ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಾಳಿ ಬಂದರು ಕೈಬಿಡಲು ಆಗ್ರಹ: ಮೀನುಗಾರರಿಂದ ಪ್ರತಿಭಟನೆಯ ಎಚ್ಚರಿಕೆ

Last Updated 22 ಸೆಪ್ಟೆಂಬರ್ 2022, 15:32 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಮಾಜಾಳಿಯಲ್ಲಿ ಉದ್ದೇಶಿತ ಮೀನುಗಾರಿಕಾ ಬಂದರು ಯೋಜನೆಯನ್ನು ಕೈಬಿಡಬೇಕು ಎಂದು ದೇವಬಾಗ ಮತ್ತು ಮಾಜಾಳಿ ಮೀನುಗಾರರ ಹೋರಾಟ ಸಮಿತಿ ಒತ್ತಾಯಿಸಿದೆ.

ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿಗೆ ಮನವಿ ನೀಡಿದ ಮುಖಂಡರು, ‘ಬಂದರು ನಿರ್ಮಾಣ ಯೋಜನೆಯಿಂದ ಸ್ಥಳೀಯ ಮೀನುಗಾರರು ಮನೆಗಳನ್ನು ಕಳೆದುಕೊಳ್ಳುವ ಆತಂಕವಿದೆ’ ಎಂದರು.

‘ಮಾಜಾಳಿ, ಹಿಪ್ಪಳಿ, ದಾಂಡೇಬಾಗ, ನೆಚ್ಕಿನಬಾಗ, ಬಾವಳ ಹಾಗೂ ದೇವಬಾಗ ಗ್ರಾಮಗಳಲ್ಲಿ ಮೀನುಗಾರರು ವಾಸವಿದ್ದಾರೆ. ಯಾಂತ್ರೀಕೃತ ಹಾಗೂ ಸಾಂಪ್ರದಾಯಿಕ, ಎರಡೂ ಪದ್ಧತಿಗಳಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ. ಏಂಡಿಬಲೆ, ಬೀಸುಬಲೆ, ಮರಣಬಲೆ, ಏಡಿಬಲೆ ಹೀಗೆ ವಿವಿಧ ಪದ್ಧತಿಗಳಲ್ಲಿ ವೃತ್ತಿ ಮಾಡುತ್ತಿದ್ದೇವೆ. ಸುಮಾರು 6 ಸಾವಿರ ಸಾಂಪ್ರದಾಯಿಕ ಮೀನುಗಾರರು ಹಾಗೂ 2 ಸಾವಿರಕ್ಕೂ ಅಧಿಕ ದೋಣಿಗಳಿವೆ. ಅವುಗಳನ್ನು ಮಾಜಾಳಿ ಹಾಗೂ ದೇವಬಾಗ ಕಡಲತೀರದಲ್ಲಿ ನಿಲ್ಲಿಸಲಾಗುತ್ತದೆ’ ಎಂದು ವಿವರಿಸಿದರು.

‘ಇಲ್ಲಿ ಬಂದರು ನಿರ್ಮಾಣವಾದರೆ ಸಾಂಪ್ರದಾಯಿಕ ಮೀನುಗಾರಿಕೆಗೆ ಸಮುದ್ರ ತೀರವೇ ಇಲ್ಲವಾಗುತ್ತದೆ. ನೌಕಾನೆಲೆ ಹಾಗೂ ಇತರ ಯೋಜನೆಗಳಿಗೆ 12 ಕಡಲತೀರಗಳನ್ನು ಕಳೆದುಕೊಂಡಿದ್ದೇವೆ. ರವೀಂದ್ರನಾಥ ಟ್ಯಾಗೋರ್ ಕಡಲ ತೀರ ಮತ್ತು ಮಾಜಾಳಿ ತೀರಗಳು ಮಾತ್ರ ಸದ್ಯಕ್ಕೆ ಉಳಿದಿವೆ. ಅವುಗಳನ್ನೂ ಕಳೆದುಕೊಂಡರೆ ಸಾಂಪ್ರದಾಯಿಕ ಮೀನುಗಾರರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

‘ಬಂದರು ನಿರ್ಮಾಣಕ್ಕೆ ಮೀನುಗಾರಿಕಾ ಇಲಾಖೆಯಿಂದ ಸರ್ಕಾರಕ್ಕೆ ಅರ್ಜಿ ಸಲ್ಲಿಕೆಯಾಗಿರುವ ಮಾಹಿತಿಯಿದೆ. ಯೋಜನೆಗಾಗಿ ರಾಜ್ಯ ಸರ್ಕಾರದಿಂದ ಆರ್ಥಿಕ ಅನುಮೋದನೆಯೂ ಸಿಕ್ಕಿದೆ. ಈ ಬಗ್ಗೆ ಸರ್ಕಾರವು ಸ್ಥಳೀಯ ಮೀನುಗಾರರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಅಭಿಪ್ರಾಯಗಳನ್ನೂ ಸಂಗ್ರಹಿಸಿಲ್ಲ. ಏಕಾಏಕಿಯಾಗಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೊದಲು ಸಾಧಕ ಬಾಧಕಗಳ ಕುರಿತು ಸ್ಥಳೀಯರೊಂದಿಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದರು.

‘ಬಂದರು ನಿರ್ಮಾಣದಿಂದ ಸಾಂಪ್ರದಾಯಿಕ ಮೀನುಗಾರರು ಹಾಗೂ ಅದನ್ನು ನಂಬಿ ಜೀವನ ನಡೆಸುತ್ತಿರುವವರಿಗೆ ದೊಡ್ಡ ಹೊಡೆತ ಬೀಳಲಿದೆ. ಆದ್ದರಿಂದ ಯೋಜನೆಯನ್ನು ರದ್ದು ಮಾಡಬೇಕು. ಒಂದುವೇಳೆ, ಕಾಮಗಾರಿ ಆರಂಭಿಸಿದರೆ ಈ ಭಾಗದ ಎಲ್ಲ ಮೀನುಗಾರರು ಒಂದಾಗಿ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಹೋರಾಟ ಸಮಿತಿಯ ಅಧ್ಯಕ್ಷ ದೇವರಾಯ ಸೈಲ್, ಪ್ರಮುಖರಾದ ಶ್ರೀಪಾದ ಕೊಬ್ರೇಕರ್, ಆನಂದು ಸೈಲ್, ಪಾಂಡುರಂಗ ಮಾಜಾಳಿಕರ್, ಸಂತೋಷ ಕಾಣಕೋಣಕರ್, ಮುರಳಿ ಮಾಜಾಳಿಕರ್, ದತ್ತ, ರಂಜಿತ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT