ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಕ್ಕಳ ಹೊಟ್ಟೆ ತಂಪಾಗಿಸಿದ ‘ಬಿಸಿಯೂಟ’

ಬರದಿಂದ ಕಂಗೆಟ್ಟ ರೈತರು, ಕೂಲಿ ಕಾರ್ಮಿಕರು ನಿರಾಳ
Published 20 ಏಪ್ರಿಲ್ 2024, 5:46 IST
Last Updated 20 ಏಪ್ರಿಲ್ 2024, 5:46 IST
ಅಕ್ಷರ ಗಾತ್ರ

ಶಿರಸಿ: ಬರದ ಸಂದರ್ಭದಲ್ಲಿ ಆರ್ಥಿಕವಾಗಿ ಸೋತಿರುವ ರೈತರು, ಕೂಲಿಕಾರರ ಮಕ್ಕಳಿಗೆ ಶಾಲೆಯಲ್ಲಿ ನೀಡುವ ಬಿಸಿಯೂಟ ವರದಾನವಾಗಿದೆ.

ರಾಜ್ಯ ಸರ್ಕಾರದ ಸೂಚನೆಯಂತೆ ಬರಪೀಡಿತ ಶಿರಸಿ ಶೈಕ್ಷಣಿಕ ಜಿಲ್ಲೆಯ ಆಯ್ದ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಆರಂಭಗೊಂಡಿದೆ. ಒಂದರಿಂದ ಹತ್ತನೇ ತರಗತಿವರೆಗಿನ ಬಹುತೇಕ ಮಕ್ಕಳು ರಜಾ ಅವಧಿಯಲ್ಲಿ ಬಿಸಿಯೂಟ ನಮಗೆ ಬೇಡ ಎಂದು ಪತ್ರ ನೀಡಿದ್ದರು. 9,572 ಮಕ್ಕಳು ನಿತ್ಯ ಬಿಸಿಯೂಟ ಬೇಕೆಂದು ಒಪ್ಪಿಗೆ ಪತ್ರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾತ್ರೆ-ಪರಿಕರ, ಆಹಾರ ಧಾನ್ಯಗಳೊಂದಿಗೆ ಬಿಸಿಯೂಟ ತಯಾರಿಕೆಗೆ ಒಟ್ಟೂ 232 ಅಡುಗೆ ಕೇಂದ್ರಗಳಲ್ಲಿ ಊಟ ವಿತರಿಸುತ್ತಿವೆ. ಭಾನುವಾರ ಹೊರತುಪಡಿಸಿ ಮೇ 28ರ ವರೆಗೆ ಈ ವ್ಯವಸ್ಥೆ ನಡೆಯಲಿದೆ.

ಪಿಎಂ ಪೋಷಣ್ ಶಕ್ತಿ ನಿರ್ಮಾಣ- ಅಕ್ಷರದಾಸೋಹ ಕಾರ್ಯಕ್ರಮದಡಿ ಎರಡು ತಿಂಗಳಿಗೆ ಲಭ್ಯವಾಗುವಷ್ಟು ಆಹಾರ ಧಾನ್ಯವನ್ನು ಆಯಾ ಕೇಂದ್ರಗಳಿಗೆ ರವಾನಿಸಲಾಗಿದೆ. ಅಕ್ಕಿ, ಗೋಧಿ, ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ ಪೂರೈಸಲಾಗಿದೆ. ಅಡುಗೆ ಕೇಂದ್ರಕ್ಕೆ ಒಬ್ಬರಂತೆ ಮುಖ್ಯ ಶಿಕ್ಷಕರು ಉಸ್ತುವಾರಿ ವಹಿಸುತ್ತಿದ್ದಾರೆ.  

‘ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮುಖ್ಯ ಅಡುಗೆಯವರು ಹಾಗೂ ಸಹಾಯಕಿಯರು ಸೇರಿ 375 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1-5ನೇ ತರಗತಿವರೆಗಿನ ಮಕ್ಕಳಿಗೆ ದಿನಕ್ಕೆ 100 ಗ್ರಾಂ ಅಕ್ಕಿ ಅಥವಾ ಗೋಧಿ, 20 ಗ್ರಾಂ ತೊಗರಿ ಬೇಳೆ, 5 ಗ್ರಾಂ ಎಣ್ಣೆ, 6 ರಿಂದ 10ನೇ ತರಗತಿಯವರಿಗೆ  150 ಗ್ರಾಂ ಅಕ್ಕಿ ಅಥವಾ ಗೋಧಿ, 30 ಗ್ರಾಂ ತೊಗರಿಬೇಳೆ, 7.5 ಗ್ರಾಂ ಎಣ್ಣೆ ನೀಡುವ ಸೂಚನೆ ಇದೆ. ಅದರನ್ವಯ ಮಕ್ಕಳಿಗೆ ಊಟ ಬಡಿಸಲಾಗುತ್ತಿದೆ’ ಎನ್ನುತ್ತಾರೆ ಶಿಕ್ಷಕರು.

‘ನೀರಿನ ಕೊರತೆ ಇರುವ ಶಾಲೆಗಳಿಗೆ ಕುಡಿಯಲು ಅಗತ್ಯ ನೀರು ಪೂರೈಸಲಾಗುತ್ತಿದೆ. ಅಡುಗೆ ಕೇಂದ್ರಗಳಿಗೆ ಸ್ವಚ್ಛತೆ, ಊಟದಲ್ಲಿ ಶುಚಿ ಮತ್ತು ರುಚಿಯನ್ನು ಆಯಾ ಮುಖ್ಯ ಶಿಕ್ಷಕರೇ ಪರೀಕ್ಷಿಸಿ ಮಕ್ಕಳಿಗೆ ನೀಡುತ್ತಿದ್ದಾರೆ. ಆಯಾ ಕೇಂದ್ರಗಳು ಮಕ್ಕಳಿಗೆ ನೀಡಿದ ಊಟದ ವಿವರ ದಾಖಲಿಸಲಾಗುತ್ತಿದೆ’ ಎಂದು ಮುಖ್ಯ ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

‘ಬರದ ಕಾರಣಕ್ಕೆ ಕೌಟುಂಬಿಕ ನಿರ್ವಹಣೆ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ನೀಡುತ್ತಿರುವುದು ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಗಳ ಮೇಲಿನ ಹೊರೆ ಸ್ವಲ್ಪ ಕಡಿಮೆಯಾದಂತಾಗಿದೆ’ ಎಂದು ದಾಸನಕೊಪ್ಪದ ಮಂಜುನಾಥ ಗೌಡ ಹೇಳಿದರು.

ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳ ಬರುವಿಕೆ ಇನ್ನಷ್ಟೆ ಚುರುಕಾಗಬೇಕಿದೆ. ಬೇರೆ ಜಿಲ್ಲೆ ತಾಲ್ಲೂಕಿನ ಮಕ್ಕಳೂ ತಮ್ಮ ಶಾಲೆಯ ಮಾಹಿತಿ ಪಾಲಕರ ಒಪ್ಪಿಗೆ ಪತ್ರದೊಂದಿಗೆ ಬಿಸಿಯೂಟ ಪಡೆಯಲು ಅವಕಾಶವಿದೆ
ಸದಾನಂದ ಸ್ವಾಮಿ ಅಕ್ಷರ ದಾಸೋಹ ಹಿರಿಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT