ ಮನೆಯವರು ಎಂದು ಭಾವಿಸಿ ಅವರನ್ನು ಪ್ರೀತಿಸುತ್ತೇನೆ. ಪ್ರವಾಹದಿಂದ ಪಠ್ಯಪುಸ್ತಕವನ್ನೆಲ್ಲ ಕಳೆದುಕೊಂಡರು. ಇಲಾಖೆಯ ನೆರವಿನಿಂದ ಸ್ನೇಹಿತರ ನೆರವಿನಿಂದ ಅವನ್ನು ಒದಗಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ನಾನು ಮಾಡಿದ ಪೋಸ್ಟ್‌ಗೆ ಸ್ಪಂದಿಸಿ ಹಲವರು ಸಹಾಯ ಮಾಡಿದರು’ ಎನ್ನುತ್ತಾರೆ ಶಿಕ್ಷಕಿ ಸಂಧ್ಯಾ ನಾಯ್ಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.