ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ: ಕಾಗೇರಿ

Published 13 ಜೂನ್ 2024, 4:53 IST
Last Updated 13 ಜೂನ್ 2024, 4:53 IST
ಅಕ್ಷರ ಗಾತ್ರ
ರಾಜ್ಯ ವಿಧಾನಸಭೆಗೆ ಸತತವಾಗಿ ಸದಸ್ಯರಾಗಿ ಆಯ್ಕೆ ಆಗುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿ ಸಂಸತ್ ಪ್ರವೇಶಿಸಿದ್ದಾರೆ. ಸಚಿವರಾಗಿ, ವಿಧಾನಸಭೆ ಅಧ್ಯಕ್ಷರಾಗಿ ಕೆಲಸ ಮಾಡಿ ಸುದೀರ್ಘ ಆಡಳಿತದ ಅನುಭವ ಹೊಂದಿರುವ ಅವರು ರಾಷ್ಟ್ರ ರಾಜಕಾರಣ ಪ್ರವೇಶಿಸಿರುವ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ ಉತ್ತರ ಕನ್ನಡ ಜಿಲ್ಲಾ ವರದಿಗಾರ ಗಣಪತಿ ಹೆಗಡೆ ಅವರೊಂದಿಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.
ಪ್ರ

ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದು ಮತ್ತು ಮೊದಲ ಯತ್ನದಲ್ಲಿಯೇ ಗೆಲುವು ಸಾಧಿಸಿರುವುದು ಏನನ್ನಿಸುತ್ತಿದೆ?

 ಚುನಾವಣೆ ನನಗೆ ಹೊಸ ಅನುಭವ ಏನಲ್ಲ. ಆದರೆ, ರಾಷ್ಟ್ರೀಯ ವಿಷಯಗಳ ಮೇಲೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ನಿಜಕ್ಕೂ ಹೊಸ ಅನುಭವವನ್ನು ನೀಡಿತು. ರಾಷ್ಟ್ರೀಯತೆಯನ್ನು ಪ್ರತಿಪಾದಿಸಿಕೊಂಡು ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಎಬಿವಿಪಿಯಲ್ಲಿ ಮುಂಚಿನಿಂದಲೂ ತೊಡಗಿಸಿಕೊಂಡು ಬಂದಿರುವ ನನಗೆ ಲೋಕಸಭೆ ಚುನಾವಣೆ ಹೊಸ ಉತ್ಸಾಹ ತುಂಬಿತ್ತು. ಗೆಲುವಿನ ನಿರೀಕ್ಷೆಯನ್ನು ಇಟ್ಟುಕೊಂಡೇ ಸ್ಪರ್ಧಿಸಿದ್ದೆ. ಗೆಲುವು ಅಚ್ಚರಿ ಅಲ್ಲದಿದ್ದರೂ ಸಂಸತ್‍ಗೆ ನನ್ನನ್ನು ಅಭೂತಪೂರ್ವ ಗೆಲುವಿನೊಂದಿಗೆ ಕಳುಹಿಸಿಕೊಟ್ಟ ಮತದಾರರಿಗೆ ನಾನೆಂದೂ ಆಭಾರಿ.

ಪ್ರ

ರಾಜ್ಯದಲ್ಲೇ ದೊಡ್ಡ ಅಂತರದ ಗೆಲುವು ಸಾಧಿಸಿದ್ದೀರಿ? ಇಷ್ಟು ದೊಡ್ಡ ಗೆಲುವಿನ ನಿರೀಕ್ಷೆ ಇತ್ತೆ?

ಗೆಲ್ಲುತ್ತೇನೆ ಎಂಬ ಖಚಿತತೆ ಇತ್ತು. ಚುನಾವಣೆ ಮುಗಿದ ಬಳಿಕ ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಚರ್ಚಿಸಿದ ಬಳಿಕ ಕನಿಷ್ಠ 2.50 ಲಕ್ಷ ಮತಗಳ ಅಂತರದಿಂದ ಗೆಲ್ಲಬಹುದು ಎಂಬ ನಿರೀಕ್ಷೆ ಇಟ್ಟಕೊಂಡಿದ್ದೆ. 3.78 ಲಕ್ಷ ಮತಗಳ ಅಂತರದ ಗೆಲವು ನನ್ನ ಆತ್ಮವಿಶ್ವಾಸವನ್ನು ಮತ್ತು ಜವಾಬ್ದಾರಿಯನ್ನು ಹೆಚ್ಚುವಂತೆ ಮಾಡಿದೆ.

ಪ್ರ

ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ಕ್ಷೇತ್ರದ ಅಭಿವೃದ್ಧಿಗೆ ಯಾವ ಯೋಜನೆ ತರುವಿರಿ? ಅಬಿವೃದ್ಧಿಗೆ ನಿಮ್ಮ ಮುನ್ನೋಟ ಏನು?

ಪ್ರಧಾನಿ ನರೇಂದ್ರ ಮೋದಿ ಸತತ ಎರಡು ಅವಧಿಯಿಂದ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಉತ್ತರ ಕನ್ನಡ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಈ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ. ಇಂತದ್ದೇ ಯೋಜನೆ ತರುವೆ ಎಂದು ಈಗಲೇ ನಿರ್ದಿಷ್ಟವಾಗಿ ಹೇಳಲಾಗದು. ಒಂದೊಂದು ಕ್ಷೇತ್ರಕ್ಕೂ ಒಂದೊಂದು ಯೋಜನೆಯ ಅಗತ್ಯವಿರುತ್ತದೆ. ಒಂದು ಯೋಜನೆ ಬಗ್ಗೆ ಮಾತನಾಡಿದರೆ ಉಳಿದ ಕ್ಷೇತ್ರ ನಿರ್ಲಕ್ಷಿಸುತ್ತಾರೆಂಬ ಭಾವನೆ ಬರುತ್ತದೆ. ಹಾಗಾಗಲು ಬಿಡುವುದಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪರಿಕಲ್ಪನೆ.

ಪ್ರ

ಮಾಜಿ ಸಂಸದ ಅನಂತಕುಮಾರ ಹೆಗಡೆ, ಶಾಸಕ ಶಿವರಾಮ ಹೆಬ್ಬಾರ ಸಹಕಾರ ಇಲ್ಲದೆಯೂ ಗೆಲುವು ಸಾಧಿಸಿದ್ದರ ಬಗ್ಗೆ ಏನು ಹೇಳ ಬಯಸುತ್ತೀರಿ?

ಬಿಜೆಪಿ ಸಿದ್ಧಾಂತ ಆಧಾರಿತ ಪಕ್ಷ. ವ್ಯಕ್ತಿ ಆಧಾರಿತ ಪಕ್ಷವಲ್ಲ. ಸಂಘಟನೆಯೇ ಶಕ್ತಿ ಎಂದು ನಂಬಿದವರು ನಾವು. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂದು ನಂಬಿದ ಕೋಟ್ಯಂತರ ಕಾರ್ಯಕರ್ತರಿದ್ದಾರೆ. ಕ್ಷೇತ್ರದ ಪ್ರತಿಭಾಗದಲ್ಲಿಯೂ ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿಯುವ ದೊಡ್ಡ ಕಾರ್ಯಕರ್ತರ ಪಡೆಯೇ ಇದೆ. ಎಲ್ಲರ ಸಾಂಘಿಕ ಪ್ರಯತ್ನದ ಫಲವಾಗಿ ನಾನು ಗೆದ್ದಿರುವೆ. ನಕಾರಾತ್ಮಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಪ್ರ

ಶಾಸಕರಾಗಬಲ್ಲ ನೂರಾರು ಕಾರ್ಯಕರ್ತರಿದ್ದಾರೆ

l ಶಿರಸಿ ಕ್ಷೇತ್ರದಿಂದ ಸತತವಾಗಿ ಪ್ರತಿನಿಧಿಸುತ್ತಿದ್ದ ನೀವು ರಾಷ್ಟ್ರ ರಾಜಕಾರಣ ಪ್ರವೇಶಿಸಿದ್ದೀರಿ, ಕ್ಷೇತ್ರಕ್ಕೆ ನಿಮ್ಮ ಬಳಿಕ ಉತ್ತರಾಧಿಕಾರಿ ಯಾರಾಗಬಹುದು?

ಶಿರಸಿ ಕ್ಷೇತ್ರದ ಶಾಸಕರಾಗಲು ಅರ್ಹತೆ ಹೊಂದಿದ ನೂರಾರು ಕಾರ್ಯಕರ್ತರು ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಯೋಗ್ಯರಾದವರನ್ನು ಪಕ್ಷದ ವರಿಷ್ಠರು ಗುರುತಿಸಿ ಅವಕಾಶ ಮಾಡಿಕೊಡುತ್ತಾರೆ. ಕ್ಷೇತ್ರದ ಕಾರ್ಯಕರ್ತರು ಜನರೊಂದಿಗೆ ನಾನು ಎಂದಿಗೂ ನಿಲ್ಲುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT