ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ ಮುಲ್ಲೈ ಮುಗಿಲನ್ ವರ್ಗಾವಣೆ: ಪ್ರಭುಲಿಂಗ ಕವಳಿಕಟ್ಟಿ ನೂತನ ಜಿಲ್ಲಾಧಿಕಾರಿ

Last Updated 21 ಅಕ್ಟೋಬರ್ 2022, 16:14 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಶುಕ್ರವಾರ ಆದೇಶಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ನೇಮಿಸಲಾಗಿದೆ.

ಮುಲ್ಲೈ ಅವರನ್ನು ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಅವರು 2021ರ ಫೆ.15ರಂದು ಉತ್ತರ ಕನ್ನಡದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ತಮಿಳುನಾಡಿನ ಮಧುರೈನವರಾದ ಅವರು, 2013ನೇ ಬ್ಯಾಚ್‌ನ ಐ.ಎ.ಎಸ್ ಅಧಿಕಾರಿಯಾಗಿದ್ದಾರೆ. ಎಲ್ಲರ ಜೊತೆ ಸರಳವಾಗಿ ಬೆರೆಯುತ್ತಿದ್ದ ಅವರ ನಡವಳಿಕೆಯು ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಧಿಕಾರ ಸ್ವೀಕರಿಸಿದ ಆರಂಭದ ದಿನಗಳಿಂದಲೇ ಜಿಲ್ಲೆಯ ವಿವಿಧ ತಾಲ್ಲೂಕುಗಳು, ಕುಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡು ಸ್ಪಂದಿಸುವ ಕೆಲಸ ಮಾಡಿದ್ದರು.

ಜಿಲ್ಲೆಯಲ್ಲಿ ತಮ್ಮ ಕರ್ತವ್ಯ ಅವಧಿಯ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಉತ್ತರ ಕನ್ನಡದಲ್ಲಿ ಕೆಲಸ ಮಾಡಿದ್ದು ಅತ್ಯಂತ ಉತ್ತಮ ಅನುಭವ ನೀಡಿದೆ. ಭೌಗೋಳಿಕವಾಗಿ ವಿಶಾಲವಾಗಿರುವ ಇಲ್ಲಿ, ಹಲವು ಸವಾಲುಗಳ ನಡುವೆ ಕೆಲಸ ಮಾಡಬೇಕಾಯಿತು. ಕೋವಿಡ್, ಪ್ರವಾಹ, ಕೆಲವು ಚುನಾವಣೆಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದು ತೃಪ್ತಿ ತಂದಿದೆ’ ಎಂದರು.

‘ಜಿಲ್ಲೆಯ ಪ್ರವಾಸೋದ್ಯಮವನ್ನು ಶಿಸ್ತುಬದ್ಧವಾಗಿಸಲು ದೂರಗಾಮಿ ಯೋಜನೆಯನ್ನು ರೂಪಿಸಿದ್ದೆ. ಅವು ಫೂರ್ಣವಾಗಿ ಜಾರಿಯಾಗಲು ಸ್ವಲ್ಪ ಸಮಯ ಬೇಕಿದೆ. ಕರ್ನಾಟಕವೆಂದರೆ ಒಂದು ರಾಜ್ಯ, ಹಲವು ಜಗತ್ತು ಎಂಬಂತೆ ಉತ್ತರ ಕನ್ನಡ ಕೂಡ ‌ಒಂದು ಜಿಲ್ಲೆ ಹಲವು ಜಗತ್ತೇ ಆಗಿದೆ. ಇಲ್ಲಿ ಕೆಲಸ ಮಾಡಿದ ದಿನಗಳು ಸದಾ ಸ್ಮರಣೀಯ’ ಎಂದು ಹೇಳಿದರು.

ನೂತನ ಜಿಲ್ಲಾಧಿಕಾರಿಯಾಗಿ ನೇಮಕವಾಗಿರುವ ಪ್ರಭುಲಿಂಗ ಕವಳಿಕಟ್ಟಿ ಅವರು 2013ನೇ ಬ್ಯಾಚ್‌ನ ಐ.ಎ.ಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT