ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ಕಾದಿದೆ ಗ್ರಾಮೀಣ ಪಶು ಆಸ್ಪತ್ರೆ

ಪಶು ವೈದ್ಯಾಧಿಕಾರಿ ಸೇರಿದಂತೆ ಶೇ.78ರಷ್ಟು ಹುದ್ದೆ ಖಾಲಿ:ಬಾಗಿಲು ಮುಚ್ಚಿದ ಕಟ್ಟಡ
Published 24 ಜುಲೈ 2023, 4:52 IST
Last Updated 24 ಜುಲೈ 2023, 4:52 IST
ಅಕ್ಷರ ಗಾತ್ರ

ಕಾರವಾರ: ಕೃಷಿ, ತೋಟಗಾರಿಕೆ ಜೀವಾಳವಾಗಿರುವ ಜಿಲ್ಲೆಯಲ್ಲಿ ಹೈನುಗಾರಿಕೆ ಅವಲಂಬಿಸಿರುವ ಸಾವಿರಾರು ಕುಟುಂಬಗಳಿವೆ. ಪಶುಗಳು ಅನಾರೋಗ್ಯಕ್ಕೆ ತುತ್ತಾದರೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ಪರದಾಡುವ ಹೈನುಗಾರರು ಪ್ರೀತಿಯಿಂದ ಸಲುಹಿದ ಜಾನುವಾರು ಕಣ್ಣೆದುರು ಮೃತಪಡುವ ಸನ್ನಿವೇಶ ನೋಡಲಾಗದೆ ಹೈನುಗಾರಿಕೆಯಿಂದ ವಿಮುಖಗೊಳ್ಳುವ ಸ್ಥಿತಿ ಇದೆ.

ಹೈನುಗಾರಿಕೆ ಪ್ರಾಧಾನ್ಯತೆ ಇರುವ ಜಿಲ್ಲೆಯಲ್ಲಿ ಇಲಾಖೆಗೆ ಅಗತ್ಯದಷ್ಟು ಸಿಬ್ಬಂದಿ ನೇಮಕ ಮಾಡದೆ ಸರ್ಕಾರ ತೋರಿರುವ ನಿರ್ಲಕ್ಷ್ಯ ಹೈನುಗಾರರಲ್ಲಿ ಅಸಮಾಧಾನ ಸೃಷ್ಟಿಸಿದೆ. ನಾಲ್ಕು ಲಕ್ಷಕ್ಕಿಂತ ಹೆಚ್ಚು ಇದ್ದ ಜಾನುವಾರುಗಳ ಸಂಖ್ಯೆ ಈಗ ಮೂರು ಲಕ್ಷಕ್ಕೆ ಕುಸಿದಿದೆ. ಗ್ರಾಮೀಣ ಭಾಗದ ಪಶು ಚಿಕಿತ್ಸಾಲಯಗಳಂತೂ ಸದಾ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿರುತ್ತಿವೆ.

ಪ್ರತಿ ಎರಡು ಅಥವಾ ಮೂರು ಗ್ರಾಮ ಪಂಚಾಯ್ತಿಗೆ ಒಂದು ಪಶು ಚಿಕಿತ್ಸಾಲಯ ತೆರೆಯಲಾಗಿದ್ದರೂ ಅವುಗಳಲ್ಲಿ ವೈದ್ಯರೇ ಇರುತ್ತಿಲ್ಲ. ಜಿಲ್ಲೆಗೆ ಮಂಜೂಆಗಿರುವ 114 ಪಶು ವೈದ್ಯ ಹುದ್ದೆಯಲ್ಲಿ ಕೇವಲ 14 ಮಾತ್ರ ಭರ್ತಿಯಾಗಿದೆ. ಪಶು ಸಂಗೋಪನಾ ಇಲಾಖೆಗೆ ಅಗತ್ಯವಿರುವ 617 ಹುದ್ದೆಗಳ ಪೈಕಿ 484 ಹುದ್ದೆ ಖಾಲಿ ಇದೆ. ಇದರಿಂದ ಸಾರ್ವಜನಿಕರಿಗೆ ಸೇವೆ ಒದಗಿಸುವುದು ಇಲಾಖೆಗೆ ಸವಾಲಾಗಿದೆ.

ಶಿರಸಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ತಜ್ಞ ವೈದ್ಯರಿಲ್ಲದೆ ಡಿ ದರ್ಜೆ ಸಿಬ್ಬಂದಿ ಜಾನುವಾರು ಚಿಕಿತ್ಸಕರಾಗಿ ಮಾರ್ಪಟ್ಟಿದ್ದಾರೆ. 24 ಪಶು ಚಿಕಿತ್ಸಾ ಕೇಂದ್ರಗಳಿದ್ದು, ಕೇವಲ 3 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಸಿಬ್ಬಂದಿ ಕೊರತೆಯ ನಡುವೆಯೂ ಉತ್ತಮ ಚಿಕಿತ್ಸೆ ಕೊಡಲಾಗುತ್ತಿದೆ. ಆದರೂ ತುರ್ತು ಪರಿಸ್ಥಿತಿಯಲ್ಲಿ ಕಷ್ಟ’ ಎಂದು ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಗಜಾನನ ಹೇಳಿದರು.

ಅಂಕೋಲಾ ತಾಲ್ಲೂಕಿನ ಕೊಡ್ಲಗದ್ದೆ, ರಾಮನಗುಳಿ, ಹಲವಳ್ಳಿ, ಹಿಲ್ಲೂರ, ಅಡಿಗೋಣ, ಹಾರವಾಡ, ಅಗಸೂರ, ಬಾಸಗೋಡದಲ್ಲಿ ಪಶು ಆಸ್ಪತ್ರೆ ಇದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದ ಕಾರಣ ಪಶುಗಳು ಸಾವಿಗೀಡಾಗುತ್ತಿವೆ.

‘8 ಪಶು ಆಸ್ಪತ್ರೆಯಲ್ಲಿ ಡಿ ದರ್ಜೆಯ ಸಹಾಯಕರುಗಳಿಂದ ಕೆಲಸ ಮಾಡಿಸುವಂತಾಗಿದೆ. ಆಂಬುಲೆನ್ಸ್ ಇದ್ದರೂ ಚಾಲಕರಿಲ್ಲ’ ಎಂದು ಜಾನುವಾರಿ ಅಭಿವೃದ್ಧಿ ಅಧಿಕಾರಿ ಎಂ.ಎಂ.ಹೆಗಡೆ ಹೇಳುತ್ತಾರೆ.

ದಾಂಡೇಲಿ ತಾಲ್ಲೂಕಿನ ಪಶು ಆಸ್ಪತ್ರೆಗಳಿಗೆ ಸಕಾಲಕ್ಕೆ ಔಷಧ ಪೂರೈಕೆ ಆಗುತ್ತಿದ್ದರೂ ಸಿಬ್ಬಂದಿ ಕೊರತೆಯಿಂದ ಪಶು ಚಿಕಿತ್ಸೆ ಹಾಗೂ ಔಷದಿ ಹಂಚಿಕೆಗೆ ಸಮಸ್ಯೆ ಆಗುತ್ತಿದೆ. ಪಶು ಆಂಬುಲೆನ್ಸ್ ಅನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದ್ದು ಈವರೆಗೆ ಕಾರ್ಯನಿರ್ವಹಣೆ ಮಾಡುತ್ತಿಲ್ಲ.

‘ಕೇರವಾಡ, ಬಿರಂಪಾಲಿ, ವಿಟ್ನಾಳ, ಗೋಬರಾಳ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಪಶು ಆರೋಗ್ಯ ತಪಾಸಣೆ ಇಲಾಖೆ ವತಿಯಿಂದ ಮಾಡಲಾಗುತ್ತಿದೆ’ ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಡಾ.ಅರ್ಚನಾ ಸಿನ್ಹಾ.

‘ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತಿದೆ. ಗಂಭೀರ ಕಾಯಿಲೆ ಇದ್ದಾಗ ಆಂಬುಲೆನ್ಸ್ ಇಲ್ಲದ ಕಾರಣ ಸಮಸ್ಯೆ ಆಗುತ್ತಿದೆ’ ಎನ್ನುತ್ತಾರೆ ವಿಟ್ನಾಳ ಗ್ರಾಮದ ಹೈನುಗಾರ ವಿಠೋಬ.

ಹೊನ್ನಾವರ ತಾಲ್ಲೂಕಿನಲ್ಲಿ ವಿವಿಧ ಕಾರಣಗಳಿಂದ ಜಾನುವಾರು ಸಾಕಣೆಯಿಂದ ಜನರು ವಿಮುಖರಾಗುತ್ತಿದ್ದಾರೆ. ಅವುಗಳಲ್ಲಿ ಪಶು ಚಿಕಿತ್ಸೆಗೆ ಸೌಲಭ್ಯ ಕೊರತೆಯೂ ಒಂದು. ಅಂದಾಜಿನ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಹಸುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು 48 ಸಾವಿರದಿಂದ 38 ಸಾವಿರಕ್ಕೆ ಇಳಿಕೆಯಾಗಿದೆ.

ಪಶು ಆಸ್ಪತ್ರೆಗಳ ಸ್ಥಿತಿಯೂ ಶೋಚನೀಯವಾಗಿದ್ದು, ತಾಲ್ಲೂಕು ಪಶು ಆಸ್ಪತ್ರೆಗೆ ಸ್ವಂತ ಕಟ್ಟಡವಿಲ್ಲದೆ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. 10 ಪಶು ಚಿಕಿತ್ಸಾಲಯಗಳಿಗೆ ಒಬ್ಬರೇ ವೈದ್ಯರಿದ್ದಾರೆ. ಹಿಂದೆ ನೀಡಲಾಗಿದ್ದ ಆಂಬುಲೆನ್ಸ್ ಅನ್ನು ಗುತ್ತಿಗೆದಾರ ಕಂಪನಿ ವಾಪಸ್ ಪಡೆದುಕೊಂಡಿದೆ.

‘ವೈದ್ಯರು ಸೇರಿದಂತೆ 52 ಹುದ್ದೆಗಳ ಪೈಕಿ 42 ಹುದ್ದೆಗಳು ಖಾಲಿ ಇವೆ. ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇಲ್ಲ. ಆದರೆ ಸಿಬ್ಬಂದಿಗಳ ಕೊರತೆ ಹಾಗೂ ತಾಲ್ಲೂಕು ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ’ ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಡಾ.ಬಸವರಾಜ್.

ಕುಮಟಾ ತಾಲ್ಲೂಕಿನಲ್ಲಿ ಪಶು ಆಸ್ಪತ್ರೆಗಳ ಕೊರತೆ ಇರದಿದ್ದರೂ ಅನೋರೋಗ್ಯ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸೂಕ್ತ ಸಿಬ್ಬಂದಿಯೇ ಇಲ್ಲವಾಗಿದ್ದಾರೆ.‌

‘ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ಒಟ್ಟೂ 48 ಸಿಬ್ಬಂದಿ ಇರಬೇಕಿತ್ತು. ಆದರೆ ಶೇ.30 ರಷ್ಟು ಸಿಬ್ಬಂದಿ ಸೇರಿ ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಇಲಾಖೆಯೇ ತರಬೇತಿ ನೀಡಿದ ಮೈತ್ರಿ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಅವರಲ್ಲೂ ಹೆಚ್ಚಿನವರು ಕೆಲಸ ಬಿಟ್ಟು ಹೋಗುತ್ತಿದ್ದಾರೆ’ ಎಂದು ಹಿರಿಯ ಪಶು ವೈದ್ಯಾಧಿಕಾರಿ ಡಾ.ವಿಶ್ವನಾಥ ಹೆಗಡೆ ಮಾಹಿತಿ ನೀಡಿದರು.

–––––––––––––

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ವಿಶ್ವೇಶ್ವರ ಗಾಂವ್ಕರ್, ಪ್ರವೀಣಕುಮಾರ ಸುಲಾಖೆ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಮೋಹನ ದುರ್ಗೇಕರ್.

ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಅಂಕೋಲಾದ ಬಾಸಗೋಡದ ಪಶು ಚಿಕಿತ್ಸಾಲಯ.
ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಅಂಕೋಲಾದ ಬಾಸಗೋಡದ ಪಶು ಚಿಕಿತ್ಸಾಲಯ.
ಮುಂಡಗೋಡ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಹೆಗಡೆ ಗಾಯಗೊಂಡ ನವಿಲಿಗೆ ಚಿಕಿತ್ಸೆ ಕೊಡುತ್ತಿರುವುದು (ಸಂಗ್ರಹ ಚಿತ್ರ)
ಮುಂಡಗೋಡ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಹೆಗಡೆ ಗಾಯಗೊಂಡ ನವಿಲಿಗೆ ಚಿಕಿತ್ಸೆ ಕೊಡುತ್ತಿರುವುದು (ಸಂಗ್ರಹ ಚಿತ್ರ)
ದಾಂಡೇಲಿಯ ಗ್ರಾಮೀಣ ಭಾಗದಲ್ಲಿ ಪಶುವೈದ್ಯೆ ಡಾ.ಅರ್ಚನಾ ಸಿನ್ಹಾ ಜಾನುವಾರುಗಳ ಚರ್ಮರೋಗ ನಿವಾರಣೆಗೆ ಲಸಿಕೆ ವಿತರಿಸುತ್ತಿರುವುದು
ದಾಂಡೇಲಿಯ ಗ್ರಾಮೀಣ ಭಾಗದಲ್ಲಿ ಪಶುವೈದ್ಯೆ ಡಾ.ಅರ್ಚನಾ ಸಿನ್ಹಾ ಜಾನುವಾರುಗಳ ಚರ್ಮರೋಗ ನಿವಾರಣೆಗೆ ಲಸಿಕೆ ವಿತರಿಸುತ್ತಿರುವುದು

Quote - ಇಲಾಖೆಗೆ ಉಳಿದೆಲ್ಲ ಸೌಕರ್ಯಗಳಿದ್ದರೂ ಸಿಬ್ಬಂದಿ ಕೊರತೆಯೇ ಸವಾಲಾಗಿದೆ. ಅಗತ್ಯ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಡಾ.ರಾಕೇಶ್ ಬಂಗ್ಲೆ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ

Quote - ಬಾಸಗೋಡದಲ್ಲಿ ಪಶು ಆಸ್ಪತ್ರೆ ಇದ್ದರೂ ಜಾನುವಾರುಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಶೇಖರ ಗೌಡ ಬೆಳಂಬಾರ ರೈತ

Quote - ಗ್ರಾಮೀಣ ಭಾಗದ ಪಶು ಆಸ್ಪತ್ರೆಯಲ್ಲಿ ತಜ್ಞರಿಲ್ಲದೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಉಲ್ಬಣ ಆಗುತ್ತಿದೆ. ಸುರೇಶ ಪಟಗಾರ ಉಂಚಳ್ಳಿ ಹೈನುಗಾರ

Quote - ಪಶುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲದ್ದರಿಂದ ಹೈನುಗಾರಿಕೆ ನಡೆಸುವುದು ಕಷ್ಟಕರ ಸಂಗತಿ. ನಾರಾಯಣ ನಾಯ್ಕ ಬೊಗರಿಬೈಲ್ ಹೈನುಗಾರ

Cut-off box - ಔಷಧ ಇದ್ದೂ ಪ್ರಯೋಜನವಾಗುತ್ತಿಲ್ಲ ಯಲ್ಲಾಪುರ: ತಾಲ್ಲೂಕಿನಲ್ಲಿ ಇಬ್ಬರೇ ಪಶು ವೈದ್ಯರಿದ್ದು ಇಡೀ ತಾಲ್ಲೂಕಿನಾದ್ಯಂತ ಸಂಚರಿಸುವ ಅನಿವಾರ್ಯತೆಯಲ್ಲಿದ್ದಾರೆ. ಪಶು ಆಸ್ಪತ್ರೆಗಳಲ್ಲಿ ಔಷಧ ಸಂಗ್ರಹವಿದ್ದರೂ ಗ್ರಾಮೀಣ ಭಾಗದ ಹೆಚ್ಚಿನ ಪಶು ಚಿಕಿತ್ಸಾಲಯದಲ್ಲಿ ವೈದ್ಯರೇ ಲಭ್ಯವಿಲ್ಲದ ಕಾರಣ ಔಷಧಗಳ ಉಪಯೋಗ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಆಸ್ಪತ್ರೆಯಲ್ಲಿರುವ ಸಹಾಯಕರು ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಔಷಧ ನೀಡುತ್ತಾರೆ. ಕಿರವತ್ತಿ ಮದನೂರು ಭಾಗದಲ್ಲಿ ಪರಂಪರಾಗತವಾಗಿ ಹೈನುಗಾರಿಕೆ ಮಾಡುತ್ತಿರುವ ದನಗರಗೌಳಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಆದರೂ ಪಶುಗಳ ಆರೋಗ್ಯ ಸುಧಾರಣೆಗೆ ಸಕಾಲಕ್ಕೆ ಚಿಕಿತ್ಸೆ ಸಾಧ್ಯವಾಗದ ಪರಿಣಾಮ ಹೈನುಗಾರಿಕೆಯಲ್ಲಿ ಹೇಳುವಂತ ಬೆಳವಣಿಗೆ ಕಂಡಿಲ್ಲ. ‘ತಾಲ್ಲೂಕಿನಲ್ಲಿ ಪಶು ಚಿಕಿತ್ಸಾಲಯಗಳಿಗೆ ವೈದ್ಯರ ನೇಮಕಾತಿ ಆಗಬೇಕು. ಹೈನುಗಾರಿಕೆಗೆ ತೊಂದರೆಯಾಗದಂತೆ ಇಲಾಖೆ ಕ್ರಮವಹಿಸಬೇಕು’ ಎನ್ನುತ್ತಾರೆ ಆನಗೋಡ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಶಾಂತ ಸಭಾಹಿತ.

Cut-off box - 13 ಚಿಕಿತ್ಸಾಲಯಕ್ಕೆ ಒಬ್ಬನೇ ವೈದ್ಯ ಮುಂಡಗೋಡ: ಇಲ್ಲಿನ ಪಶು ಆಸ್ಪತ್ರೆಗೆ ನೀಡಿದ್ದ ಆಂಬುಲೆನ್ಸ್‌ ಹತ್ತು ತಿಂಗಳಿಂದ ಸಿಬ್ಬಂದಿ ಇಲ್ಲದೇ ನಿಂತು ಮರಳಿ ಹೋಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗ ಸೇರಿದಂತೆ 13 ಪಶು ಆಸ್ಪತ್ರೆಗಳಿದ್ದರೂ ಒಬ್ಬರೇ ವೈದ್ಯರು ಕೆಲಸ ಮಾಡುವಂತ ಪರಿಸ್ಥಿತಿಯಿದೆ. ಮೈನಳ್ಳಿ ಬಡ್ಡಿಗೇರಿ ಗ್ರಾಮಗಳಲ್ಲಿ ಹೊಸದಾಗಿ ಪಶು ಆಸ್ಪತ್ರೆ ಕಟ್ಟಿದ್ದರೂ ಉದ್ಘಾಟನೆ ಆಗಿಲ್ಲ. ಚರ್ಮಗಂಟು ಕಾಯಿಲೆ ಸೇರಿದಂತೆ ಇತರ ರೋಗಗಳು ಕಾಣಿಸಿಕೊಂಡಾಗ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ರೈತರು ಪರದಾಡಿದ್ದಾರೆ. ‘ಸಹಾಯಕ ವೈದ್ಯರು ಡಿ ದರ್ಜೆ ಸಿಬ್ಬಂದಿ ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಕ್ಕೆ ಚಿಕಿತ್ಸೆಗೆಂದು ತೆರಳಿದಾಗ ಆಸ್ಪತ್ರೆಯ ಬಾಗಿಲು ಹಾಕಿಕೊಂಡು ಹೋಗುವುದು ಅನಿವಾರ್ಯ’ ಎಂದು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಹೆಗಡೆ ಹೇಳಿದರು. 

Cut-off box - ಅಂಕಿ–ಅಂಶ ಪಶು ಸಂಗೋಪನಾ ಇಲಾಖೆ ಸಿಬ್ಬಂದಿ ಮಾಹಿತಿ ಹುದ್ದೆ;ಮಂಜೂರಾತಿ;ಖಾಲಿ ಸಹಾಯಕ ನಿರ್ದೇಶಕ;15;10 ಪಶುವೈದ್ಯ ಅಧಿಕಾರಿ;114;100 ಜಾನುವಾರು ಅಭಿವೃದ್ಧಿ ಅಧಿಕಾರಿ;12;05 ಹಿರಿಯ ಪಶು ವೈದ್ಯಕೀಯ ಪರೀಕ್ಷಕ;47;29 ಪಶು ವೈದ್ಯಕೀಯ ಪರೀಕ್ಷಕ;75;57 ಪಶುವೈದ್ಯಕೀಯ ಸಹಾಯಕ;70;44 ವಾಹನ ಚಾಲಕರು;13;12 ಡಿ–ಗ್ರುಪ್;236;215

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT