ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಮತ ಎಣಿಕೆಯಲ್ಲಿ ಲೋಪವಾಗದಂತೆ ಎಚ್ಚರವಹಿಸಿ: ಗಂಗೂಬಾಯಿ

ಸಿಬ್ಬಂದಿ ತರಬೇತಿ ಕಾರ್ಯದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ
Published 28 ಮೇ 2024, 14:43 IST
Last Updated 28 ಮೇ 2024, 14:43 IST
ಅಕ್ಷರ ಗಾತ್ರ

ಕಾರವಾರ: ‘ಜೂನ್ 4 ರಂದು ನಡೆಯುವ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ ಎಣಿಕೆ ಸಂದರ್ಭದಲ್ಲಿ ತಪ್ಪುಗಳಾಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.

ಕುಮಟಾ ಪಟ್ಟಣದ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ಮತ ಎಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲೋಕಸಭೆ ಚುನಾವಣೆಯ ಅತ್ಯಂತ ಪ್ರಮುಖ ಹಂತವಾದ ಮತ ಎಣಿಕೆ ಕಾರ್ಯವು ವ್ಯವಸ್ಥಿತವಾಗಿ ನಡೆಯಬೇಕು. ಮತ ಎಣಿಕೆ ಸಿಬ್ಬಂದಿ ಯಾವುದೇ ಗೊಂದಲ, ಆತುರ, ಒತ್ತಡಗಳಿಗೆ ಒಳಗಾಗದೇ ಮತ ಎಣಿಕೆ ಕಾರ್ಯ ನಡೆಸಬೇಕು. ಎಣಿಕೆಯಲ್ಲಿ ತಪ್ಪು ಉಂಟಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದರು.

‘ಮತ ಎಣಿಕೆ ನಡೆಯುವ ಡಾ.ಎ.ವಿ ಬಾಳಿಗಾ ಕಾಲೇಜಿನ ಕೇಂದ್ರಕ್ಕೆ ಬೆಳಿಗ್ಗೆ 7ರೊಳಗೆ ಹಾಜರಿರಬೇಕು. ನಿಗದಿಪಡಿಸಿದ ಟೇಬಲ್ ಬಳಿ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಹಂತದ ಮತ ಎಣಿಕೆಯ ವಿವರಗಳನ್ನು ಕೇಂದ್ರದಲ್ಲಿ ಹಾಜರಿರುವ ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೆ ಯಾವುದೇ ಗೊಂದಲಕ್ಕೆ ಒಳಗಾಗದಂತೆ ತಿಳಿಸಬೇಕು’ ಎಂದರು.

‘ಅಂಚೆ ಮತ ಎಣಿಕೆ ವೇಳೆ ಮತಗಳನ್ನು ಸ್ಪಷ್ಟವಾಗಿ ಕ್ರೋಡಿಕರಿಸಿರಬೇಕು. ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಂದ ಯಾವುದೇ ಆಕ್ಷೇಪಣೆಗಳು ಬಾರದಂತೆ ಎಚ್ಚರವಹಿಸಬೇಕು. ಗೊಂದಲಗಳು ಕಂಡು ಬಂದಲ್ಲಿ ತಕ್ಷಣ ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು’ ಎಂದರು.

ತರಬೇತಿ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಇದ್ದರು. ಮೂವರು ಮಾಸ್ಟರ್ ಟ್ರೇನರ್ ಅಂಚೆ ಮತ್ತು ಮಾದರಿ ಇ.ವಿ.ಎಂ ಯಂತ್ರ ಬಳಸಿ ಮತ ಎಣಿಕೆ ಪ್ರಕ್ರಿಯೆ ಕುರಿತು ಸಿಬ್ಬಂದಿಗೆ ತರಬೇತಿ ನೀಡಿದರು.

- ಮತ ಎಣಿಕೆಗೆ 360 ಸಿಬ್ಬಂದಿ ನೇಮಕ ವಿದ್ಯುನ್ಮಾನ ಯಂತ್ರದ ಮತ ಎಣಿಕೆ ಪ್ರಕ್ರಿಯೆಗೆ ಒಟ್ಟು 360 ಸಿಬ್ಬಂದಿ ನೇಮಿಸಲಾಗಿದೆ. ಈ ಪೈಕಿ 24 ಜನರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದ್ದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಮಂದಿ ಮೇಲ್ವಿಚಾರಕರು ಸಹಾಯಕರು ಮತ್ತು ಮೈಕ್ರೊ ಆಬ್ಸರ್ವರ್ ನೇಮಿಸಲಾಗಿದೆ. ಅಂಚೆ ಮತ ಎಣೀಕೆಗೆ 100 ಮಂದಿಯನ್ನು ನೇಮಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಸರಾಸರಿ 17 ರಿಂದ 23 ಸುತ್ತುಗಳವರೆಗೆ ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT